ವೆನ್‍ಲಾಕ್ ಆಸ್ಪತ್ರೆ ಇನ್ನಷ್ಟು ಉನ್ನತಿಗೇರಿಸಲು ಸಚಿವ ರೈ ಸೂಚನೆ

Spread the love

ವೆನ್‍ಲಾಕ್ ಆಸ್ಪತ್ರೆ ಇನ್ನಷ್ಟು ಉನ್ನತಿಗೇರಿಸಲು ಸಚಿವ ರೈ ಸೂಚನೆ

ಮ0ಗಳೂರು: ಜಿಲ್ಲಾ ವೆನ್‍ಲಾಕ್ ಆಸ್ಪತ್ರೆಯಲ್ಲಿ ದೊರಕುವ ಚಿಕಿತ್ಸೆ ಹಾಗೂ ಸೌಲಭ್ಯಗಳನ್ನು ಇನ್ನಷ್ಟು ಉತ್ತಮಗೊಳಿಸಬೇಕು ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸೂಚಿಸಿದ್ದಾರೆ.

ಅವರು ಶನಿವಾರ ವೆನ್‍ಲಾಕ್ ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೆನ್‍ಲಾಕ್‍ನಲ್ಲಿ ದೊರಕುತ್ತಿರುವ ಉನ್ನತ ಚಿಕಿತ್ಸೆಯಿಂದಾಗಿ ನೆರೆರಾಜ್ಯ ಹಾಗೂ ಅನ್ಯ ಜಿಲ್ಲೆಗಳಿಂದಲೂ ಹೆಚ್ಚಿನ ರೋಗಿಗಳು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಚಿಕಿತ್ಸಾ ಸೌಲಭ್ಯಗಳನ್ನು ಇನ್ನಷ್ಟು ಉನ್ನತ ದರ್ಜೆಗೇರಿಸಬೇಕು. ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ವೆನ್‍ಲಾಕ್‍ನಲ್ಲಿ ಚಿಕಿತ್ಸೆ ಪಡೆಯುವಂತಾಗಬೇಕು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, ಎಷ್ಟೇ ಒತ್ತಡವಿದ್ದರೂ, ವೆನ್‍ಲಾಕ್‍ನಲ್ಲಿ ರೋಗಿಗಳ ಚಿಕಿತ್ಸೆಯಲ್ಲಿ ಕೊರತೆಯುಂಟಾಗದಂತೆ ನಿರ್ವಹಿಸಬೇಕಾಗಿದೆ ಎಂದು ಹೇಳಿದರು.

ಸಭೆಯಲ್ಲಿ ವೆನ್‍ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿದೇವಿ ಅವರು, 2016 ರಲ್ಲಿ ವೆನ್‍ಲಾಕ್‍ನಲ್ಲಿ 21097 ಒಳರೋಗಿ ಹಾಗೂ 2.56 ಲಕ್ಷ ಹೊರರೋಗಿಗಳು ಚಿಕಿತ್ಸೆ ಪಡೆದಿರುತ್ತಾರೆ. 5234 ದೊಡ್ಡ ಶಸ್ತ್ರಚಿಕಿತ್ಸೆ ಹಾಗೂ 2118 ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. ಆಸ್ಪತ್ರೆಯ ವಿವಿಧ ಖಾತೆಗಳಲ್ಲಿ ಒಟ್ಟು 5.48 ಕೋಟಿ ರೂ ಜಮೆ ಇದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಎಂ.ಆರ್.ರವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್, ಲೇಡಿಘೋಷನ್ ಅಧೀಕ್ಷಕಿ ಡಾ.ಸವಿತಾ, ಮಹಾನಗರಪಾಲಿಕೆ ಜಂಟೀ ಆಯುಕ್ತ ಗೋಕುಲದಾಸ್ ನಾಯಕ್ ಮತ್ತಿತರರು ಇದ್ದರು.


Spread the love