ಶನಯ್ಯಾ ಬಿ ಮಾಬೆನ್ ಮಂಗಳೂರು ಮುಡಿಗೆ ಬಿಗ್ ಸಿಂಗರ್ ಫಾರ್ ಜೆ ಪ್ರಶಸ್ತಿ
ಉಡುಪಿ: ಬಿಗ್ ಜೆ ಟೆಲಿವಿಷನ್ ಮೀಡಿಯಾ ನೆಟ್ವರ್ಕ್ ವತಿಯಿಂದ ಆಯೋಜಿಸಿದ ಬಿಗ್ ಸಿಂಗರ್ ಫಾರ್ ಜೆ ಕ್ರೈಸ್ತ ಭಕ್ತಿ ಸಂಗೀತ ಸ್ಪರ್ಧೆಯ ವಿಜೇತರಾಗಿ ಮಂಗಳೂರಿನ ಶನಯ್ಯಾ ಬಿ ಮಾಬೆನ್ ಪ್ರಥಮ ಪ್ರಶಸ್ತಿಯನ್ನು ಪಡೆದಿದ್ದಾರೆ.
ಸೋಮವಾರ ಉಡುಪಿ ಮಿಷನ್ ಕಂಪೌಂಡ್ ಬಳಿ ಬಾಶೆಲ್ ಮಿಷನ್ ಆಡಿಟೋರಿಯಂನಲ್ಲಿ ಆಯೋಜಿಸಿದ ಅವಾರ್ಡ್ ನೈಟ್ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಬಿಗ್ ಸಿಂಗರ್ ಫಾರ್ ಜೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕ್ರಮವಾಗಿ ದ್ವಿತೀಯ ಬಹುಮಾನವನ್ನು ಮಂಗಳೂರಿನ ಆಗ್ನೇಸ್ ಜೇನ್ ಪಡೆದರೆ ತೃತಿಯ ಬಹುಮಾನವನ್ನು ಮಣಿಪಾಲ ಅಕ್ಷಾ ಪಡೆದುಕೊಂಡರು.
ಪ್ರಥಮ ಬಹುಮಾನ ವಿಜೇತರು ಪ್ರಶಸ್ತಿಯೊಂದಿಗೆ ರೂ ಒಂದು ಲಕ್ಷ ನಗದು ಬಹುಮಾನವನ್ನು ಪಡೆದುಕೊಂಡರೆ, ದ್ವೀತಿಯ ಹಾಗೂ ತೃತೀಯ ಬಹುಮಾನದ ವಿಜೇತರು ಪ್ರಶಸ್ತಿ ಹಾಗೂ ಪ್ರಮಾಣ ಪತ್ರವನ್ನು ಪಡೆದುಕೊಂಡರು.
ಭಾರತದ ಟೆಲಿವಿಷನ್ ಇತಿಹಾಸದಲ್ಲಿ ಪ್ರಥಮವಾಗಿ ಆಯೋಜಿಸಿದ ಬಿಗ್ ಸಿಂಗರ್ ಫಾರ್ ಜೆ ಕ್ರೈಸ್ತ ಭಕ್ತಿ ಸಂಗೀತ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಉದ್ಘಾಟಿಸಿ ಸಂಗೀತವನ್ನು ಆಲಿಸಲು ಭಾಷೆಗಳ ತೊಡಕು ಇಲ್ಲ ಸಂಗೀತವೊಂದೆ ಧರ್ಮ ದೇಶ, ಸಂಸ್ಕøತಿಯನ್ನು ಬೆಸೆಯುವ ಮತ್ತು ಒಗ್ಗೂಡಿಸುವ ಒಂದು ಸಾಧನವಾಗಿದೆ. ಪರಸ್ಪರ ಜನರನ್ನು ಒಗ್ಗೂಡಿಸುವ ಕೆಲಸವನ್ನು ಸಂಗೀತದಿಂದ ಮಾತ್ರ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಶಾಂತ್ ಜತ್ತನ್ನ ನೇತೃತ್ವದ ಬಿಗ್ ಜೆ ಮೀಡಿಯಾ ನೆಟ್ವರ್ಕ್ ತನ್ನ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬರ ಮನೆಗೆ ದೇವರ ವಾಕ್ಯವನ್ನು ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನಾರ್ಹ ಎಂದರು.
ಸಭಾ ಕಾರ್ಯಕ್ರಮದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ 12 ಮಂದಿ ಸ್ಪರ್ಧಾಳುಗಳ ಪಯ್ಕಿ 10 ಮಂದಿ ಸ್ಪರ್ಧಾಳುಗಳಾದ ರೀಮಾ ಪಾಂಡ್ಯ, ಆಗ್ನೇಸ್ ಜೇನ್, ಜನೀಷಾ ಡಿಸೋಜಾ, ಅಕ್ಷಾ, ಸುಸಾನ್ ಮೆಂಡೊನ್ಸಾ, ಶನಯ್ಯಾ ಬಿ ಮಾಬೆನ್, ಲೀಝಾ, ಅಂಜೇಲಾ, ಸವಿನ್ ಕರ್ಕಡ ಮತ್ತು ಶರ್ವಿನ್ ತಮ್ಮ ಭಕ್ತಿ ಸಂಗೀತದ ಪ್ರದರ್ಶನ ನೀಡಿದರು.
ಅಚಿತಿಮ ಸುತ್ತಿನ ತೀರ್ಪುಗಾರರಾದ ವಂ ಡೆನಿಸ್ ಡೆಸಾ ಕುಂತಳನಗರ, ವಂ. ವಲೇರಿಯನ್ ಮೆಂಡೊನ್ಸಾ ಉಡುಪಿ, ಜಾನೆಟ್ ಸ್ನೇಹಲತಾ ಉಡುಪಿ, ಸಂಜಯ್ ಜಾನ್ ರೊಡ್ರಿಗಸ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಸಿಎಸ್ಐ ಸಭೆಯ ವಂ ಸ್ಟೀವನ್ ಸವೋತ್ತಮ, ಫುಲ್ ಗೋಸ್ಪಲ್ ಅಸೋಸಿಯೇಶನ್ ಉಡುಪಿ ಜಿಲ್ಲೆ ಇದರ ಅಧ್ಯಕ್ಷರಾದ ಪಾಸ್ಟರ್ ಜೋಸೇಫ್ ಜಮಖಂಡಿ, ಕೊಳಲಗಿರಿ ಸಂತ ಅಂತೋನಿ ಸೀರಿಯನ್ ಓರ್ಥೊಡಕ್ಸ್ ಚರ್ಚಿನ ವಂ. ಲೋರೆನ್ಸ್ ಡೇವಿಡ್ ಕ್ರಾಸ್ತಾ, ಯುಬಿಎಂ ಡಿಸ್ಟ್ರಿಕ್ಟ್ ಚರ್ಚ್ ಬೋರ್ಡ್ ಇದರ ಜಯಪ್ರಕಾಶ್ ಸೈಮನ್ಸ್, ಯುನಾಯ್ಟೆಡ್ ಬಾಸೆಲ್ ಮಿಶನ್ ಚರ್ಚ್ ಕೌನ್ಸಿಲ್ ಮುಂಬೈ ಇದರ ಅಧ್ಯಕ್ಷರಾದ ಸ್ಯಾಮ್ಸನ್ ಫ್ರ್ಯಾಂಕ್, ಬಿಗ್ ಜೆ ನೆಟ್ ವರ್ಕ್ ಇದರ ನಿರ್ದೇಶಕರಾದ ಪ್ರಶಾಂತ್ ಜತ್ತನ್ನ ಉಪಸ್ಥಿತರಿದ್ದರು.