ಶರವು ದೇವಸ್ಥಾನ ರಸ್ತೆಯ ಡ್ರೈನೇಜ್ ಕಾಮಗಾರಿಗೆ ಶಾಸಕ ಕಾಮತ್ ಸೂಚನೆ
ಮಂಗಳೂರಿನ ಶರವು ಗಣಪತಿ ದೇವಸ್ಥಾನದ ರಸ್ತೆಗೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಭೇಟಿ ನೀಡಿ ಒಳಚರಂಡಿ ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿದರು.
ನಂತರ ಮಾತನಾಡಿದ ಶಾಸಕ ಕಾಮತ್ ಅವರು, ಶರವು ಗಣಪತಿ ದೇವಸ್ಥಾನ ಇರುವ ರಸ್ತೆಯಲ್ಲಿ ಡ್ರೈನೇಜ್ ವ್ಯವಸ್ಥೆ ಸಮರ್ಪಕವಾಗಿಲ್ಲ ಎನ್ನುವ ದೂರು ಬಹಳ ಸಮಯದಿಂದ ಇದೆ. ಆ ನಿಟ್ಟಿನಲ್ಲಿ ಪಾಲಿಕೆ ಅಧಿಕಾರಿಗಳನ್ನು ಕರೆಸಿ ಡ್ರೈನೇಜ್ ಕೆಲಸ ಕಾರ್ಯಗಳು ಶೀಘ್ರದಲ್ಲಿ ಆರಂಭವಾಗಬೇಕೆಂದು ತಿಳಿಸಿದ್ದೇನೆ. ಶರವು ದೇವಳ ಇರುವ ರಸ್ತೆ ಜನನಿಬಿಡ ಪ್ರದೇಶವಾಗಿದ್ದು ಕಾಮಗಾರಿ ನಡೆಯುವಾಗ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಟ್ರಾಫಿಕ್ ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಕಾಮಗಾರಿ ಗುರುವಾರದಿಂದ ಪ್ರಾರಂಭವಾಗಿ ಅರ್ಹನಿಶಿಯಾಗಿ ನಡೆಸಬೇಕೆಂದು ಹೇಳಿದ್ದೇನೆ. ಈ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗುತ್ತದೆ ಎಂದು ತಿಳಿಸಿದರು.
ಶಾಸಕರೊಂದಿಗೆ ಸ್ಥಳೀಯ ಮನಪಾ ಸದಸ್ಯೆ ಪೂರ್ಣಿಮಾ, ಬಿಜೆಪಿ ವಾರ್ಡ್ ಅಧ್ಯಕ್ಷ ಮುರಳಿಧರ್ ನಾಯಕ್, ಬಿಜೆಪಿ ಮುಖಂಡ ವಸಂತ ಜೆ ಪೂಜಾರಿ ಹಾಗೂ ಸ್ಥಳೀಯರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.