ಶಕ್ತಿನಗರದಲ್ಲಿ ಆಶ್ರಯ ಮನೆ ನಿರ್ಮಿಸುವ ಸ್ಥಳ ಪರಿಶೀಲಿಸಿದ ಶಾಸಕ ಜೆ.ಆರ್.ಲೋಬೊ
ಮಂಗಳೂರು: ಶಕ್ತಿನಗರದಲ್ಲಿ ಸುಮಾರು 10 ಎಕ್ರೆ ಜಾಗದಲ್ಲಿ 1100 ಮನೆಗಳನ್ನು ನಿರ್ಮಿಸುವ ಬಗ್ಗೆ ಶಾಸಕ ಜೆ.ಆರ್.ಲೋಬೊ ಅವರು ನಿನ್ನೆ ನಗರಪಾಲಿಕೆ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲಿಸಿದರು.
ಈ ಪ್ರದೇಶದಲ್ಲಿ ಮನೆಗಳ ನಿರ್ಮಾಣ ಕೆಲಸವನ್ನು ಆದಷ್ಟು ಬೇಗನೇ ಆರಂಭಿಸಬೇಕು. ಇನ್ನೂ ತಡಮಾಡುವುದು ಬೇಡ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸ್ವಂತ ಮನೆಹೊಂದಲು ಸುಮಾರು 3 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಇಲ್ಲಿ 1100 ಮನೆಗಳನ್ನು ನಿರ್ಮಿಸಲು ಸ್ಥಳಾವಕಾಶವಿದೆ. ಉಳಿದವರಿಗೆ ಮುಂದಿನ ದಿನಗಳಲ್ಲಿ ನಿವೇಶನ ಹುಡುಕಿ ಮನೆ ನೀಡಬಹುದು ಎಂದರು.
5 ಲಕ್ಷ ರೂಪಾಯಿ ಬೆಲೆಯ ಮನೆಗಳನ್ನು ಫಲಾನುಭವಿಗಳು ಪಡೆಯಲಿದ್ದು ಪರಿಶಿಷ್ಟರಿಗೆ ಕೇಂದ್ರ ಸರ್ಕಾರ 1.5 ಲಕ್ಷ ರೂಪಾಯಿಯನ್ನು ಪ್ರಧಾನ ಮಂತ್ರಿ ಆವಾಜ್ ಯೋಜನೆಯಲ್ಲಿ ನೀಡಿದರೆ ರಾಜ್ಯ ಸರ್ಕಾರ 1.80 ಲಕ್ಷ ರೂಪಾಯಿಯನ್ನು, ಮಹಾನಗರ ಪಾಲಿಕೆ ಪರಿಶಿಷ್ಟರಿಗೆ 1 ಲಕ್ಷ ರೂಪಾಯಿ ನೀಡಲಿದೆ. ಇತರ ಜಾತಿಯವರಿಗೆ ನಗರ ಪಾಲಿಕೆ 70 ಸಾವಿರ, ರಾಜ್ಯ ಸರ್ಕಾರ 1.2 ಲಕ್ಷ ರೂಪಾಯಿ ಹಾಗೂ ಕೇಂದ್ರ ಸರ್ಕಾರ 1.5 ಲಕ್ಷ ರೂಪಾಯಿ ನೀಡಲಿದೆ.ಪರಿಶಿಷ್ಟ ಜಾತಿಯವರು 3.70 ಲಕ್ಷ ರೂಪಾಯಿ ಅನುದಾನ ಮತ್ತು ಇತರ ಜಾತಿಯವರು 3.40 ಲಕ್ಷ ರೂಪಾಯಿ ಅನುದಾನವನ್ನು ಪಡೆಯಲಿದ್ದಾರೆ.
ರಾಷ್ಟ್ರೀಕೃತ ಬ್ಯಾಂಕ್ ಗಳು ಪರಿಶಿಷ್ಠರಿಗೆ 1.5 ಲಕ್ಷ ರೂಪಾಯಿ, ಇತರ ಜಾತಿಯವರಿಗೆ 1.3 ಲಕ್ಷ ರೂಪಾಯಿ ಸಾಲ ನೀಡಲಿವೆ. ಈ ಹಣವನ್ನು ಪಿಗ್ಮಿ ಆಧಾರದಲ್ಲಿ ಪಾವತಿಸಬಹುದು. ಅಂತೂ ಪರಿಷ್ಟರು ತಮ್ಮ ವೈಯಕ್ತಿಕ ಹಣವಾಗಿ ಕೇವಲ 20 ಸಾವಿರ ರೂಪಾಯಿಯನ್ನು, ಇತರ ಜಾತಿಯವರು 30 ಸಾವಿರ ರೂಪಾಯಿಯನ್ನು ಪಾವತಿಸಿ ಈ ವಸತಿ ನಿಲಯ ಪಡೆಯಬಹುದು.
ಇದು ಪೂರ್ಣಗೊಳ್ಳಲು 18 ತಿಂಗಳ ಕಾಲಾವಕಾಶ. ಮುಗಿದ ಕೂಡಲೇ ಹಕ್ಕುಪತ್ರ ವಿತರಣೆ. ವೈಯಕ್ತಿಕವಾಗಿ 20 ಸಾವಿರ ಮತ್ತು 30 ಸಾವಿರ ಹಣವನ್ನು ಪಾವತಿಸಬೇಕು. ಬ್ಯಾಂಕ್ ಸಾಲ ಬೇಕಾದವರಿಗೆ ಸಾಲ ತೆಗೆಸಿಕೊಡುತ್ತಾರೆ. ಅದನ್ನು ಪಿಗ್ಮಿಯ ರೂಪದಲ್ಲಿ ಪಾವತಿಸಬಹುದು. ಸಾಲ ಬೇಡವಾಗಿದ್ದರೆ ತಾವೇ ಪರಿಶಿಷ್ಟರು 1.5 ಲಕ್ಷ ಮತ್ತು ಇತರ ಜಾತಿಯವರು 1.3 ಲಕ್ಷ ರೂಪಾಯಿ ಹಣಪಾವತಿಸಬೇಕು.
ಇಲ್ಲಿ ಕುಡಿಯುವ ನೀರು, ಒಳಚರಂಡಿ, ದಾರಿದೀಪ, ಮಕ್ಕಳಿಗೆ ಆಟದ ಮೈದಾನ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶಾಸಕ ಜೆ.ಆರ್.ಲೋಬೊ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರ ಪಾಲಿಕೆ ಆಯುಕ್ತರಾದ ನಜೀರ್, ಡೆನ್ನೀಸ್ , ಬ್ಯಾಪ್ಟಿಸ್ ಹಾಗೂ ಇತರ ಅಧಿಕಾರಿಗಳಿದ್ದರು.