ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಕೆ – ಶಾಸಕ ಜೆ.ಆರ್.ಲೋಬೊ

Spread the love

ವೆನ್ಲಾಕ್ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಕೆ – ಶಾಸಕ ಜೆ.ಆರ್.ಲೋಬೊ

ಮಂಗಳೂರು: ಸರ್ಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಸರ್ಕಾರ ಈ ವರ್ಷದಿಂದ ಪ್ರಾದೇಶಿಕ ಆಸ್ಪತ್ರೆಯೆಂದು ಮೇಲ್ದರ್ಜೆಗೇರಿಸಿ ಅಭಿವೃದ್ಧಿಗೆ 10 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಿದೆ ಎಂದು ಆಸ್ಪತ್ರೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಅವರು ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿ ಈ ಮೊದಲೇ ಆಸ್ಪತ್ರೆಯ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಮೇಲ್ದರ್ಜೆಗೇರಿಸಿದ ಮೇಲೆ 10 ಕೋಟಿ ಬಿಡುಗಡೆ ಮಾಡಿದ್ದು ಒಟ್ಟು 15 ಕೋಟಿ ರೂಪಾಯಿಯನ್ನು ಈ ಬಜೆಟ್ ನಲ್ಲಿ ಬಿಡುಗಡೆ ಮಾಡಿದೆ ಎಂದರು.

ಮೇಲ್ದರ್ಜೆಗೇರಿಸಿದ ಕಾರಣಕ್ಕೆ 200 ಹೆಚ್ಚುವರಿ ಹಾಸಿಗೆಯನ್ನು ಒದಗಿಸಲಾಗಿದ್ದು ಈ ಮೂಲಕ ಈಗ 1000 ಹಾಸಿಗೆಯನ್ನು ಆಸ್ಪತ್ರೆ ಹೊಂದಿದ್ದು ಅದಕ್ಕಾಗಿ ಹೆಚ್ಚುವರಿಯಾಗಿ ಕಟ್ಟಡ ನಿರ್ಮಿಸಲು ಇಂಜಿನಿಯರಿಂಗ್ ವಿಭಾಗ ಕಾರ್ಯೋನ್ಮುಖವಾಗಿದೆ ಎಂದರು.

ಆಯುಷ್ ಇಲಾಖೆ 50 ಹಾಸಿಗೆ ಸಾಮರ್ಥ್ಯದ ಸಂಯುಕ್ತ ಆಸ್ಪತ್ರೆ ನಿರ್ಮಾಣಕ್ಕಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ನಿವೇಶನಕ್ಕಾಗಿ ಮನವಿ ಸಲ್ಲಿಸಿದ್ದು ಆಸ್ಪತ್ರೆಯಲ್ಲಿ ಲಭ್ಯವಿರುವ ಲಾಜಿಸ್ಟಿಕ್ ಎದುರಿನಲ್ಲಿ ಇರುವ ಖಾಲಿ ಸ್ಥಳವನ್ನು ಗುರುತಿಸಲಾಗಿದೆ ಎಂದು ಶಾಸಕ ಜೆ.ಆರ್.ಲೋಬೊ ವಿವರಿಸಿದರು.

ಆರ್ ಎಪಿಸಿಸಿ ವಿಭಾಗದ ಮಕ್ಕಳ ಆಸ್ಪತ್ರೆಯನ್ನು ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಯಂತೆಯೇ ಮೇಲ್ದರ್ಜೆಗೇರಿಸಲು 3 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಈ ಹಣದಲ್ಲಿ 1 ಕೋಟಿ ರೂಪಾಯಿಯನ್ನು ಉಪಕರಣ ಖರೀದಿಸಲು ಹಾಗೂ 2 ಕೋಟಿ ರೂಪಾಯಿಯನ್ನು ಕಟ್ಟಡ ನಿರ್ವಹಣೆಗೆ, ಔಷಧಿ, ಕನ್ ಸುಮೇಬಲ್ ಹಾಗೂ ಆವರ್ತಕ ವೆಚ್ಚಕ್ಕಾಗಿ ಉಪಯೋಗಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಪೋರೇಟರ್ ಎ.ಸಿ.ವಿನಯರಾಜ್, ಜಿಲ್ಲಾ ಸರ್ಜನ್ ಡಾ.ರಾಜೇಶ್ವರಿ ಸಹಿತ ಪ್ರಮುಖರಿದ್ದರು.


Spread the love