ವೃತ್ತಿನಿಷ್ಠೆ, ಶಿಸ್ತು ಮತ್ತು ಪ್ರಾಮಾಣಿಕತೆಗಳನ್ನು ರೂಢಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ – ಗೋಪಾಲ್ ಭಟ್

Spread the love

ವೃತ್ತಿನಿಷ್ಠೆ, ಶಿಸ್ತು ಮತ್ತು ಪ್ರಾಮಾಣಿಕತೆಗಳನ್ನು ರೂಢಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ – ಗೋಪಾಲ್ ಭಟ್

ಉಡುಪಿ: ಸರ್.ಎಂ. ವಿಶ್ವೇಶ್ವರಯ್ಯನವರು ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಬಂದ ಆದರ್ಶಗಳಾದ ಸಮಯಪ್ರಜ್ಞೆ ವೃತ್ತಿನಿಷ್ಠೆ, ಶಿಸ್ತು ಮತ್ತು ಪ್ರಾಮಾಣಿಕತೆಗಳನ್ನು ರೂಢಿಸಿಕೊಂಡಲ್ಲಿ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು , ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಆ್ಯಂಡ್ ಆರ್ಕಿಟೆಕ್ಟ್ಸ್ ಇದರ ಅಧ್ಯಕ್ಷರಾದ ಗೋಪಾಲ್ ಭಟ್ ಹೇಳಿದರು.

ಅವರು ಬಂಟಕಲ್ಲಿನ ಶ್ರೀ ಮಧ್ವವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಐಎಸ್ಟಿಇ ಘಟಕದ ಸಹಯೋಗದೊಂದಿಗೆ ಇಂಜಿನಿಯರ್ಸ್ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಾಯೋಗಿಕ ಹಿನ್ನಲೆಯೊಂದಿಗೆ ಅಧ್ಯಾಪನವನ್ನು ಮುಂದುವರಿಸಿದಲ್ಲಿ ವಿದ್ಯಾರ್ಥಿಗಳು ಮಹತ್ ಸಾಧನೆಯನ್ನು ಮಾಡಲು ಅನುಕೂಲವಾಗುತ್ತದೆ ಎಂದರು.

ಸಮಾರಂಭದ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಮಣಿ ಹಂದೆ ಇವರು ಮಾತನಾಡಿ ಸಂಸ್ಥೆಯ ವಾಸ್ತುಶಿಲ್ಪ ವಿನ್ಯಾಸದ ಅನುಭವವನ್ನು ಹಂಚಿಕೊಂಡು ಸಂಸ್ಥೆಯು ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್ ವಹಿಸಿದ್ದರು. ಪ್ರಾಂಶುಪಾಲರಾದ ಪ್ರೊ. ಡಾ. ತಿರುಮಲೇಶ್ವರ ಭಟ್ ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಡಾ. ಗಣೇಶ್ ಐತಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಿವಿಲ್ ವಿಭಾಗದ ಸೂರಜ್ ಕುಮಾರ್ ಮತ್ತು ರೋಶನ್ ಕೋಟ್ಯಾನ್ ಮುಖ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು. ಮೆಕ್ಯಾನಿಕಲ್ ವಿಭಾಗದ ಮಂಜುನಾಥ್ ಅವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ವಿದ್ಯುನ್ಮಾನ ವಿಭಾಗದ ಸೌಮ್ಯ ಭಟ್ ನಿರೂಪಿಸಿದರು.


Spread the love