ವೆನ್‍ಲಾಕ್ ಜಾಗ ಒತ್ತುವರಿ: ತೆರವಿಗೆ ಡಿಸಿ ಸೂಚನೆ

Spread the love

ವೆನ್‍ಲಾಕ್ ಜಾಗ ಒತ್ತುವರಿ: ತೆರವಿಗೆ ಡಿಸಿ ಸೂಚನೆ

ಮ0ಗಳೂರು :  ನಗರದ ಅತ್ತಾವರ ಗ್ರಾಮದಲ್ಲಿರುವ ವೆನ್‍ಲಾಕ್ ಆಸ್ಪತ್ರೆಗೆ ಸೇರಿದ ಭೂಮಿಯನ್ನು ಕೆಲವು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿರುವುದು ಕಂಡುಬಂದಿದ್ದು, ಕೂಡಲೇ ಇದನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಸೂಚಿಸಿದ್ದಾರೆ.

ಅವರು ಶನಿವಾರ ವೆನ್‍ಲಾಕ್ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒತ್ತುವರಿ ತೆರವಿಗೆ ಕೂಡಲೇ ಕ್ರಮ ಕೈಗೊಂಡು, ಭೂಮಿಯ ಸುತ್ತಲೂ ತಡೆಗೋಡೆ ನಿರ್ಮಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಕೆಎಂಸಿ ವಿರುದ್ಧ ಅಸಮಾಧಾನ: ವೆನ್‍ಲಾಕ್ ಆಸ್ಪತ್ರೆಯಲ್ಲಿ ಕೆಎಂಸಿ ಆಸ್ಪತ್ರೆಗೆ ಮತ್ತೆ 33 ವರ್ಷಗಳ ಕ್ಲಿನಿಕಲ್ ಸೇವೆ ಮುಂದುವರಿಸುವ ಬಗ್ಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಾಗಿತ್ತು. ಇದರ ಅನುಸಾರ  ಕೆಎಂಸಿ ವತಿಯಿಂದ ವೆನ್‍ಲಾಕ್ ಆವರಣದಲ್ಲಿ ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಿಸಿಕೊಡುವುದಾಗಿ ತಿಳುವಳಿಕೆ ಪತ್ರದಲ್ಲಿ ತಿಳಿಸಲಾಗಿತ್ತು. ಆದರೆ ಒಪ್ಪಂದಕ್ಕೆ ಸಹಿ ಹಾಕಿ ಹಲವು ತಿಂಗಳುಗಳೇ ಕಳೆದರೂ ಕೆಎಂಸಿ ಇನ್ನೂ ಸೂಪರ್ ಸ್ಪೆಷಾಲಿಟಿ ಬ್ಲಾಕ್ ನಿರ್ಮಾಣದ ಯಾವುದೇ ಪ್ರಕ್ರಿಯೆ ನಡೆಸಿಲ್ಲ ಎಂದು ಜಿಲ್ಲಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವೆನ್ಲಾಕ್‍ನಲ್ಲಿ ಮೂಲಭೂತ ಸೌಕರ್ಯ ಉತ್ತಮಗೊಳಿಸಲು ಕೆಎಂಸಿ ಸಂಸ್ಥೆಯು ಸೂಕ್ತವಾಗಿ  ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರಕಾರದ ಗಮನಕ್ಕೆ ತರಲು ಅವರು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸೂಚಿಸಿದರು.

ವೆನ್‍ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದೊಡ್ಡ ಮೊತ್ತದ ಅನುದಾನ ದಾನ ರೂಪದಲ್ಲಿ ನೀಡಲು ಹಲವು ಖಾಸಗೀ ಸಂಸ್ಥೆಗಳು ಮುಂದೆ ಬಂದಿವೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ವೆನ್‍ಲಾಕ್ ಆಸ್ಪತ್ರೆಯಲ್ಲಿ ಖಾಲಿ ಇರುವ ತಜ್ಞವೈದ್ಯರ ಹುದ್ದೆಗಳನ್ನು ಗುತ್ತಿಗೆಯಾಧಾರಿತವಾಗಿ ನೇಮಿಸಲು ಅವರು ಸೂಚಿಸಿದರು.

ನಗರದ ಹಂಪನಕಟ್ಟೆಯಿಂದ ವೆನ್‍ಲಾಕ್ ಆವರಣವಾಗಿ ರೈಲ್ವೇ ನಿಲ್ದಾಣಕ್ಕೆ ಹೋಗುವ ರಸ್ತೆಯನ್ನು ಸ್ಮಾರ್ಟ್‍ಸಿಟಿ ಅಡಿಯಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಸಿಕಾಂತ್ ಸೆಂಥಿಲ್ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ವೆನ್ಲಾಕ್ ಅಧೀಕ್ಷಕಿ ಡಾ. ರಾಜೇಶ್ವರಿ ದೇವಿ, ಲೇಡಿಗೋಷನ್ ಅಧೀಕ್ಷಕಿ ಡಾ. ಸವಿತಾ, ಡಾ. ಸಿಕಂದರ್ ಪಾಶಾ, ಕೆಎಂಸಿ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love