ಶರತ್ ಹತ್ಯಾ ಆರೋಪಿಗಳ ಬಂಧನವಾಗದೆ ಬಿಜೆಪಿ ಶಾಂತಿ ಸಭೆಯಲ್ಲಿ ಭಾಗವಹಿಸಲ್ಲ ; ನಳಿನ್ ಕುಮಾರ್ ಕಟೀಲ್
ಮಂಗಳೂರು: ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಹತ್ಯಾ ಆರೋಪಿಗಳನ್ನು ಬಂಧಿಸಿದ ಬಳಿಕವೇ ಶಾಂತಿ ಸಭೆ ನಡೆಸಬೇಕು. ಆರೋಪಿಗಳ ಬಂಧನವಾಗದೆ ಸಭೆ ನಡೆಸಿದರೆ ಬಿಜೆಪಿ ಸಭೆಯನ್ನು ಬಹಿಷ್ಕರಿಸುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಅವರು ಬುಧವಾರ ನಗರದಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಶರತ್ ಆರೋಪಿಗಳನ್ನು ಬಂಧಿಸುವುದನ್ನು ಬಿಟ್ಟು ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ಸಚಿವ ರೈ ಮೊದಲು ರಾಜಕಾರಣ ಮಾಡುವುದನ್ನು ಬಿಟ್ಟು, ಜಿಲ್ಲೆಯಲ್ಲಿ ಶಾಂತಿ ನೆಲೆಗೊಳಿಸುವ ಪ್ರಯತ್ನ ಮಾಡಲಿ ಎಂದು ಅವರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ನಡೆಯುವ ಅಹಿತಕರ ಘಟನೆಗೆ ರಾಜ್ಯ ಸರಕಾರ ನೇರ ಹೊಣೆಯಾಗಿದ್ದು ಪೊಲೀಸ್ ಇಲಾಖೆಯನ್ನು ಸರಕಾರ ತನ್ನ ಕೈಗೊಂಬೆಯಾಗಿಸಿದೆ. ಕಾಂಗ್ರೆಸ್ ತನ್ನ ರಾಜಕೀಯ ಲಾಭಕ್ಕಾಗಿ ಜಿಲ್ಲೆಯ ಜನತೆಯನ್ನು ಬಲಿಕೊಡುತ್ತಿದ್ದು, ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಅಹಿತಕರ ಘಟನೆಗಳ ಬಗ್ಗೆ ರಾಷ್ಟ್ರೀಯ ತನಿಖಾದಳ ತನಿಖೆ ನಡೆಸಿದರೆ ಕಾಂಗ್ರೆಸಿನ ನಿಜ ಬಣ್ಣ ಬಯಲಾಗಲಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಸತ್ಯಾಸತ್ಯತೆ ಹೊರಬರಲು ಸಿಬಿಐಗೆ ಒಪ್ಪಿಸಬಹುದಿತ್ತು. ಆದರೆ ಸರಕಾರ ಸಿಬಿಐಗೆ ಒಪ್ಪಿಸುತ್ತಿಲ್ಲ ಅಲ್ಲದೆ ರಾಷ್ಟ್ರೀಯ ತನಿಖಾ ದಳವನ್ನು ಕರೆಸುತ್ತಿಲ್ಲ. ಕಾಂಗ್ರೆಸ್ ಪ್ರೇರಿತ ಶಕ್ತಿಗಳಿಂದಲೇ ಇಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರೈ ಹಾಗೂ ಸಚಿವ ಖಾದರ್ ಅವರ ಕ್ಷೇತ್ರದಲ್ಲಿಯೇ ನಿರಂತರವಾಗಿ ಹತ್ಯೆ, ಗಲಭೆಯಂತಹ ಪ್ರಕರಣಗಳು ನಡೆಯುತ್ತಿದ್ದು ಇದಕ್ಕೆ ಇಬ್ಬರೂ ಸಚಿವರೂ ನೇರ ಹೊಣೆಯಾಗಿದ್ದಾರೆ. ತಕ್ಷಣ ಇಬ್ಬರೂ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಶರತ್ ಹತ್ಯೆಗೆ ಸಂಬಂಧಿಸಿ ಪೊಲೀಸರು ಇನ್ನೂ ಆರೋಪಿಗಳನ್ನು ಬಂಧಿಸಿಲ್ಲ. ಪೋಲಿಸ್ ಇಲಾಖೆಯನ್ನು ಕಾಂಗ್ರೆಸ್ ತನಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದು, ಮುಖ್ಯಮಂತ್ರಿ ಮಂಗಳೂರಿಗೆ ಆಗಮಿಸಿದರೂ ಗಂಭೀರ ಸ್ಥಿತಿಯಲ್ಲಿದ್ದ ಶರತ್ ನನ್ನು ನೋಡುವ ಕನಿಷ್ಠ ಸೌಜನ್ಯ ತೋರಿಸಲಿಲ್ಲ. ಕನಿಷ್ಟ ಪಕ್ಷ ವೈದ್ಯರಿಂದ ಅತನ ಆರೋಗ್ಯದ ಮಾಹಿತಿ ಕೂಡ ಪಡೆಯಲಿಲ್ಲ ಎಂದ ಸಂಸದ ನಳಿನ್ ಎಸ್ ಡಿಪಿಐ ಚುನಾವಣೆಗೆ ನಿಲ್ಲುವುದರಿಂದ ಕಾಂಗ್ರೆಸಿಗೆ ತನ್ನ ಮತಬ್ಯಾಂಕ್ ಕೈ ತಪ್ಪಿ ಹೋಗುವ ಭಯ ಆವರಿಸಿದೆ. ಅದಕ್ಕಾಗಿ ಮುಸಲ್ಮಾನರನ್ನು ಎತ್ತಿಕಟ್ಟುವ ಕೆಲಸಕ್ಕೆ ಸಚಿವರು ಮುಂದಾಗಿದ್ದಾರೆ. ಅಲ್ಲದೆ ಸಂಘ ಪರಿವಾರದ ಸಂಘಟನೆಗಳ ನಾಯಕರನ್ನು ಜೈಲಿಗೆ ತಳ್ಳುವ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದಾರೆ ಎಂದರು.
ಶರತ್ ಹತ್ಯಾ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಗುರುವಾರ ನೆಹರೂ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಿದ್ದು, ಪೋಲಿಸರು ಅನುಮತಿ ನೀಡದಿದ್ದರೆ ರಾತ್ರಿಯವರೆಗೂ ಅನುಮತಿಗಾಗಿ ಕಾಯುತ್ತೇವೆ. ಈ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡ್ಯೂರಪ್ಪ ಭಾಗವಹಿಸಲಿದ್ದಾರೆ ಎಂದರು.
ಸಚಿವ ಸದಾನಂದ ಗೌಡ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರಿ ರಾಜ್ಯದ ಯಾವುದೇ ಭಾಗದಲ್ಲಿ ಸ್ಪರ್ಧಿಸಿದರೂ ಗೆಲ್ಲುವ ತಾಕತ್ತಿದೆ ಆದರೆ ರಮಾನಾಥ ರೈ ಬಂಟ್ವಾಳ ಬಿಟ್ಟು ಹೊರಗೆ ಬಂದು ಗೊತ್ತಿಲ್ಲ ೆಂದರು.
ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಮಾಜಿ ಸಚಿವ ಕೃಷ್ಣ ಪಾಲೆಮಾರ್, ಮಾಜಿ ಶಾಸಕ ಯೋಗಿಶ್ ಭಟ್, ಮೋನಪ್ಪ ಭಂಡಾರಿ, ಪಕ್ಷದ ನಾಯಕರಾದ ವೇದವ್ಯಾಸ ಕಾಮತ್, ಜಿತೇಂದ್ರ ಕೊಟ್ಟಾರಿ, ಸುದರ್ಶನ್, ಕಿಶೋರ್ ರೈ ಇತರರು ಉಪಸ್ಥಿತರಿದ್ದರು.