ವೆನ್ಲಾಕ್ ನರ್ಸಿಂಗ್ ವಿಧ್ಯಾರ್ಥಿಗಳ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳಿಗೆ ಎಸ್ಎಫ್ಐನಿಂದ ಮನವಿ
ಮಂಗಳೂರು: ವೆನ್ಲಾಕ್ ನರ್ಸಿಂಗ್ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಸಲಿ ಜಿಲ್ಲಾಧಿಕಾರಿಗಳಿಗೆ ಎಸ್ಎಫ್ಐನಿಂದ ಬುಧವಾರ ವೆನ್ಲಾಕ್ ಡಿಎಂಓ ಮತ್ತು ಅಪರ ಜಿಲ್ಲಾಧಿಕಾರಗಳ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಎಸ್ಎಫ್ಐ ನಿಯೋಗ ಮೂಲಕ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿರುವ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯ ಆಡಳಿತಕ್ಕೊಳಪಟ್ಟಿರುವ ಏಕೈಕ ಸರ್ಕಾರಿ ಶುಶ್ರೂಷಾ ಶಾಲೆಯಲ್ಲಿ 132 ವಿದ್ಯಾರ್ಥಿಗಳಿದ್ದು ಈ ವಿದ್ಯಾರ್ಥಿಗಳು ಅನೇಕ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಈ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಯಾವುದೇ ರೀತಿಯ ವಾತಾವರಣವಿರುವುದಿಲ್ಲ. ವಿದ್ಯಾರ್ಥಿಗಳು ತಂಗಿರುವ ವಿದ್ಯಾರ್ಥಿ ನಿಲಯವು ಅನೇಕ ದುರಾವಸ್ಥೆಗಳಿಂದ ಕೂಡಿದ್ದು 128 ವಿದ್ಯಾರ್ಥಿನಿಯರಿರುವ ವಿದ್ಯಾರ್ಥಿನಿಲಯದಲ್ಲಿ ಭದ್ರತಾ ಸಿಬ್ಬಂದಿ ಇಲ್ಲದಿರುವುದು ವಿದ್ಯಾರ್ಥಿನಿಯರಲ್ಲಿ ಅಸುರಕ್ಷತೆಯನ್ನು ಉಂಟುಮಾಡಿದೆ. ಅಲ್ಲದೆ ಹಾಸ್ಟೇಲ್ನಲ್ಲಿ ವಾರ್ಡನ್ನ ಕೊರತೆಯೂ ಇದೆ. ಹಾಸ್ಟೇಲ್ನ ಬಾಗಿಲು, ಫ್ಯಾನ್, ದೀಪದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಸಮಸ್ಯೆಗಳನ್ನು ಹೊಂದಿದೆ.
ಅಲ್ಲದೆ ವಿದ್ಯಾರ್ಥಿಗಳಿಗೆ ಸರಕಾರ ಮಾಸಿಕ ಖರ್ಚಿಗೆ ನೀಡುತ್ತಿರುವ ಸ್ಟೈಪಂಡ್ ಕಳೆದ ಹತ್ತು ತಿಂಗಳುಗಳಿಂದ ದೊರೆತಿಲ್ಲ. ಇದರಿಂದ ವಿದ್ಯಾರ್ಥಿಗಳು ಕಷ್ಟ ಪಡುವಂತಾಗಿದೆ.ಅಲ್ಲದೇ ವಿದ್ಯಾರ್ಥಿಗಳಿಗೆ ನೀಡುವ ಸ್ಟೈ ಫಂಡ್ನಿಂದಲೇ ವಿಧ್ಯಾರ್ಥಿಗಳ ಆಹಾರ ವೆಚ್ಚವನ್ನು ಭರಿಸುತ್ತಿದ್ದು ಮಾತ್ರವಲ್ಲದೆ ವಿದ್ಯಾರ್ಥಿನಿಲಯದ ವಿದ್ಯುತ್ ರಿಪೇರಿ ಮತ್ತು ಇತರ ರಿಪೇರಿಗಳನ್ನೂ ವಿದ್ಯಾರ್ಥಿಗಳು ಮಾಡುತ್ತಿದ್ದು ಸ್ಟೈ ಫಂಡ್ ಬರದಿದ್ದರೂ ಮನೆಯಿಂದ ಹಣ ತಂದು ನೀಡುವ ಪರಿಸ್ಥಿತಿ ಎದುರಾಗಿದೆ.
ನಿಯೋಗದಲ್ಲಿ ಎಸ್.ಎಫ್.ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್,ಕಾರ್ಯದರ್ಶಿ ಚರಣ್ ಶೆಟ್ಟಿ,ಮಂಗಳೂರು ನಗರ ಉಪಾಧ್ಯಕ್ಷ ಭಾಶಿತ್ ಕಣ್ಣೂರು ವಿದ್ಯಾರ್ಥಿನಿಯರಾದ ನಿಶಿತಾ ಮತ್ತು ಐಶ್ವರ್ಯ ಮುಂತಾದವರು ಉಪಸ್ಥಿತರಿದ್ದರು.