Home Mangalorean News Kannada News ಶತಮಾನದ ನಮನ: ಎಂ. ಗೋಪಾಲಕೃಷ್ಣ ಅಡಿಗ- ಎಸ್ ಆರ್ ವಿಜಯಶಂಕರ್

ಶತಮಾನದ ನಮನ: ಎಂ. ಗೋಪಾಲಕೃಷ್ಣ ಅಡಿಗ- ಎಸ್ ಆರ್ ವಿಜಯಶಂಕರ್

Spread the love

ಶತಮಾನದ ನಮನ: ಎಂ. ಗೋಪಾಲಕೃಷ್ಣ ಅಡಿಗ- ಎಸ್ ಆರ್ ವಿಜಯಶಂಕರ್

`ಪರಂಪರೆಯ ಪುನರ್ ಅವಲೋಕನ’ ಅಡಿಗರ ಮುಖ್ಯ ಕಲ್ಪನೆ ಯಾಗಿದ್ದು. ಆವರ್ತನ ಕ್ರಿಯೆಯಿಂದ ಹೊಸತನ್ನು ತಿಳಿದುಕೊಳ್ಳಬಹುದು ಎಂದು ಬಲವಾಗಿ ಅಡಿಗರು ನಂಬಿದ್ದರು ಎಂದು ಎಸ್.ಆರ್. ವಿಜಯಶಂಕರ್ ಹೇಳಿದರು.

ಇವರು 2017-18ನೇ ಸಾಲಿನ ಆಳ್ವಾಸ್ ನುಡಿಸಿರಿಯಲ್ಲಿ ಆಯೋಜಿಸಿದ್ದ ಎಂ. ಗೋಪಾಲಕೃಷ್ಣ ಅಡಿಗರ ಶತಮಾನದ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಥೆಯ ಸಂದರ್ಭದಲ್ಲಿ ತತ್ವವು ನೀತಿಯಾಗುತ್ತದೆ. ಕಥನದಿಂದ ಬಿಡುಗಡೆ ಹೊಂದಿದಾಗ ಭಾವಕ್ಕೆ ಒಂದು ಶಕ್ತಿ ಬರುತ್ತದೆ. ಭಾವ ಕಥೆಯನ್ನು ಬಿಟ್ಟು ಸಕಲಕ್ಕೂ ಅನ್ವಯಗೊಳ್ಳುತ್ತದೆ. ಈ ಭಾವವನ್ನು ಅಡಿಗರು ಶೋಧನೆಯಲ್ಲಿ ಕಂಡಿದ್ದಾರೆ ಎಂದು ಹೇಳಿದರು.

ನಾವು ವಿಜ್ಞಾನದ ಬೆಳವಣಿಗೆಯಲ್ಲಿ ಯಾವುದನ್ನು ನಂಬುವುದು ಯಾವುದನ್ನು ನಂಬದಿರುವುದು ಎಂಬ ದ್ವಂದ್ವದಲ್ಲಿ ತೊಳಲಾಡುತ್ತಿದ್ದೇವೆ, 21ನೇ ಶತಮಾನದಲ್ಲೂ ದ್ವಂದ್ವ ನಮ್ಮನ್ನು ಕಾಡುತ್ತಿದೆ, ಅದನ್ನು ಗುರುತಿಸುವುದು ಮುಖ್ಯ ಎಂದು ಹೇಳಿದರು.

ಅಡಿಗರು ನಿರಂತರವಾಗಿ ಒಂದು ರೀತಿಯ ಧ್ಯಾನ ಹಾಗೂ ಶೋಧದಲ್ಲಿ ನಿರತರಾಗಿದ್ದರು. ಪ್ರಯತ್ನದ, ಹೋರಾಟದ ಕ್ರಮದಲ್ಲಿ ವ್ಯಕ್ತಿಯ ಅನುಭವದ ಶೋಧನೆ ನಡೆಯಬೇಕು ಎಂಬ ಚಿಂತನೆಯನ್ನು ಅಡಿಗರು ಹೊಂದಿದ್ದರು. ವ್ಯಕ್ತಿಯ ಸ್ವಾತಂತ್ರ್ಯ ಹಾಗೂ ಹಕ್ಕು ಬಹುತ್ವಕ್ಕೋಸ್ಕರ ನಾಶವಾಗಬಾರದು ಎನ್ನುವ ಅಂಶ ಅವರ ಮನದಲ್ಲಿತ್ತು ಎಂದು ಹೇಳಿದರು.

ಒಳ್ಳೆಯತನವು ಸಹಜವೂ ಅಲ್ಲ ಅಸಹಜವೂ ಅಲ್ಲ, ಅವುಗಳು ಮನುಷ್ಯರ ಮಾನಸಿಕ ಸ್ಥಿತಿ. ಅವುಗಳ ನಡುವೆ ಒಂದು ದೊಡ್ಡ ಅಂತರವಿದೆ. ಅವುಗಳ ನಡುವಿನ ಸೂಕ್ಷ್ಮ ಗುಣಗಳನ್ನು ಅಡಿಗರು ತಿಳಿಸುವುದರಿಂದ ಅವರ ಕಾವ್ಯಗಳನ್ನು ಅರ್ಥ ಮಾಡಿಕೊಳ್ಳುವುದು ನಮಗೆ ಕಷ್ಟ ಅನ್ನಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿಯ ಸಮ್ಮೇಳನಾಧ್ಯಕ್ಷರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಚಿತ್ರಕಲೆ-ಪ್ರದರ್ಶನ ಕಲೆ-ರಂಗಭೂಮಿ ಒಂದಕ್ಕೊಂದು ಪೂರಕ: ಡಾ.ಡಿ. ಎಸ್. ಚೌಗಲೆ

ಮೂಡುಬಿದಿರೆ, ಡಿ1: ಚಿತ್ರಕಲೆ-ಪ್ರದರ್ಶನಕಲೆ-ರಂಗಭೂಮಿ ವಿಷಯದ ಕುರಿತು ಗಾಂಧಿ ವೆರ್ಸಸ್ ಗಾಂಧಿ ನಾಟಕ ಖ್ಯಾತಿಯ ರಂಗಕರ್ಮಿ ಡಾ.ಡಿ. ಎಸ್. ಚೌಗಲೆ ವಿಶೇಷೋಪನ್ಯಸ ನೀಡಿದರು.

ಕಲೆ ಮನುಷ್ಯನ ಮೂಲ ಸ್ವಭಾವಗಳಲ್ಲೊಂದು ಜಾತಿ, ಮತ ಮಿಕ್ಕೆಲ್ಲ ಭೇದ ಭಾವಗಳನ್ನು ಮೀರಿ ಬೆಳೆಯುವ ಶಕ್ತಿ ಹೊಂದಿರುವಂಥದ್ದು. ಕಲೆಯ ಮೂರು ವಿಭಿನ್ನ ವಿಭಾಗಗಳಾದ ಚಿತ್ರಕಲೆ-ಪ್ರದರ್ಶನ ಕಲೆ-ರಂಗಭೂಮಿ ಇವುಗಳು ಒಂದಕ್ಕೊಂದು ಪೂರಕ ಎಂದು ಪ್ರತಿಪಾದಿಸಿದರು.

ಮೂರು ವಿಷಯಗಳನ್ನು ಸಂಕ್ಷಿಪ್ತವಾಗಿ ಚರ್ಚಿಸುತ್ತ ಚೌಗಲೆ, “ಪ್ರದರ್ಶನ ಕಲೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ಒಂದು ಪ್ರಕಾರ. ಇದು ಸಂಪೂರ್ಣ ಸೃಷ್ಟಿಕಾರನ ಪ್ರಸ್ತುತ ವಿದ್ಯಮಾನಗಳ ಕುರಿತ ಜ್ಞಾನದ ಮೇಲೆ ಅವಲಂಬಿತವಾಗಿದೆ. ಇನ್ನು ಚಿತ್ರಕಲೆಯು ಮನುಷ್ಯನ ಅನಾದಿಕಾಲದಿಂದಲೂ ಅವನ ಒಡನಾಡಿಯಂತೆ ಬೆಳೆದಿದೆ ಮತ್ತು ಸೃಷ್ಟಿಕಾರನ ಸೃಜನಶೀಲತೆಯೇ ಇದಕ್ಕೆ ಅಡಿಪಾಯ. ರಂಗಭೂಮಿ ಇವೆರಡಕ್ಕೂ ಮೀರಿದ ಮಟ್ಟದಲ್ಲಿ ಜನರಿಗೆ ತಲುಪುವುದರಿಂದ ಹೆಚ್ಚು ಸಾಮಾಜಿP ಹೊಣೆಯನ್ನು ಹೊಂದಿದೆ. ನಾಟಕದ ನಿರ್ದೇಶಕನು ಕಾಲಕ್ಕನುಗುಣವಾಗಿ ಲೇಖಕ ಹೇಳಹೊರಟಿರುವುದನ್ನೂ ಹೇಳಿ, ತನ್ನ ಕಲ್ಪನೆಗೂ ಸ್ಥಾನ ಕೊಟ್ಟಾಗ ಪ್ರಸ್ತುತತೆಗೆ ನ್ಯಾಯ ಒದಗಿಸಿದಂತೆ” ಎಂದು ಅಭಿಪ್ರಾಯಪಟ್ಟರು.

ಈ ಸಂಧರ್ಭದಲ್ಲಿ ನುಡಿಸಿರಿ-17 ರ ಅಧ್ಯಕ್ಷ ನಾಗತಿಹಳಿಶ್ಳಾ ಚಂದ್ರಶೇಖರ್, ಸಾಹಿತಿ ನಾ.ದಾ ಶೆಟ್ಟಿ ಉಪಸ್ಥಿತರಿದ್ದರು.

ಆಳ್ವಾಸ್ ನುಡಿಸಿರಿ ಕರ್ನಾಟಕದ ಕೂಡಲಸಂಗಮ: ಡಾ.ಜಿ.ಬಿ.ಹರೀಶ್

ಮೂಡಬಿದಿರೆ: ಆಳ್ವಾಸ್ ನುಡಿಸಿರಿಯ ಅಂಗವಾಗಿ ಅನೇಕ ಸಾಹಿತ್ಯಾಭಿರುಚಿ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. “ಜೀವನ ವಿಧಾನ- ಸಮಸ್ಯೆಗಳು ಮತ್ತು ಸವಾಲುಗಳು” ಎಂಬ ವಿಷಯದ ಕುರಿತು ಡಾ.ಜಿ.ಬಿ.ಹರೀಶ್ ಉಪನ್ಯಾಸ ನೀಡಿದರು.
“ಇಂದಿನ ಸಮಾಜದಲ್ಲಿ ಬಹುಮುಖ್ಯವಾಗಿ ಕಾಡುತ್ತಿರುವ ಸಮಸ್ಯೆಗಳು ಮತ್ತು ಸವಾಲುಗಳು ಎಂದರೆ ಎಡ-ಬಲಗಳ ಚರ್ಚೆಯಲ್ಲ ಅದು ಅಭಿರುಚಿ ಅಭಾವ, ಸಂವೇದನೆಯ ಕೊರತೆ ಹಾಗೂ ಸತ್ವವಿಲ್ಲದ ಮಾತುಗಳು” ಎಂದು ಡಾ.ಜಿ.ಬಿ.ಹರೀಶ್ ಹೇಳಿದರು.

“ಇಂದು ಪೀಳಿಗೆಗಳ ನಡುವೆ ಅಭಿರುಚಿಯ ವ್ಯತ್ಯಾಸ ಎದುರಾಗುತ್ತಿದೆ. ನಮ್ಮ ಸಂಸ್ಕøತಿಯನ್ನು ಇಂದಿನ ಪೀಳಿಗೆ ಸಂಪೂರ್ಣವಾಗಿ ಕಡೆಗಣಿಸಿದೆ. ಉಡುಪುಗಳಲ್ಲಿ, ಭಾಷಾ ಬಳಕೆಯಲ್ಲಿ ಹಾಗೂ ಆಚರಣೆಯಲ್ಲಿ ವ್ಯತ್ಯಾಸ ಕಾಣುತ್ತಿದ್ದೇವೆ. ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ತೀವ್ರತರದಲ್ಲಿ ಎದುರಿಸಬೇಕಾಗುತ್ತದೆ” ಎಂದು ಅವರು ತಿಳಿಸಿದರು.
“ಅನುಭವ ಮನುಷ್ಯನನ್ನು ಗಟ್ಟಿಗೊಳಿಸುತ್ತದೆ ಹಾಗೂ ಆತನಿಗೆ ಸೃಜನಾತ್ಮಕ ಆಯಾಮ ನೀಡುತ್ತದೆ. ಆದರೆ ನಾವಿಂದು ಈ ರೀತಿಯ ಗುಣಗಳನ್ನು ನೀಡುವ ಸಂಬಂಧಗಳನ್ನು ಕಡೆಗಣಿಸಿ ಬದುಕುತ್ತಿದ್ದೇವೆ. ಶಿಕ್ಷಿತರಾಗಿ ಮತ್ತೊಬ್ಬರಿಗೆ ಭಾರವಾಗುವುದು ಹೇಗೆಂದು ಕಲಿಯುತ್ತಿದ್ದೇವೆ. ನಮ್ಮ ಪೂರ್ವಿಕರಲ್ಲಿದ್ದಂತಹ ಹೃದಯ ವೈಶಾಲ್ಯತೆ ಇಂದಿನವರಲ್ಲಿ ಉಳಿದಿಲ್ಲ. ಸಂಬಂಧಗಳ ನಡುವೆ ವಿಶ್ವಾಸ ಕುಸಿಯುತ್ತಿರುವುದೇ ಇದಕ್ಕೆ ಮುಖ್ಯ ಕಾರಣ” ಎಂದವರು ಅಭಿಪ್ರಾಯಪಟ್ಟರು.

“ಇಂದಿನ ಖಾಸಗಿ ಮಾಧ್ಯಮಗಳು ಪರಿಪೂರ್ಣ ಜೀವನ ವಿಧಾನ ಬಿಂಬಿಸುವಲ್ಲಿ ಸೋಲುತ್ತಿವೆ. ಜೀವನ ವಿಧಾನ ಎಂದರೆ ಕೇವಲ ಯುವಜನತೆಯದ್ದು ಎಂಬ ಪರಿಕಲ್ಪನೆಯನ್ನು ಮೂಡಿಸಿವೆ. ಆದರೆ ಇದು ಅಸತ್ಯ. ಮಾಧ್ಯಮಗಳ ಸತ್ವವಿಲ್ಲದ ಚರ್ಚೆಗಳು ಹಾಗೂ ಸಾರ್ವಜನಿಕರ ಟೊಳ್ಳು ಮಾತುಗಳ ಮೂಲ ಸಮಸ್ಯೆಗಳಾಗಿವೆ. ಬಹುಶಃ ಸ್ವಾತಂತ್ಯ್ರ ಪೂರ್ವದಲ್ಲಿ ಮೊಬೈಲ್ ಇದ್ದಿದ್ದರೆ ಹೋರಾಟದಲ್ಲಿ ಭಾಗಿಯಾಗುವ ಬದಲು ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಂದೇಶ ರವಾನಿಸಿ ಸುಮ್ಮನಾಗುತ್ತಿದ್ದರೇನೋ ಎಂದು ಟೀಕಿಸಿದ ಅವರು ದಿನಪತ್ರಿಕೆ, ಆಕಾಶವಾಣಿಗಳಂತೆ ಖಾಸಗಿ ಮಾಧ್ಯಮಗಳು ಜವಾಬ್ದಾರಿ ತೋರಿಸಬೇಕು ಎಂದು ತಿಳಿಸಿದರು.

ಮುಂದೆ ಸಾಹಿತ್ಯ ಸವಾಲುಗಳ ಬಗ್ಗೆ ಚರ್ಚಿಸಿದ ಅವರು, “ಸಾಹಿತ್ಯ ಎಂದರೆ ಎಲ್ಲರೂ ಒಂದೇ ಎಂಬ ಮನೋಭಾವ ಜನರಲ್ಲಿತ್ತು. ವೈಚಾರಿಕ ವಿರೋಧಗಳೇನಿದ್ದರೂ ಅವು ಸಂಬಂಧಗಳಿಗೆ ಧಕ್ಕೆ ತರುತ್ತಿರಲಿಲ್ಲ. ಆದರೆ ಇಂದು ಎಲ್ಲಾ ಕ್ಷೇತ್ರಗಳಲ್ಲೂ ಗೋಕುಲ ನಿರ್ಗಮನ ಪರ್ವ ಆರಂಭಗೊಂಡಿದೆ. ವೈಚಾರಿಕ ಸಮಸ್ಯೆಗಳು ವೈಯಕ್ತಿಕ ರೂಪ ಪಡೆದುಕೊಳ್ಳುತ್ತಿವೆ. ಡಿವಿಜಿ-ವಿಸಿ, ಕರ್ಣ-ದುರ್ಯೋಧನ, ಕೃಷ್ಣಾರ್ಜುನರಂಥ ಸ್ನೇಹವನ್ನು ಕಂಡ ನಮ್ಮ ನಾಡು ವೈಷಮ್ಯದ ರೂಪಕವಾಗಿ ಬೆಳೆಯುತ್ತಿರುವುದು ಆತಂಕಕಾರಿ” ಎಂದು ಹೇಳಿದರು.

“ಆಳ್ವಾಸ್ ನುಡಿಸಿರಿ ಕರ್ನಾಟಕದ ಕೂಡಲಸಂಗಮ ಇದ್ದಂತೆ. ಆಳ್ವಾಸ್ ನುಡಿಸಿರಿಯಂಥ ಕಾರ್ಯಕ್ರಮಗಳು ಇಂದಿನ ಸಮಸ್ಯೆಗಳಿಗೆ ಪರಿಹಾರೋಪಾಯವಾಗಿ ನಿಲ್ಲುತ್ತವೆ. ಇಂತಹ ಹಬ್ಬಗಳು ಹೆಚ್ಚಿದಷ್ಟು ನಮ್ಮ ನಡುವಿನ ಅಂತರ ಕುಗ್ಗಿ ಸಂಬಂಧಗಳು ಬೆಸೆಯುತ್ತವೆ” ಎಂದವರು ಅಭಿಪ್ರಾಯಪಟ್ಟರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿ-2017ರ ಸರ್ವಾಧ್ಯಕ್ಷರಾದ ಡಾ.ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ನಾ.ದಾಮೋದರ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 


Spread the love

Exit mobile version