ಶಂಕಿತ ಕೊರೋನ: ಉಡುಪಿ ಜಿಲ್ಲೆಯಲ್ಲಿ ಮತ್ತೆ ಮೂವರು ಆಸ್ಪತ್ರೆಗೆ ದಾಖಲು
ಉಡುಪಿ : ಶಂಕಿತ ನೋವೆಲ್ ಕೊರೋನ ವೈರಸ್ನ ಮಹಾಮಾರಿ ದೇಶಾದ್ಯಂತ ಶರವೇಗದಲ್ಲಿ ಹಬ್ಬುತ್ತಿರುವ ನಡುವೆಯೇ ಗುರುವಾರ ಪುನಃ ಉಡುಪಿ ಜಿಲ್ಲೆಯಲ್ಲಿ ಮೂರು ಮಂದಿ ಶಂಕಿತ ವೈರಸ್ ಸೋಂಕಿನ ಪರೀಕ್ಷೆಗಾಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.
ಮಾ.10ಕ್ಕೆ ಯುಎಇಯಿಂದ ಆಗಮಿಸಿದ ವ್ಯಕ್ತಿ ಕುಂದಾಪುರ ತಾಲೂಕು ಆಸ್ಪತ್ರೆಗೆ, 11ರಂದು ಜರ್ಮನಿಯಿಂದ ಆಗಮಿಸಿದ ವ್ಯಕ್ತಿ ಜಿಲ್ಲಾಸ್ಪತ್ರೆಗೆ, 10ಕ್ಕೆ ದುಬೈನಿಂದ ಆಗಮಿಸಿದ ವ್ಯಕ್ತಿ ಕೆಎಂಸಿಗೆ ದಾಖಲಾಗಿದ್ದಾರೆ.
ಈ ಐವರು ಶಂಕಿತರ ಗಂಟಲು ದ್ರವಗಳ ಮಾದರಿಗಳನ್ನು ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವುಗಳ ವರದಿ ಶೀಘ್ರವೇ ಬರುವ ನಿರೀಕ್ಷೆ ಇದೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 24 ಮಂದಿಯ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, 16 ಮಂದಿ ವರದಿ ನೆಗೆಟಿವ್ ಬಂದಿದೆ. 8 ಮಂದಿ ವರದಿ ಇನ್ನಷ್ಟೇ ಆರೋಗ್ಯ ಇಲಾಖೆ ಕೈ ಸೇರಬೇಕಿದೆ.