ವೈದ್ಯರ ನಿರ್ಲಕ್ಷ್ಯ ದಿಂದ ಮಹಿಳೆ ಸಾವು, ಕೊರೋನಾ ವರದಿ ನೀಡುವಲ್ಲಿ ಗೊಂದಲ ಆರೋಪ- ಸಾರ್ವಜನಿಕರಿಂದ ಪ್ರತಿಭಟನೆ

Spread the love

ವೈದ್ಯರ ನಿರ್ಲಕ್ಷ್ಯ ದಿಂದ ಮಹಿಳೆ ಸಾವು, ಕೊರೋನಾ ವರದಿ ನೀಡುವಲ್ಲಿ ಗೊಂದಲ ಆರೋಪ- ಸಾರ್ವಜನಿಕರಿಂದ ಪ್ರತಿಭಟನೆ

ಉಡುಪಿ: ಆಸ್ಪತ್ರೆಗೆ ತಲೆ ನೋವಿನಿಂದ ದಾಖಲಾಗಿದ್ದ ಮಹಿಳೆಯೋರ್ವರು ವೈದ್ಯರ ನಿರ್ಲಕ್ಷ್ಯದಿಂದ ಮೃತರಾಗಿದ್ದು ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ ತಾಲೂಕಿನ ಇಂದಿರಾ ನಗರದ ಶಿವಪ್ರಸಾದ್ ಎಂಬವರ ಪತ್ನಿ ಶ್ರೀರಕ್ಷಾ (26) ತಲೆನೋವಿನಿಂದ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ವೈದ್ಯರು ಚುಚ್ಚು ಮದ್ದು ನೀಡಿದ್ದು ಮನೆಗೆ ತೆರಳುವಂತೆ ಸೂಚಿಸಿದ್ದರು ಎನ್ನಲಾಗಿದೆ. ಮನೆಗೆ ತೆರಳಿ ಮಲಗಿದ್ದ ಶ್ರೀ ರಕ್ಷಾ ಅವರ ಬಾಯಲ್ಲಿ ನೊರೆ ಬರುತ್ತಿರುವುದು ಗಮನಿಸಿ ಮತ್ತೆ ಬೇರೊಂದು ಆಸ್ಪತ್ರೆಗೆ ದಾಖಲಿಸಿದಾಗ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳೆ ಶವವನ್ನು ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸುವ ಮೊದಲು ಕೊವೀಡ್ ಪರೀಕ್ಷೆ ನಡೆಸಿದ್ದು ಅದರಲ್ಲೂ ಕೂಡ ಗೊಂದಲ ಏರ್ಪಟ್ಟಿದ್ದು ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ಶವಾಗಾರದ ಬಳಿ ಪ್ರತಿಭಟನೆ ನಡೆಸಿದರು.

ಮಹಿಳೆಗೆ ಮೊದಲು ಆಂಟಿಜನ್ ರ್ಯಾಪಿಡ್ ಟೆಸ್ಟ್ ನಡೆಸಿದ ವೇಳೆ ನೆಗೆಟಿವ್ ಬಂದಿದ್ದು, ತಡರಾತ್ರಿ ಬಂದ ವರದಿಯಲ್ಲಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ. ಪಾಸಿಟಿವ್ ಬಂದ ವರದಿಯ ಪ್ರತಿಯಲ್ಲಿ ಸರ್ಕಾರಿ ವೈದ್ಯರ ಸಹಿಯೂ ಇಲ್ಲ ಸೀಲೂ ಇಲ್ಲ. ಪಾಸಿಟಿವ್ ಎಂದು ವರದಿ ಕೊಟ್ಟು ಖಾಸಗಿ ಆಸ್ಪತ್ರೆ ರಕ್ಷಣೆ ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದರು.

ಸ್ಥಳದಲ್ಲಿ ಸರ್ಕಾರಿ ಆಸ್ಪತ್ರೆ ವಿರುದ್ದ, ಮೃತ ಮಹಿಳೆಯ ಪತ್ನಿ ಹಾಗೂ ಸಂಬಂಧಿಕರು ಆಕ್ರೋಶವ್ಯಕ್ತಪಡಿಸಿದ್ದು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಜಿಲ್ಲಾಸ್ಪತ್ರೆಯ ಬಳಿ ಸೇರಿದ್ದರು.

ಸ್ಥಳದಲ್ಲಿ ನಗರ ಪೊಲೀಸ್ ಠಾಣೆಯ ಪೊಲೀಸರು ಉಪಸ್ಥಿತರಿದ್ದರು.


Spread the love