ವೆನ್‍ಲಾಕ್ ಅಭಿವೃದ್ಧಿಗೆ ಮಾಸ್ಟರ್‍ಪ್ಲಾನ್: ಡಿಸಿ ಸೂಚನೆ
ಮ0ಗಳೂರು :ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ ಸೂಚಿಸಿದ್ದಾರೆ.
ಅವರು ಗುರುವಾರ ನಡೆದ ವೆನ್‍ಲಾಕ್ ಆರೋಗ್ಯ ರಕ್ಷಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೆನ್‍ಲಾಕ್ ಅಭಿವೃದ್ಧಿಗೆ ರಾಜ್ಯ ಸರಕಾರವು 2016-17ರಲ್ಲಿ ರೂ. 5 ಕೋಟಿ ಹಾಗೂ 2017-18ರ ರಾಜ್ಯ ಬಜೆಟ್‍ನಲ್ಲಿ ರೂ. 10 ಕೋಟಿ ಅನುದಾನ ನೀಡಿದೆ. ಈ ಅನುದಾನ ಸಮರ್ಪಕ ಬಳಕೆಗೆ ಹಾಗೂ ಕೆಎಂಸಿ ವತಿಯಿಂದ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳನ್ನು ಕ್ರೋಢೀಕರಿಸಿ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಅಗತ್ಯವಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಮಹಾನಗರಪಾಲಿಕೆ, ಮೆಸ್ಕಾಂ ಮತ್ತು ಕೆಎಂಸಿ ಒಳಗೊಂಡ ತಾಂತ್ರಿಕ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಕೆಎಂಸಿ ವತಿಯಿಂದ ವೆನ್‍ಲಾಕ್ ಆವರಣದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ವಿಂಗ್ ಸ್ಥಾಪನೆಯಾಗಲಿದೆ. ಇದಲ್ಲದೇ, ಈಗಿನ ತುರ್ತು ಚಿಕಿತ್ಸಾ ಕಟ್ಟಡ, ಟ್ರಾಮಾ ಕಟ್ಟಡವನ್ನು ಪನರ್ ನಿರ್ಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ವೆನ್‍ಲಾಕ್ ನ ಈಗಿನ ಚಿತ್ರಣ ಹಾಗೂ ಹೊಸ ಸಮಗ್ರವಾದ ಚಿತ್ರಣವನ್ನು ಮಾಸ್ಟರ್‍ಪ್ಲಾನ್‍ನಲ್ಲಿ ಸಿದ್ಧಪಡಿಸಿ ಶೀಘ್ರದಲ್ಲೇ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಕೆಎಂಸಿ ಸೂಪರ್ ಸ್ಪೆಷಾಲಿಟಿ ವಿಂಗ್ ಸ್ಥಾಪನೆಗೆ ಒಡಂಬಡಿಕೆಗೆ ಅನುಮೋದನೆ ನೀಡಲಾಗಿದೆ ಎಂದರು.
ವೆನ್‍ಲಾಕ್ ಆಸ್ಪತ್ರೆಯ ಈಗಿನ ಪ್ರವೇಶ ದ್ವಾರವನ್ನು ಸಾರ್ವಜನಿಕರನ್ನು ಆಕರ್ಷಿಸುವಂತೆ ಪುನರ್ ರೂಪಿಸಬೇಕಿದೆ, ಮಕ್ಕಳ ಆಸ್ಪತ್ರೆಯ ಆವರಣದಲ್ಲಿ ಕಿರು ಉದ್ಯಾನವನ, ಆಟದ ವಿಭಾಗವನ್ನು ಸ್ಥಾಪಿಸಬೇಕು. ಮಕ್ಕಳ ಆಸ್ಪತ್ರೆಯನ್ನು ಪ್ರಾದೇಶಿಕ ಮಕ್ಕಳ ಆರೋಗ್ಯ ಸಂಸ್ಥೆಯನ್ನಾಗಿ ಮೇಲ್ದರ್ಜೆಗೇರಿಸಲು ರಾಜ್ಯ ಸರಕಾರ 3 ಕೋಟಿ ರೂ. ಅನುದಾನ ಪ್ರಕಟಿಸಿದೆ. ಇದನ್ನು ಸಮರ್ಪಕವಾಗಿ ಬಳಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಲೇಡಿಘೋಷನ್ ಆಸ್ಪತ್ರೆಯ ನೂತನ ಕಟ್ಟಡದ ಬಾಕಿ ಉಳಿದ ಕಾಮಗಾರಿಗಳಿಗೆ ಆರೋಗ್ಯ ರಕ್ಷಾ ಸಮಿತಿಯಿಂದಲೇ ಒಂದು ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಬಾಕಿ ಉಳಿದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಮುಂದಿನ ಒಂದು ತಿಂಗಳೊಳಗೆ ಉದ್ಘಾಟನೆಗೆ ಸಜ್ಜುಗೊಳಿಸಲು ಡಾ.ಕೆ.ಜಿ.ಜಗದೀಶ ಸೂಚಿಸಿದರು.
ಸಭೆಯಲ್ಲಿ ವೆನ್‍ಲಾಕ್ ಅಧೀಕ್ಷಕಿ ಡಾ.ರಾಜೇಶ್ವರಿದೇವಿ, ಲೇಡಿಘೋಷನ್ ಅಧೀಕ್ಷಕಿ ಡಾ. ಸವಿತಾ ಮತ್ತಿತರರು ಇದ್ದರು.