ಮಂಗಳೂರು: ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ವಾರಸುದಾರರಿಲ್ಲದ ಮೃತದೇಹಗಳನ್ನು ನಂದಿಗುಡ್ಡೆ ಸ್ಮಶಾನದಲ್ಲಿ ದ. ಕ. ಜಿಲ್ಲಾ ಮಾನವ ಹಕ್ಕುಗಳ ಭಾರತೀಯ ಒಕ್ಕೂಟ ಘಟಕ `ಪ್ರಜಾಧರ್ಮ’ ಕಾರ್ಯಕ್ರಮದಡಿ ಗೌರವದಿಂದ ಅಂತ್ಯಕ್ರಿಯೆ ನೆರವೇರಿಸಿತು.
ನಂದಿಗುಡ್ಡೆ ಸ್ಮಶಾನದಲ್ಲಿ ಹಿಂದೂ ಧರ್ಮಕ್ಕೆ ಸೇರಿದ 8 ಅನಾಥ ಮೃತದೇಹಕ್ಕೆ ಹಾಗೂ ಬದ್ರಿಯಾ ಜುಮ್ಮಾ ಮಸೀದಿ ಆವರಣದಲ್ಲಿ ಮುಸ್ಲಿಂ ಧರ್ಮಕ್ಕೆ ಸೇರಿದ 1 ಮೃತದೇಹಕ್ಕೆ ಶನಿವಾರ ಅಂತ್ಯ ಸಂಸ್ಕಾರ ಮಾಡಲಾಯಿತು.
ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ವಾರಸುದಾರರಿಲ್ಲದ ಅನಾಥ ಶವಗಳಿಗೆ ಗೌರವದಿಂದ ಅಂತ್ಯಕ್ರಿಯೆ ನಡೆದಿದ್ದು ಮಾನವ ಹಕ್ಕುಗಳ ಭಾರತೀಯ ಒಕ್ಕೂಟ ಘಟಕದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಯಿತು. ಇದೇ ಸಂದರ್ಭ ಸಂಘಟನೆಯು ಅನಾಥ ಶವಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಮನವಿ ಮಾಡಿತು.
ಈ ಸಂದರ್ಭ ಹನೀಫ್ ಸಾಹೇಬ್ ಪಾಜೆಪಳ್ಳ, ವಿಜಯ ಪ್ರಸಾದ್ ಆಳ್ವ, ಗಂಗಾಧರ ಶೆಟ್ಟಿ, ಚಂದ್ರಶೇಖರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.