ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿದ ಸಿಂಗಂ ಅಣ್ಣಾಮಲೈ; ಸೆಲ್ಫಿಗೆ ಮುಗಿ ಬಿದ್ದ ಜನ
ಬೆಂಗಳೂರು/ಕೇರಳ: ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಐಪಿಎಸ್ ಹುದ್ದೆಗೆ ರಾಜಿನಾಮೆ ಕೊಟ್ಟು ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿದ್ದಾರೆ.
ಇತ್ತೀಚೆಗೆ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ ಬಳಿಕ ಮೊದಲ ಬಾರಿಗೆ ಸಂಕ್ರಾಂತಿ ದಿನ ಮಣಿಕಂಠನ ದರ್ಶನ ಮಾಡಲು ಅಣ್ಣಾಮಲೈ ಶಬರಿಮಲೆ ಗೆ ಬಂದಿದ್ದರು. ಖಾಕಿ ಯೂನಿಫಾರ್ಮ್ ಕಳಚಿ ಕಪ್ಪು ಲುಂಗಿ , ಹೆಗಲಿಗೊಂದು ಕಪ್ಪು ಶಾಲು ಹಾಕಿ 18 ಮೆಟ್ಟಿಲೇರಿ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದಾರೆ.
ಅಣ್ಣಾಮಲೈ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಕೇರಳದಲ್ಲೂ ಕೂಡ ಚಿರಪರಿಚಿತರು ಎನ್ನುವುದಕ್ಕೆ ಸಾಕ್ಷಿಯಾಗಿ ಬೆಟ್ಟ ಹತ್ತುತ್ತಾ, ಇಳಿಯುತ್ತಾ ಮಾಲೆ ಹಾಕಿದ ಅಯ್ಯಪ್ಪ ಭಕ್ತರು ಅಣ್ಣಾಮಲೈ ಕಂಡು ಸೆಲ್ಫೀಗೆ ಮುಗಿಬಿದ್ದಿದ್ದಾರೆ. ಎಲ್ಲರೂ ಸಿಂಗಂ ಜೊತೆ ಕೈ ಕುಲುಕಿ ಮಾತನಾಡಿದ್ದಾರೆ. ಶಬರಿಮಲೆಗೆ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಭಕ್ತರು ಭೇಟಿಕೊಟ್ಟು ದರ್ಶನ ಪಡೆಯುತ್ತಾರೆ. ಮಲೆಗೆ ಬಂದ ಹೆಚ್ಚಿನವರಿಗೆ ಅಣ್ಣಾಮಲೈ ಬಗ್ಗೆ ಗೊತ್ತಿತ್ತು ಇದರಿಂದಾಗಿ ಜನರು ಅವರೊಂದಿಗೆ ಸೆಲ್ಫಿ ತೆಗೆಯುವ ಇಚ್ಚೇಯನ್ನು ವ್ಯಕ್ತಪಡಿಸಿದರು. ಅಭಿಮಾನಗಳ ಉತ್ಸಾಹಕ್ಕೆ ನೋವುಂಟಾಗಬಾರದೆಂಬ ನಿಟ್ಟಿನಲ್ಲಿ ಎಲ್ಲರೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟರು.
ಇದೇ ವೇಳೆ ಕೇರಳದ ಸ್ಥಳೀಯ ಎಸ್ ಪಿ ಅಣ್ಣಾಮಲೈ ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು. ಇದೇ ವೇಳೆ ಅವರು ಈ ಮೊದಲು ಸೇವೆ ಸಲ್ಲಿಸಿದ್ದ ಉಡುಪಿಯ ಮಾಧ್ಯಮ ಮಿತ್ರರು ಇದೇ ವೇಳೆ ಶಬರಿಮಲೆಗೆ ಭೇಟಿ ನೀಡಿದ್ದರಿಂದ ಕಾಕತಾಳಿಯವಾಗಿ ಅಣ್ಣಾಮಲೈ ಅವರನ್ನು ಭೇಟಿಯಾಗುವ ಅವಕಾಶ ಪಡೆದುಕೊಂಡರಲ್ಲದೆ ಜೊತೆಯಾಗಿ ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡರು.
ಈ ವೇಳೆ ಉಡುಪಿ ಮಾಧ್ಯಮದವರೊಂದಿಗೆ ಮಾತನಾಡಿದ ಅಣ್ಣಾಮಲೈ ಬಹಳ ಸಮಯದಿಂದ ಮಲೆಗೆ ಬರುವ ಸಂಕಲ್ಪ ಮಾಡಿದ್ದೆ. ಕೆಲಸದ ಒತ್ತಡದಲ್ಲಿ ಆಗಿರಲಿಲ್ಲ. ಮುಂದೇನು ಅಂತ ಆಮೇಲೆ ಹೇಳ್ತೇನೆ. ಸದ್ಯ ದೇವರ ದರ್ಶನ ಮಾಡಿದ್ದೇನೆ ಎಂದು ಹೇಳಿದರು.