ಶಕ್ತಿನಗರದಲ್ಲಿ ಮನೆಗಳಿಗೆ ಟೈಲ್ಸ್ ಬದಲು ರೆಡಾಕ್ಸಸೈಡ್ ಬಳಸಿ: ಶಾಸಕ ಜೆ.ಆರ್.ಲೋಬೊ

Spread the love

ಶಕ್ತಿನಗರದಲ್ಲಿ ಮನೆಗಳಿಗೆ ಟೈಲ್ಸ್ ಬದಲು ರೆಡಾಕ್ಸಸೈಡ್ ಬಳಸಿ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಶಕ್ತಿನಗರದಲ್ಲಿ ನಿರ್ಮಿಸಲಾಗುವ ಮನೆಗಳಿಗೆ ಟೈಲ್ಸ್ ಬದಲಿಗೆ ರೆಡಾಕ್ ಸೈಡ್ ಬಳಸುವಂತೆ ಶಾಸಕ ಜೆ.ಆರ್.ಲೋಬೊ ಅವರು ಸೂಚನೆ ನೀಡಿದರು.

ಅವರು ಕದ್ರಿಯಲ್ಲಿರುವ ಶಾಸಕರ ಕಚೇರಿಯಲ್ಲಿ ಆಶ್ರಯ ಸಮಿತಿಯ ಸಭೆಯಲ್ಲಿ ಈ ಸೂಚನೆ ನೀಡಿದರು. ಮನೆಗಳಿಗೆ ತಲಾ 5 ಲಕ್ಷ ರೂಪಾಯಿ ವೆಚ್ಚ ಬರುತ್ತಿದ್ದು ಟೈಲ್ಸ್ ಅಳವಡಿಸಿದರೆ ಹೆಚ್ಚುವರಿಯಾಗಿ ಪ್ರತೀ ಮನೆಗೆ 18 ಸಾವಿರ ರೂಪಾಯಿ ಆಗುತ್ತದೆ. ಈಗಾಗಲೇ ಮನೆಗಳನ್ನು ಖರೀದಿಸಲು ಹಿಂದಿನ ಮೊತ್ತ 5 ಲಕ್ಷ ರೂಪಾಯಿಗೆ ಒಡಂಬಡಿಕೆ ಮಾಡಿಕೊಂಡವರು ಹೆಚ್ಚವರಿ ಹಣವನ್ನು ಪಾವತಿಸಲು ಕಷ್ಟವಾಗುತ್ತದೆ. ಆದ್ದರಿಂದ ಟೈಲ್ಸ್ ಬಳಸುವ ಬದಲು ರೆಡಾಕ್ ಸೈಡ್ ಹಾಕುವಂತೆ ಲೋಬೊ ಅವರು ಸಲಹೆ ನೀಡಿದರು.

ಶಕ್ತಿನಗರದಲ್ಲಿ 930 ಮನೆಗಳನ್ನು ನಿರ್ಮಿಸಲಾಗುವುದು. ಈ ಕಾಮಗಾರಿಯನ್ನು 10 ಬ್ಲಾಕ್ ಗಳಾಗಿ ಮಾಡಿ ಗುತ್ತಿಗೆದಾರರನ್ನು ನೇಮಕ ಮಾಡುವಂತೆ ಸಭೆಯಲ್ಲಿ ನಿರ್ಧರಸಲಾಯಿತು.

ಈ ಮನೆಗಳ ನಿರ್ಮಾಣಕ್ಕೆ 46.50 ಕೋಟಿ ಅಂದಾಜು ಮಾಡಲಾಗಿದೆ. ಹೆಚ್ಚುವರಿಯಾಗಿ ರಿಟೈನಿಂಗ್ ವಾಲ್ ನಿರ್ಮಿಸಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸ್ಲಮ್ ಬೋರ್ಡ್ ನವರು ಮನೆ ನಿರ್ಮಿಸಲು ಮುಂದಾಗಿದ್ದು ಸೂಕ್ತ ಸ್ಥಳವನ್ನು ಗುರುತಿಸಿ, ಮನೆಗಳಿಗೆ ಬೇಡಿಕೆಯನ್ನು ತೆಗೆದುಕೊಂಡು ಅರ್ಹರಾದವರಿಗೆ ಮಾತ್ರ ನೀಡುವಂತೆ ಶಾಸಕ ಜೆ.ಆರ್.ಲೋಬೊ ತಿಳಿಸಿದರು.

ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ನಜೀರ್, ತಹಶೀಲ್ದಾರ್ ಮಹಾದೇವಪ್ಪ ಸಹಿತ ಆಶ್ರಯ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


Spread the love