ಶಹಬ್ಬಾಸ್ ‘ಸೈನ್ ಇನ್ ಸೆಕ್ಯೂರಿಟಿ’! ಕಳ್ಳತನಕ್ಕೆ ಯತ್ನಿಸುತ್ತಿರುವಾಗಲೇ ಆರೋಪಿ ಲಾಕ್

Spread the love

ಶಹಬ್ಬಾಸ್ ‘ಸೈನ್ ಇನ್ ಸೆಕ್ಯೂರಿಟಿ’! ಕಳ್ಳತನಕ್ಕೆ ಯತ್ನಿಸುತ್ತಿರುವಾಗಲೇ ಆರೋಪಿ ಲಾಕ್

  • ಮಾಹಿತಿ ನೀಡಿದ ಹತ್ತೇ ನಿಮಿಷದೊಳಗೆ ಆರೋಪಿಯನ್ನು ಸೆರೆ ಹಿಡಿದ ಗಂಗೊಳ್ಳಿ ಪೊಲೀಸರು
  • ವಾರದಲ್ಲೇ 2 ಕಳ್ಳತನ‌ ಪ್ರಕರಣಗಳನ್ನು ವಿಫಲಗೊಳಿಸಿದ “ಸೇಫ್ ಕುಂದಾಪುರ”

ಕುಂದಾಪುರ: ಸಿಸಿ ಟಿವಿ ಮಾನಿಟರಿಂಗ್‌ ತಂಡದ ಸಮಯಪ್ರಜ್ಞೆಯಿಂದಾಗಿ ಸೊಸೈಟಿಯೊಂದರ ಕಿಟಕಿಯ‌ ಸರಳು‌ ಮುರಿದು ಒಳ ನುಗ್ಗಿದ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯುವಲ್ಲಿ ಗಂಗೊಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇರಳದ ಕೊಲ್ಲಂ ಜಿಲ್ಲೆಯ ನಿವಾಸಿ ಪ್ರಕಾಶ್ ಬಾಬು (44) ಬಂಧಿತ ಆರೋಪಿ. ಬಂಧಿತ ಆರೋಪಿಯಿಂದ 2,000 ರೂಪಾಯಿ ಮೌಲ್ಯದ ಹಣ, ಕಳವು ಮಾಡಲು ಬಂದ ಒಂದು ಕೆಎ-05-ಕೆಎ 1353 ನೇ ಸುಝುಕಿ ಎಕ್ಸೆಸ್ ಮೋಟಾರು ಸೈಕಲ್, 1 ಮೊಬೈಲ್ ಸೆಟ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮೂರು ರಾಡ್, ಕಟ್ಟಿಂಗ್ ಪ್ಲೇಯರ್ ಇನ್ನಿತರ ವಸ್ತುಗಳನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಶುಕ್ರವಾರ ತಡರಾತ್ರಿ 1:44 ರ ಸುಮಾರಿಗೆ ಮುಳ್ಳಿಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ‌ ಸಂಘದ ಹೊಸಾಡು ಶಾಖಾ ಕಟ್ಟಡದ ಕಿಟಕಿಯ ಸರಳು ಮುರಿದು ಒಳ ಪ್ರವೇಶಿಸಿದ ಪ್ರಕಾಶ್ ಬಾಬು ಸೊಸೈಟಿಯಲ್ಲಿ ಸಿಬ್ಬಂದಿಗಳು ಕುಳಿತುಕೊಳ್ಳುವ ಮೇಜಿನ ಡ್ರಾವರ್ ಇನ್ನಿತರ ಕಡೆಗಳಲ್ಲಿ ತಡಕಾಡಿದ್ದಾನೆ. ಕಳ್ಳ ಒಳ ನುಗ್ಗಿದ ಕೂಡಲೇ ಎಚ್ಚೆತ್ತುಕೊಂಡ ಸೈನ್ ಇನ್‌ ಸೆಕ್ಯೂರಿಟಿಯ ಲೈವ್ ಮಾನಿಟರಿಂಗ್ ಸಿಬ್ಬಂದಿಗಳು ಬೀಟ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಗಂಗೊಳ್ಳಿ ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಬಸವರಾಜ್ ಹಾಗೂ ಸಿಬ್ಬಂದಿಗಳು 10 ನಿಮಿಷದೊಳಗೆ ಸ್ಥಳಕ್ಕಾಗಮಿಸಿ ಕಳ್ಳನನ್ನು ಸೆರೆ ಹಿಡಿದಿದ್ದಾರೆ.

ಶ್ರೀ ಸಿದ್ದಲಿಂಗಯ್ಯ ಟಿ ಎಸ್, ಶ್ರೀ ಪರಮೇಶ್ವರ ಹೆಗಡೆ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಂತೆ ಶ್ರೀ ಬೆಳ್ಳಿಯಪ್ಪ ಕೆ. ಯು ಮಾನ್ಯ ಪೋಲೀಸ್ ಉಪಾಧೀಕ್ಷಕರು ಕುಂದಾಪುರ. ಹಾಗೂ   ಸವಿತೃತೇಜ್ ಪಿ ಡಿ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ನಿರ್ದೇಶನದಂತೆ ಗಂಗೊಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ರವರಾದ   ಹರೀಶ್ ಆರ್ (ಕಾ & ಸು), ಶ್ರೀ ಬಸವರಾಜ ಕನಶೆಟ್ಟಿ (ತನಿಖೆ), ಏ ಎಸ್ ಐ ಅಮೃತೇಶ್ ಹಾಗೂ ಸಿಬ್ಬಂದಿಗಳಾದ ಮೋಹನ ಪೂಜಾರಿ, ನಾಗರಾಜ, ಸಂದೀಪ್ ಕುರಣಿ, ಸತೀಶ್ ದೇವಾಡಿಗ, ರಾಘವೇಂದ್ರ ಪೂಜಾರಿ, ನಿತಿನ್, ಶರಣಪ್ಪ, ರವರು ಭಾಗಹಿಸಿರುತ್ತಾರೆ. ಕಾರ್ಯಾಚರಣೆಯಲ್ಲಿದ್ದರು‌.

ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ತಂಡಕ್ಕೆ  ಪೊಲೀಸ್ ಅಧೀಕ್ಷಕರಾದ ಡಾ. ಅರುಣ ಕೆ. ಐ ಪಿ ಎಸ್ ರವರು ಅಭಿನಂದಿಸಿರುತ್ತಾರೆ.

ಹೊಡೆಯಬೇಡಿ ನಾನೇ ಬರುತ್ತೇನೆ ಸರ್!:
ಗಂಗೊಳ್ಳಿ ಕ್ರೈಂ ಪಿಎಸ್ಐ ಬಸವರಾಜ್ ಸ್ಥಳಕ್ಕಾಗಮಿಸಿ ಕಿಟಕಿಯ ಮೂಲಕ ಲಾಠಿಯಿಂದ‌ ಬಡಿಯುತ್ತಿರುವಾಗ ಕಳ್ಳ ಹೊಡೆಯಬೇಡಿ ಸರ್.. ನಾನೇ ಹೊರಗಡೆ ಬರುತ್ತೇನೆ .. ಹೊಡೆಯಬೇಡಿ ಎಂದು ಗೋಗರೆಯುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಟೋರಿಯಸ್ ಕಳ್ಳ?:
ಬಂಧಿತ ಆರೋಪಿ ಪ್ರಕಾಶ್ ಬಾಬು ನಟೋರಿಯಸ್ ಕಳ್ಳನಾಗಿದ್ದು, ಕೇರಳ, ಕರ್ನಾಟಕ ರಾಜ್ಯಗಳಲ್ಲಿ ಅಲ್ಲಲ್ಲಿ ಕಳ್ಳತನ ನಡೆಸಿದ ಬಗ್ಗೆ ಪ್ರಕರಣ ದಾಖಲಾಗಿದ್ದು, ಹಲವು ಪ್ರಕರಣಗಳಲ್ಲಿ ಶಿಕ್ಷೆಯೂ ಅನುಭವಿಸಿದ್ದಾನೆ. ಅತೀ ಹೆಚ್ಚು ಬೆಂಗಳೂರಿನಲ್ಲೇ ವಾಸವಾಗಿದ್ದ ಈತ ಕನ್ನಡ ಭಾಷೆಯೂ ಸೇರಿದಂತೆ ಹಲವು ಭಾಷೆಗಳನ್ನು ಬಲ್ಲವನಾಗಿದ್ದಾನೆ. 2008 ರಲ್ಲಿ‌ ಕುಂದಾಪುರ ಪೊಲೀಸ್‌ ಠಾಣೆಯಲ್ಲೂ ಈತನ‌ ವಿರುದ್ದ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ವಿಚಾರಣೆಯಲ್ಲಿ ಬಯಲಿಗೆ ಬಂದಿದೆ.

ಈತನ ವಿರುದ್ಧ ಕೇರಳ ರಾಜ್ಯದ ಕುಂಬಳೆ ಪೊಲೀಸ್ ಠಾಣೆಯಲ್ಲಿ, ಕ್ಯಾಲಿಕಟ್ ನ ಮಾರಾಡ ಪೊಲೀಸ್ ಠಾಣೆಯಲ್ಲಿ ತಲಶೇರಿ ಪೊಲೀಸ್ ಠಾಣೆಯಲ್ಲಿ, ಕಣ್ಣೂರು ನಗರ ಪೊಲೀಸ್ ಠಾಣೆಯಲ್ಲಿ, ಆಲಪ್ಪಿ ಮಾವಿಲಕಾರ ಪೊಲೀಸ್ ಠಾಣೆ, ಚೆಂಗನೂರು ಪೊಲೀಸ್ ಠಾಣೆ ಹಾಗೂ ಕರ್ನಾಟಕ ರಾಜ್ಯದಲ್ಲಿ ದ. ಕ ಜಿಲ್ಲೆಯ ಕೊಣಾಜೆ ಠಾಣೆಯಲ್ಲಿ, ಕುಂದಾಪುರ ಠಾಣೆಯಲ್ಲಿ, ಬೆಂಗಳೂರು ಕುಮಾರಸ್ವಾಮಿ ಲೇ ಔಟ್ ಪೊಲೀಸ್ ಠಾಣೆಯಲ್ಲಿ ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾ ಪ್ರಕರಣ ಸೇರಿ ಸುಮಾರು 13 ಕಳವು ಪ್ರಕರಣಗಳಿದ್ದು ಈತನು ದಿನಾಂಕ:15/06/2024 ರಂದು ಕೇರಳ ರಾಜ್ಯದ ಮಾವಿಲಕಾರ ಹಾಗೂ ಚೆಂಗನೂರು ಠಾಣಾ ಸರಹದ್ದಿನ ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡು ಬಂದಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿರುತ್ತದೆ.

ವಾರದಲ್ಲೇ ಎರಡು ಪ್ರಕರಣ:
ಕಮಲಶಿಲೆ ಗೋಶಾಲೆಯಲ್ಲಿ ದುಷ್ಕರ್ಮಿಗಳು ಗೋ‌ ಕಳವಿಗೆ ಯತ್ನಿಸಿದ ಕೂಡಲೇ ದೇವಸ್ಥಾನದ ಭದ್ರತಾ ಸಿಬ್ಬಂದಿ‌ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ ಸೈನ್ ಇನ್‌ ಸೆಕ್ಯೂರಿಟಿ‌ ತಂಡ ಸಂಭಾವ್ಯ ಕಳ್ಳತನವನ್ನು ವಿಫಲಗೊಳಿಸಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಸೊಸೈಟಿ ಕಳ್ಳತನಕ್ಕೆ ಯತ್ನಿಸಿದ ಕಳ್ಳನನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

ಏನಿದು ಸೈನ್ ಇನ್ ಸೆಕ್ಯೂರಿಟಿ?:
ದೇವಸ್ಥಾನ, ಜ್ಯುವೆಲ್ಲರಿ, ಅಂಗಡಿ, ಮನೆ, ಫ್ಲ್ಯಾಟ್ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸುವುದು ಒಂದೆಡೆಯಾದರೆ, ಅಳವಡಿಸಿದ ಸಿಸಿ ಟಿವಿ ದೃಶ್ಯಾವಳಿಗಳನ್ನು ದಿನದ 24 ಗಂಟೆಯೂ ಸತತವಾಗಿ ಹದ್ದಿನ ಕಣ್ಣಿಟ್ಟು ಕಾಯುವುದು ಕಾರ್ಯಾಚರಣೆಯ ಇನ್ನೊಂದು ಭಾಗ, ಟಿವಿ, ಲ್ಯಾಪ್‌ಟಾಪ್ ಮೂಲಕ ನಿತ್ಯದ ಮಾನಿಟರಿಂಗ್ ವ್ಯವಸ್ಥೆಯನ್ನು ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆ ಕುಂದಾಪುರದ ಅಂಕದಕಟ್ಟೆಯಲ್ಲಿ ಮಾಡುತ್ತಿದೆ. ಇದರ ವ್ಯವಸ್ಥಾಪಕ ಕೃಷ್ಣ ಪೂಜಾರಿ ಅವರ ತಂಡ ಪೊಲೀಸರ ಮಾರ್ಗದರ್ಶನದಲ್ಲಿ ರಾತ್ರಿ -ಹಗಲು ಸಿಸಿ ಟಿವಿ ಕಣ್ಗಾವಲು ಕಾಯುತ್ತದೆ. 60 ಕ್ಯಾಮೆರಾಗಳ ಮಾನಿಟರಿಂಗ್ ಮಾಡುವ ಮೂಲಕ ಆರಂಭಗೊಂಡ ಈ ಸಂಸ್ಥೆ ಇದೀಗ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಅಳವಡಿಸಿರುವ ಬರೋಬ್ಬರಿ 450 ಕ್ಯಾಮೆರಾಗಳನ್ನು ಮಾನಿಟರಿಂಗ್ ಮಾಡುತ್ತಿದೆ. ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಹೆಚ್ಚಿನ ಧಾರ್ಮಿಕ ಸಂಸ್ಥೆಗಳು, ಕಾರ್ಖಾನೆಗಳು, ಉದ್ಯಮಗಳುಹಾಗೂ ಸಾರ್ವಜನಿಕರು ಈಗಾಗಲೇ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಗ್ರಾಹಕರಲ್ಲದೆ ತಮ್ಮ ವ್ಯಾಪ್ತಿಯೊಳಗೆ ಬರುವ ಸಾರ್ವಜನಿಕ ಸ್ಥಳಗಳಲ್ಲಿಯೂ ಈ ರೀತಿಯ ಪ್ರಯತ್ನ ಹಾಗೂ ಘಟನೆಗಳು ಕಂಡು ಬಂದಲ್ಲಿ ಸೆಕ್ಯುರಿಟಿ ಸಂಸ್ಥೆ ಸಂಬಂಧಿಸಿದವರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ.


Spread the love
Subscribe
Notify of

0 Comments
Inline Feedbacks
View all comments