ಶಾಲಾ-ಕಾಲೇಜಿನ ನಿಯಮಗಳ ಬಗ್ಗೆ ಸರಕಾರ ಮಾರ್ಗದರ್ಶಿ ಸೂತ್ರ ರಚಿಸಲಿ:ಎಸ್ ಐ ಓ ಆಗ್ರಹ
ಮಂಗಳೂರು: ದೇಶದ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯ. ಸಂವಿಧಾನವು ನೀಡಿರುವ ಸ್ವಾತಂತ್ರ್ಯವು ಎಲ್ಲರಿಗೂ ಸಮಾನವಾಗಿದೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಹಾಗೂ ಮಾನವ ಹಕ್ಕಿಗೆ ಧಕ್ಕೆಯಾಗದಂತೆ ಶಾಲಾ-ಕಾಲೇಜುಗಳ ನಿಯಮಗಳ ಬಗ್ಗೆ ಸರಕಾರವು ಶೀಘ್ರವೇ ಮಾರ್ಗದರ್ಶಿ ಸೂತ್ರವನ್ನು ರಚಿಸಿ, ಆದೇಶ ಹೊರಡಿಸಬೇಕೆಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್.ಐ.ಓ) ಆಗ್ರಹಿಸಿದೆ.
ಮಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಲ್ಲಿ ನಡೆಯುತ್ತಿರುವ ಸ್ಕಾರ್ಫ್ ವಿವಾದದ ಹಿನ್ನೆಲೆಯಲ್ಲಿ ಸರಕಾರವು ಈ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಎಸ್ ಐ ಓ ಒತ್ತಾಯಿಸಿದೆ.
ಪ್ರಸ್ತುತ ನಡೆಯುತ್ತಿರುವ ಸ್ಕಾರ್ಫ್ ವಿವಾದವು ಕೋಮು ಧೃವೀಕರಣಕ್ಕೆ ಸಾಕ್ಷಿಯಾಗುವುದಕ್ಕಿಂತ ಮುಂಚಿತವಾಗಿ ಕಾಲೇಜಿನ ಆಡಳಿತ ವರ್ಗ, ಹೆತ್ತವರು ಮತ್ತು ವಿದ್ಯಾರ್ಥಿಗಳು ಸಮಸ್ಯೆಯ ಆಳವನ್ನು ಅರಿತು ಶೀಘ್ರವಾಗಿ ಇತ್ಯರ್ಥಪಡಿಸಲು ಮುಂದಾಗಬೇಕು ಎಂದು ಎಸ್.ಐ.ಓ ಮನವಿ ಮಾಡುತ್ತದೆ.
ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದಲ್ಲಿ ಸ್ಕಾರ್ಫ್ ಹಾಕುವುದು, ಹಣೆಗೆ ತಿಲಕವಿಡುವುದು, ನನ್ ಗಳ ಶಿರವಸ್ತ್ರ, ಸಿಖ್ಖರ ಟರ್ಬನ್, ಗಡ್ಡ ಬೆಳೆಸುವುದು ಇತ್ಯಾದಿ ಆಚರಣೆಗಳು ಧಾರ್ಮಿಕ ಗುರುತಾಗಿದೆ. ಜೊತೆಗೆ ಅದು ದೇಶದ ಸಂವಿಧಾನವು ನೀಡಿರುವ ಮಾನವ ಹಕ್ಕು ವೈಯಕ್ತಿಕ ಸ್ವಾತಂತ್ರ್ಯದ ಭಾಗವೂ ಆಗಿದ್ದು, ಸಾರ್ವಜನಿಕ ಸ್ಥಳ ಸೇರಿದಂತೆ ಸಮಾಜದ ಎಲ್ಲಾ ಕಡೆಗಳಲ್ಲಿ ಇದು ಅನ್ವಯಿಸಿ, ಗೌರವಿಸಲ್ಪಡಬೇಕಾದುದರಿಂದ ಸ್ಕಾರ್ಫ್ ನಂತಹ ವಿವಾದಗಳು ಮರುಕಳಿಸಿದಂತೆ ಮುಂದಾಲೋಚಿಸಿ, ವೈಯಕ್ತಿಕ ಹಾಗೂ ಮಾನವ ಹಕ್ಕಿಗೆ ಧಕ್ಕೆಯಾಗದಂತೆ ಶಾಲಾ-ಕಾಲೇಜುಗಳ ನಿಯಮಾವಳಿಗಳನ್ನು ರಚಿಸಲು ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿಯನ್ನು ಮಾಡಿ, ಸಂಬಂಧಿಸಿದ ಇಲಾಖೆಗೆ ಸರಕಾರವು ಮಾರ್ಗದರ್ಶನ ನೀಡುವುದರ ಮೂಲಕ ಮಾರ್ಗದರ್ಶಿ ಸೂತ್ರವನ್ನು ರಚಿಸಿ, ಆದೇಶ ಹೊರಡಿಸಬೇಕೆಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಷನ್ ಆಫ್ ಇಂಡಿಯಾ(ಎಸ್.ಐ.ಓ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಆಗ್ರಹಿಸುತ್ತದೆ.