ವೈದ್ಯರಿಗೆ ಬ್ಲ್ಯಾಕ್‌ಮೇಲ್: ಸುದ್ದಿವಾಹಿನಿಯ ಇನ್‌ಪುಟ್ ಮುಖ್ಯಸ್ಥ ಸೆರೆ
ಬೆಂಗಳೂರು: ವೈದ್ಯ ಡಾ. ರಮಣ್ ರಾವ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ ₹ 5 ಲಕ್ಷ ಪಡೆದುಕೊಂಡು ಪುನಃ ₹50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ‘ಪಬ್ಲಿಕ್ ಟಿ.ವಿ’ ಸುದ್ದಿವಾಹಿನಿಯ ಇನ್ ಪುಟ್ ವಿಭಾಗದ ಮುಖ್ಯಸ್ಥ ಹೇಮಂತ್ ಕಶ್ಯಪ್‌ನನ್ನು ಸದಾಶಿವನಗರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
‘ವೈದ್ಯರ ಖಾಸಗಿ ವಿಡಿಯೊ ತನ್ನ ಬಳಿ ಇರುವುದಾಗಿ ಹೇಳಿದ್ದ ಹೇಮಂತ್, ಹಣ ಕೊಡದಿದ್ದರೆ ಅದನ್ನು ವಾಹಿನಿಯಲ್ಲಿ ಪ್ರಸಾರ ಮಾಡುವುದಾಗಿ ಬೆದರಿಸಿದ್ದ. ಆ ಸಂಬಂಧ ರಮಣ್ ರಾವ್ ದೂರು ನೀಡಿದ್ದರು. ಹಣ ತೆಗೆದುಕೊಂಡು ಹೋಗಲು ಬಂದಿದ್ದ ವೇಳೆಯಲ್ಲೇ ಆರೋಪಿಯನ್ನು ಬಂಧಿಸಿದ್ದೇವೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಡಿ.ದೇವರಾಜ್ ತಿಳಿಸಿದರು.
ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ: ‘ರಾಜ್‌ಕುಮಾರ್ ಅವರ ಕುಟುಂಬದ ವೈದ್ಯರೂ ಆಗಿರುವ ರಮಣರಾವ್, ಸದಾಶಿವನಗರದಲ್ಲಿ ನರ್ಸಿಂಗ್ ಹೋಮ್ ನಡೆಸುತ್ತಿದ್ದಾರೆ. ಅವರ ಬಳಿಯಿಂದ ಆರೋಪಿ ಹೇಮಂತ್, ₹5 ಲಕ್ಷ ಪಡೆದುಕೊಂಡಿದ್ದ ದೃಶ್ಯ ನರ್ಸಿಂಗ್ ಹೋಮ್‌ನ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ದೇವರಾಜ್ ತಿಳಿಸಿದರು.
‘ರಮಣ್ ರಾವ್ ಅವರು ದೂರು ನೀಡಿದ ಬಳಿಕ ಕ್ಯಾಮೆರಾಗಳಲ್ಲಿ ದಾಖಲಾಗಿದ್ದ ದೃಶ್ಯಗಳನ್ನು ಪರಿಶೀಲಿಸಲಾಯಿತು. ನರ್ಸಿಂಗ್ ಹೋಮ್‌ಗೆ ಮೂರು ಬಾರಿ ಬಂದು ಹೋಗಿದ್ದ ಹೇಮಂತ್, ಒಮ್ಮೆ ₹ 2 ಲಕ್ಷ, ಮತ್ತೊಮ್ಮೆ ₹ 2 ಲಕ್ಷ ಹಾಗೂ ಮಗದೊಮ್ಮೆ ₹1 ಲಕ್ಷ ಪಡೆದುಕೊಂಡು ಹೋಗಿದ್ದು ತಿಳಿಯಿತು’.
‘ವೈದ್ಯರ ಬಳಿ ಬಂದಿದ್ದ ಆತ, ಪುನಃ ಹಣಕ್ಕೆ ಬೇಡಿಕೆ ಇಟ್ಟು ವಾಪಸ್ ಹೋಗಿದ್ದ. ಆತನನ್ನು ನರ್ಸಿಂಗ್ ಹೋಮ್‌ಗೆ ಕರೆಸಿಕೊಂಡು ಪುರಾವೆ ಸಮೇತ ಸೆರೆ ಹಿಡಿಯಲಾಯಿತು’ ಎಂದು ದೇವರಾಜ್ ಹೇಳಿದರು.
‘ಸಮಯ ನ್ಯೂಸ್’ ವರದಿಗಾರನೂ ಆರೋಪಿ: ‘ಸಮಯ ನ್ಯೂಸ್’ ಸುದ್ದಿವಾಹಿನಿಯ ವರದಿಗಾರ ಮಂಜುನಾಥ್ ಎಂಬಾತ ಸಹ ವೈದ್ಯರನ್ನು ಬ್ಲ್ಯಾಕ್‌ಮೇಲ್ ಹಣ ಪಡೆದುಕೊಂಡಿದ್ದಾನೆ. ಆತನನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಿಕೊಂಡಿದ್ದೇವೆ. ಆತ ತಲೆಮರೆಸಿಕೊಂಡಿದ್ದಾನೆ’ ಎಂದು ಡಿಸಿಪಿ ದೇವರಾಜ್ ವಿವರಿಸಿದರು.
‘ವರದಿಗಾರ ಮಂಜುನಾಥ್ ಹಣ ಪಡೆದ ದೃಶ್ಯವೂ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೇಮಂತ್ ಜೊತೆಗೇ ಬಂದು ಆತ ಹಣ ಪಡೆದುಕೊಂಡು ಹೋಗಿದ್ದ. ಇಬ್ಬರೂ ಆರೋಪಿಗಳು, ಬೇರೆ ಬೇರೆ ಸುದ್ದಿವಾಹಿನಿಗಳ ಹೆಸರು ಹೇಳಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಮತ್ತಷ್ಟು ವರದಿಗಾರರು, ವೈದ್ಯರನ್ನು ಬ್ಲ್ಯಾಕ್‌ಮೇಲ್ ಮಾಡಿರುವ ಮಾಹಿತಿ ಇದೆ’ ಎಂದು ಹೇಳಿದರು.
ಪೊಲೀಸರಿಗೇ ಬೆದರಿಕೆ
ತನ್ನನ್ನು ಬಂಧಿಸಿದ್ದಕ್ಕಾಗಿ ಪೊಲೀಸರಿಗೇ ಆರೋಪಿ ಹೇಮಂತ್ ಬೆದರಿಕೆ ಹಾಕಿದ್ದಾನೆ ಎಂದು ಮೂಲಗಳು ತಿಳಿಸಿವೆ.
‘ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ನನಗೆ ಗೊತ್ತು. ನನ್ನನ್ನು ಇಲ್ಲಿಯೇ ಬಿಟ್ಟು ಬಿಡಿ. ನಿಮ್ಮಿಂದ ಏನು ಮಾಡಲು ಆಗುವುದಿಲ್ಲ’ ಎಂದು ಆತ ಬೆದರಿಸಿದ್ದ. ಅದಕ್ಕೆ ಸೊಪ್ಪು ಹಾಕದ ಪೊಲೀಸರು, ಆತನನ್ನು ಬಂಧಿಸಿ ಠಾಣೆಗೆ ಕರೆದೊಯ್ದರು’ ಎಂದು ಮೂಲಗಳು ಹೇಳಿವೆ.
‘ಟಿವಿ–9’ ಹೆಸರು ಹೇಳಿದ್ದ ಹೇಮಂತ್
‘ಆರಂಭದಲ್ಲಿ ವೈದ್ಯರ ನರ್ಸಿಂಗ್ ಹೋಮ್‌ಗೆ ಹೋಗಿದ್ದ ಹೇಮಂತ್, ಬೇರೆ ಬೇರೆ ವಾಹಿನಿಗಳ ಹೆಸರು ಹೇಳಿ ಬ್ಲ್ಯಾಕ್‌ಮೇಲ್ ಮಾಡಿ ಹಣ ಪಡೆದಿದ್ದ. ಮಂಗಳವಾರ ನರ್ಸಿಂಗ್ ಹೋಮ್‌ಗೆ ಬಂದಾಗ ‘ಟಿವಿ–9’ ಸುದ್ದಿವಾಹಿನಿಯ ಹೆಸರು ಹೇಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ’ ಎಂದು ಡಿಸಿಪಿ ದೇವರಾಜ್ ತಿಳಿಸಿದರು.
‘ಆರೋಪಿ ವಿರುದ್ಧ ಸದ್ಯ ರಮಣ್ ರಾವ್ ಮಾತ್ರ ದೂರು ನೀಡಿದ್ದಾರೆ. ಆರೋಪಿಯು ಬೇರೆ ಯಾರಿಗಾದರೂ ಬ್ಲ್ಯಾಕ್‌ಮೇಲ್ ಮಾಡಿದ್ದರೆ, ಅಂಥವರು ದೂರು ನೀಡಬಹುದು’ ಎಂದು ಹೇಳಿದರು.