ವೆನ್‍ಲಾಕ್ ಕಾಮಗಾರಿಗಳನ್ನು ತ್ವರಿತ ಪೂರ್ಣಗೊಳಿಸಲು ಡಿಸಿ ಮುಲ್ಲೈ ಮುಗಿಲನ್ ಸೂಚನೆ
ಮಂಗಳೂರು: ವೆನ್‍ಲಾಕ್ ಆಸ್ಪತ್ರೆಯಲ್ಲಿ ನಿರ್ಮಾಣವಾಗಿರುವ ಸರ್ಜಿಕಲ್ ಬ್ಲಾಕ್‍ನಲ್ಲಿ ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿರುವ ಬಗ್ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಅವರು ಬುಧವಾರ ನಗರದ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಹಲವು ವರ್ಷಗಳು ಕಳೆದರೂ ಸರ್ಜಿಕಲ್ ಬ್ಲಾಕ್ ಕಾಮಗಾರಿ ನಡೆಯುತ್ತಿದೆ. ಈ ಕಟ್ಟಡವು ಪೂರ್ಣಗೊಳ್ಳಲು ಉಳಿದಿರುವ ವ್ಯವಸ್ಥೆಗಳನ್ನು ಆದಷ್ಟು ಬೇಗ ಮಾಡಿಕೊಂಡು, ಕಾಮಗಾರಿಗಳನ್ನು ಪೂರ್ಣಗೊಳಿಸಿ, ತ್ವರಿತವಾಗಿ ಸೇವೆಯನ್ನು ಒದಗಿಸಬೇಕು ಎಂದು ಅವರು ತಿಳಿಸಿದರು. ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಮತ್ತು ಇಂಜಿನಿಯರ್ ಅವರಿಗೆ ಉಳಿದಿರುವ ಕೆಲಸ ಕಾರ್ಯಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು ಎಂದು ಆದೇಶಿಸಿದರು.
ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ತ್ಯಾಜ್ಯ ಘಟಕದ ದುರಸ್ಥಿ ಕಾರ್ಯ ಪೂರ್ಣಗೊಂಡಿದ್ದು, ನಿರ್ವಹಣೆಗೆ ಟೆಂಡರ್ ಕರೆಯುವಂತೆ ಅವರು ಸೂಚಿಸಿದರು. ಆಸ್ವತ್ರೆಗೆ ಬರುವ ಎಲ್ಲಾ ರೋಗಿಗಳ ವೈಯಕ್ತಿಕ ದಾಖಲೆಗಳು, ರೋಗಿಯ ಖಾಯಿಲೆಯನ್ನು ಒಳಗೊಂಡ ಮಾಹಿತಿ ಹಾಗೂ ಚಿಕಿತ್ಸೆಯ ವಿವರಗಳ ಬಗ್ಗೆ ದಾಖಲೆಯನ್ನು ತಯಾರು ಮಾಡಬೇಕು ಮತ್ತು ಅದನ್ನು ಒದಗಿಸುವಂತೆ ಸೂಚಿಸಿದರು.
ಬೇಸಿಗೆಯಲ್ಲಿ ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತೆ ವಹಿಸಿ ಕ್ರಮ ಕೈಗೊಳ್ಳುವಂತೆ. ಹಾಗೂ ಅಗತ್ಯ ಬಿದ್ದಲ್ಲಿ ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಗೆ ಹೊಸದಾಗಿ ಬೋರ್ ವೆಲ್ ಕೊರೆಸುವ ಕಾಮಗಾರಿಯನ್ನು ಶೀಘ್ರದಲ್ಲೇ ಪ್ರಾರಂಭಿಸುವಂತೆ ಇಂಜಿನಿಯರ್‍ಗೆ ಅವರು ಸೂಚಿಸಿದರು.
ಸಭೆಯಲ್ಲಿ ವೆನ್‍ಲಾಕ್ ಅಧೀಕ್ಷಕಿ ಜೆಸಿಂತಾ ಡಿಸೋಜಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಹೆಚ್.ಆರ್. ತಿಮ್ಮಯ್ಯ, ಸ್ಮಾರ್ಟ್‍ಸಿಟಿ ಎಂಡಿ ರಾಜು.ಕೆ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯ ಬಳಿಕ ಜಿಲ್ಲಾಧಿಕಾರಿಗಳು, ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಎರಡು ವಾರಗಳಿಂದ ನೀರು ಸರಿಯಾಗಿ ಸರಬರಾಜು ಆಗದೇ ಸಮಸ್ಯೆ ಆಗುತ್ತಿರುವ ಬಗ್ಗೆ ದೂರನ್ನು ಆಲಿಸಿ ಖುದ್ಧಾಗಿ ನೀರು ಸರಬರಾಜು ಆಗುತ್ತಿರುವ ಆಸ್ಪತ್ರೆಯ ಜಾಗಕ್ಕೆ ಪಾಲಿಕೆಯ ಆಯುಕ್ತರೊಂದಿಗೆ ಭೆಟಿ ನೀಡಿ ವೀಕ್ಷಿಸಿ ಇಂಜಿನಿಯರ್ ಮತ್ತು ಆಸ್ಪತ್ರೆಯ ನಿರ್ವಹಣಕಾರರಿಗೆ ಸಮಸ್ಯೆಯ ಬಗ್ಗೆ ಗಮನ ಹರಿಸಿ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.