ಶಾಂತಿಯುತ ಮತದಾನಕ್ಕೆ ಪೋಲಿಸ್ ಇಲಾಖೆಯಿಂದ ಅಗತ್ಯ ಕ್ರಮ ; ಪೋಲಿಸ್ ಆಯುಕ್ತ ವಿಪುಲ್ ಕುಮಾರ್
ಮಂಗಳೂರು: ರಾಜ್ಯ ವಿಧಾನಸಭೆಗೆ ಮೇ 12ರಂದು ನಡೆಯುವ ಚುನಾವಣೆಯ ವೇಳೆ ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮಗಳನ್ನು ಪೋಲಿಸ್ ಇಲಾಖೆಯ ವತಿಯಿಂದ ಕೈಗೊಳ್ಳಾಗಿದೆ ಎಂದು ಮಂಗಳೂರು ನಗರ ಪೋಲಿಸ್ ಆಯುಕ್ತ ವಿಪುಲ್ ಕುಮಾರ್ ಹೇಳಿದ್ದಾರೆ.
ಮಂಗಳವಾರ ಬೆಳಿಗ್ಗೆ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಧಾನಸಭಾ ಚುನಾವಣೆ ಸಮಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2,846 ಮಂದಿ ಮೇಲೆ ಪೊಲೀಸರು ನಿಗಾ ಇರಿಸಿದ್ದಾರೆ. ಅಪರಾಧ ಹಿನ್ನೆಲೆ ಹೊಂದಿರುವ 2,756 ಮಂದಿ ಮತ್ತು ಚುನಾವಣೆ ಸಮಯದಲ್ಲಿ ದುಷ್ಕೃತ್ಯ ಎಸಗಬಹುದಾದ 90 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ’ ಎಂದರು.
ಈವರೆಗೆ ಮುಂಜಾಗ್ರತಾ ಕ್ರಮವಾಗಿ 756 ಪ್ರಕರಣ ದಾಖಲಿಸಿ, ಭದ್ರತಾ ಬಾಂಡ್ ಪಡೆಯಲಾಗಿದೆ. ಆರು ರೌಡಿಗಳನ್ನು ಗಡಿಪಾರು ಮಾಡಿದ್ದು, ನಾಲ್ವರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಕಮಿಷನರೇಟ್ ವ್ಯಾಪ್ತಿಯಲ್ಲಿ 877 ಮತಗಟ್ಟೆಗಳಿವೆ. ಈ ಪೈಕಿ 201 ಕ್ಲಿಷ್ಟಕರ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಚುನಾವಣಾ ಭದ್ರತೆಗಾಗಿ 2,700 ಪೊಲೀಸರು, ಅರೆ ಸೇನಾಪಡೆಯ 11 ಕಂಪನಿಗಳು, ರಾಜ್ಯ ಮೀಸಲು ಪೊಲೀಸ್ ಪಡೆಯ ಆರು ಮತ್ತು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಎಂಟು ತುಕಡಿಗಳನ್ನು ನಿಯೋಜಿಸಲಾಗಿದೆ. ಎರಡು ವಿಶೇಷ ಸಶಸ್ತ್ರ ತಂಡಗಳನ್ನು ಒದಗಿಸಲಾಗಿದೆ ಎಂದರು.