ಶಸ್ತ್ರ ಚಿಕಿತ್ಸಕರ ಗೈರು: ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆಗೆ ತಾ.ಪಂ ಸಭೆಯಲ್ಲಿ ಆದೇಶ
ಕುಂದಾಪುರ: ಬೈಂದೂರು ಸಮುದಾಯ ಆಸ್ಪತ್ರೆಯಲ್ಲಿ ಶಸ್ತøಚಿಕಿತ್ಸಕ ವೈದ್ಯರು ಕರ್ತವ್ಯದ ವೇಳೆ ಆಸ್ಪತ್ರೆಯಲ್ಲಿರುವುದಿಲ್ಲ ಎಂಬ ಆರೋಪಗಳು ಕೇಳಿಬಂದಿದೆ. ಸ್ವತಃ ನಾನೇ ಆಸ್ಪತ್ರೆಗೆ ಹೋದಾಗಲೂ ವೈದ್ಯರು ಇರಲಿಲ್ಲ. ಈ ಬಗ್ಗೆ ಸಾರ್ವಜನಿಕ ದೂರುಗಳು ಬರುತ್ತಿದ್ದು, ತಕ್ಷಣವೇ ಆರೋಗ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯ ಜಗದೀಶ್ ದೇವಾಡಿಗ ಹೇಳಿದರು.
ಗುರುವಾರ ಕುಂದಾಪುರ ತಾ.ಪಂ ಸಭಾಂಗಣದಲ್ಲಿ ನಡೆದ ಬೈಂದೂರು ತಾ.ಪಂ ನ ಪ್ರಥಮ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಗ್ಗೆ ಮಾತನಾಡಿದ ತಾಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಶಸ್ತøಚಿಕಿತ್ಸಕರ ಬಗ್ಗೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಸರ್ಕಾರಿ ಆಸ್ಪತ್ರೆಗೆ ಕರ್ತವ್ಯಕ್ಕೆ ಬಾರದೆ ಬೇರೆಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನುವ ಆರೋಪಗಳೂ ಇವೆ. ಈ ಬಗ್ಗೆ ಹಾಜರಾತಿ ಪುಸ್ತಕವನ್ನು ಪರಿಶೀಳನೆ ನಡೆಸಬೇಕು. ಅಲ್ಲದೇ ಎರಡು ತಿಂಗಳ ಸಿಸಿ ಟಿವಿ ಫೂಟೇಜ್ ಅನ್ನು ತೆಗೆಸಿ ಪರಿಶೀಲನೆ ನಡೆಸಿ ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಕೂಡಲೇ ಅವರ ವಿರುದ್ದ ಶಿಸ್ತುಕ್ರಮ ಜರುಗಿಸಬೇಕು ಎಂದು ಸೂಚಿಸಿದರು.
ಕುಂದಾಪುರ ತಾ. ಆಸ್ಪತ್ರೆಯ ವೈದ್ಯಾಧಿಕಾರಿ ಹೆಚ್ಚುವರಿ ಸಂಬಳ ಪಡೆಯುತ್ತಿದ್ದು, ಎರಡು ವರ್ಷಗಳ ಹಿಂದೆಯೇ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಕೇಳಲಾಗಿತ್ತು. ಆದರೆ ಆ ಪ್ರಶ್ನೆ ಪ್ರತಿ ಬಾರಿ ಸಾಮಾನ್ಯ ಸಭೆಯ ಮಾರ್ಗಸೂಚಿ ಪುಸ್ತಕದಲ್ಲಿ ಇರುತ್ತದೆ ಬಿಟ್ಟರೇ ಈ ಬಗ್ಗೆ ಸಂಬಂಧಪಟ್ಟವರಿಂದ ಉತ್ತರ ಬಂದಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಯವರಿಗೆ ಸಾಮಾನ್ಯ ಸಭೆಗೆ ಬರುವಂತೆ ನೋಟಿಸ್ ನೀಡಿದರೂ ಹಲವು ಸಭೆಗಳಿಗೆ ಗೈರಾಗಿದ್ದಾರೆ ಎಂದು ಸದಸ್ಯ ಕಡ್ಕೆ ಪ್ರವೀಣ್ ಕುಮಾರ್ ಶೆಟ್ಟಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ ಅಧ್ಯಕ್ಷ ಮಹೇಂದ್ರ ಪೂಜಾರಿ, ಪ್ರತಿ ಸಾಮಾನ್ಯ ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದರೂ ನಿರ್ಲಕ್ಷಿಸಿದ್ದಾರೆ. ಅವರ ವಿರುದ್ದ ಶಿಸ್ತು ಕ್ರಮ ಜರಗಿಸಲು ಅವಕಾಶ ಇದ್ದರೆ ಶಿಸ್ತು ಕ್ರಮ ಜರಗಿಸಬೇಕು ಎಂದರು.
ಜಗದೀಶ್ ದೇವಾಡಿಗ ಮಾತನಾಡಿ, ಬೈಂದೂರು ತಾ.ಪಂ ಪ್ರತ್ಯೇಕವಾದರೂ ಮೊದಲ ಸಾಮಾನ್ಯ ಸಭೆ ಕುಂದಾಪುರದಲ್ಲಿ ನಡೆಯುತ್ತಿರುವುದು ಬೇಸರದ ಸಂಗತಿ. ಇನ್ನೆರಡು ಮೂರು ತಿಂಗಳು ಮಾತ್ರ ನಮ್ಮ ಅವಧಿ. ಹೀಗಾಗಿ ಮುಂದಿನ ಸಾಮಾನ್ಯ ಸಭೆಯನ್ನು ಬೈಂದೂರಿನಲ್ಲಿ ನಡೆಸಲು ಕ್ರಮ ಕೈಗೊಳ್ಳಬೇಕು. ಕಚೇರಿ ಹಾಗೂ ಸಭಾಭವನದ ಕೊರತೆ ಇರುವುದು ನಮ್ಮ ಗಮನದಲ್ಲಿದೆ. ಆದರೆ ನಿಮ್ಮದೇ ಪಕ್ಷ ಹಾಗೂ ಶಾಸಕರು ಅಧಿಕಾರದಲ್ಲಿರುವುದರಿಂದ ಈ ಬಗ್ಗೆ ಕ್ರಮ ವಹಿಸಬಹುದು ಎಂದು ಸಲಹೆ ನೀಡಿದರು. ಇದಕ್ಕೆ ಕೆಲ ಸದಸ್ಯರು ಧ್ವನಿಗೂಡಿಸಿದರು.
ಈಗಾಗಲೇ ಪಟ್ಟಣ ಪಂಚಾಯಿತಿ ಕಟ್ಟದ ಕೋಣೆಯೊಳಗೆ ಬೈಂದೂರು ತಾ.ಪಂ ಕಾರ್ಯನಿರ್ವಹಿಸುತ್ತಿದ್ದು, ತಾ.ಪಂ ಕಾರ್ಯವನ್ನು ಸ್ಥಗಿತ ಗೊಳಿಸುವಂತೆ ನೋಟಿಸ್ ನೀಡಿದ್ದಾರೆ. ಅಥವಾ ಬಾಡಿಗೆ ಹಣ ನೀಡಿ ಮುಂದುವರಿಯುವಂತೆ ಸೂಚನೆ ನೀಡಿದ್ದಾರೆ. ಸರಕಾರಿ ಕಟ್ಟಡದಲ್ಲಿ ಬಾಡಿಗೆ ನೀಡಿ ನಮ್ಮ ಕಚೇರಿ ಕಾರ್ಯನಿರ್ವಹಿಸುವುದಾದರೇ ಖಾಸಗಿ ಕಟ್ಟಡದಲ್ಲಿಯೂ ಕಾರ್ಯ ನಿರ್ವಹಿಸಬಹುದು. ಈ ಸಮಸ್ಯೆ ಸರ್ಕಾರದ ಮಟ್ಟದಲ್ಲಿ ಬಗೆಹರಿಯಬೇಕಿರುವುದರಿಂದ ಈ ಬಗ್ಗೆ ಕೂಡಲೇ ಸರಕಾರದ ಗಮನ ಸೆಳೆಯಲಾಗುವುದು ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಟರಾಜ್ ಶೆಟ್ಟಿ ಹೇಳಿದರು.
ಸದಸ್ಯ ಜಗದೀಶ್ ದೇವಾಡಿಗ ಮಾತನಾಡಿ, ಬೈಂದೂರು ಪರಿಸರದಲ್ಲಿ ಜನಪ್ರತಿನಿಧಿಯೊಬ್ಬರು ಅಕ್ರಮ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಒಂದಷ್ಟು ಗೊಂದಲಗಳಿದ್ದು, ಪೋಲಿಸರು ದಾಳಿ ನಡೆಸಿ ದಂಡ ಹಾಕಿ ಬಿಟ್ಟಿದ್ದಾರೆಂಬ ಮಾಹಿತಿ ಬಂದಿದೆ. ಅದರ ಸತ್ಯಾಸತ್ಯೆಯ ತನಿಖೆ ನಡೆಸಬೇಕು. ಅಕ್ರಮವೋ ಸಕ್ರಮವೋ ಗೊತ್ತಿಲ್ಲ. ಆದರೆ ಗಣಿಗಾರಿಕೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಜಗದೀಶ್ ದೇವಾಡಿಗ ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಹೇಂದ್ರ ಪೂಜಾರಿ, ಅಕ್ರಮ ಗಣಿಗಾರಿಕೆಯ ಬಗ್ಗೆ ನಿಮ್ಮ ಕಾಳಜಿ ಮೆಚ್ಚುವಂತದ್ದು. ಗಣೆಗಾರಿಕೆ ವಿಚಾರದಲ್ಲಿ ತಹಶೀಲ್ದಾರ್ ಅವರು ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೇ ಗೊತ್ತಿಲ್ಲ ಎಂಬಂತೆ ಸುಮ್ಮನಾಗುತ್ತಾರೆ. ಬೈಂದೂರಿನ ಹಲವು ಭಾಗಗಳಲ್ಲಿ ಅಕ್ರಮ ಕಲ್ಲುಕೋರೆಯಂತಹ ಗಣಿಗಾರಿಕೆ ನಡೆದರೂ ತಹಶೀಲ್ದಾರ್ ಅವರು ಕಣ್ಣು ಮುಚ್ಚಿ ಕುಳಿತಂತೆ ಕಾಣುತ್ತಿದೆ. ಅವರ ಈ ನಡೆ ಇದಕ್ಕೆಲ್ಲಾ ಅವರ ಬೆಂಬಲ ಇರಬಹುದಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. ಸರ್ಕಾರದ ಸೊತ್ತುಗಳನ್ನು ರಕ್ಷಿಸುವುದು ನಿಮ್ಮ ಕರ್ತವ್ಯ, ಇನ್ನು ಮುಂದಾದರೂ ಇದರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಿ. ಅಕ್ರಮ ಗಣಿಗಾರಿಕೆಯ ವಿರುದ್ದ ಯಾರೇ ಶಾಮೀಲಾಗಿದ್ದರೂ ಮುಲಾಜಿಲ್ಲದೇ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಂಗನವಾಡಿ ಕಟ್ಟಡ ಹಾಗೂ ಜಾಗವನ್ನು ಸಮೀಪದ ಖಾಸಗಿ ವ್ಯಕ್ತಿಯೋರ್ವರಿಗೆ 94/ಸಿ ಅಡಿಯಲ್ಲಿ ಮಂಜೂರು ಮಾಡಲಾಗಿದೆ. ಸುಮಾರು 26 ವರ್ಷಗಳಿಂದ ಅಂಗನವಾಡಿ ಕಾರ್ಯಚರಿಸುತ್ತಿರುವ ಬಗ್ಗೆ ದಾಖಲೆ ಇದೆ. ಪ್ರಸ್ತುತ 40 ಮಕ್ಕಳು ಅಂಗನವಾಡಿ ಶಿಕ್ಷಣ ಪಡೆಯುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯ ನಡೆಗೆ ಅಂಗನವಾಡಿ ಖಾಸಗಿ ವ್ಯಕ್ತಿಯ ಪಾಲಾಗುತ್ತಿರುವುದು ದುರದೃಷ್ಟಕರ. ಇದರ ವಿರುದ್ದ ತಹಶೀಲ್ದಾರ್ ಅವರು ಸ್ಥಳಕ್ಕೆ ತೆರಳಿ ಪರೀಶಿಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಪುಷ್ಪರಾಜ್ ಶೆಟ್ಟಿ ಸೂಚಿಸಿದರು.
ಸಭೆ ಆರಂಭಕ್ಕೂ ಮುನ್ನ ಸಾಮನ್ಯ ಸಭೆ ಮಾರ್ಗಸೂಚಿ ಪುಸ್ತಕ ತಡವಾಗಿ ಬಂದಿರುವ ಕುರಿತು ಸದಸ್ಯೆ ಶ್ಯಾಮಲಾ ಕುಂದರ್ ಪ್ರಸ್ತಾಪಿಸಿದರು. ಅಧ್ಯಕ್ಷ ಮಹೇಂದ್ರ ಪೂಜಾರಿ ಅವರು ಬೈಲಾ ಅನುಮೋದನೆ ಪಡೆದ ಬಳಿಕ ಚರ್ಚಿಸೋಣ, ಅದಕ್ಕೂ ಮುನ್ನ ಚರ್ಚಿಸಿದರೆ ಕಡತಗಳಲ್ಲಿ ದಾಖಲಾಗುವುದಿಲ್ಲ ಎಂದಾಗ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಅಧ್ಯಕ್ಷರ ನಡುವೆ ವಾಕ್ಸಮರ ನಡೆಯಿತು. ಈ ವೇಳೆಯಲ್ಲಿ ಮತ್ತೆ ಗಂಭೀರ ಚರ್ಚೆಗೆ ಮುಂದಾದ ಶ್ಯಾಮಲಾ ಕುಂದರ್ ಅವರ ನಡೆಗೆ ಅಧ್ಯಕ್ಷ ಮಹೇಂದ್ರ ಪೂಜಾರಿಯವರು ಪಂಚಾಯತ್ ರಾಜ್ ಕಾಯ್ದೆ ನಿಯಮಗಳ ಕುರಿತು ನಿಮ್ಮನ್ನು ಸೇರಿದಂತೆ ಎಲ್ಲಾ ಸದಸ್ಯರಿಗೆ ಕಾರ್ಯಗಾರ ನಡೆಸಬೇಕು ಎಂದು ವ್ಯಂಗ್ಯವಾಡಿದರು. ಬಳಿಕ ಎಲ್ಲಾ ಸದಸ್ಯರಿಗೂ ಬೈಲ ನೀಡಿ ಅದರ ಅನುಮೋದನೆಗಾಗಿ ಒಪ್ಪಿಗೆ ಪಡೆಯಲಾಯಿತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯರು ಬೈಲಾ ಪುಸ್ತಕವನ್ನು ಈಗ ನೀಡಿದರೇ ಹೇಗೆ ಅನುಮೋದನೆ ಮಾಡುವುದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದು, ಬಳಿಕ ಬೈಂದೂರು ಕಾರ್ಯ ನಿರ್ವಹಣಾಧಿಕಾರಿ ಭಾರತಿ ಹಾಗೂ ಸಿಬ್ಬಂದಿ ಸಂಪೂರ್ಣ ಬೈಲಾವನ್ನು ಓದಿ ಹೇಳಿದ ನಂತರ ಅನುಮೋದನೆ ನೀಡಲಾಯಿತು.
ತಾ.ಪಂ ಅಧ್ಯಕ್ಷ ಮಹೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಾಲಿನಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್, ಬೈಂದೂರು ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಭಾರತಿ, ಕುಂದಾಪುರ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು.