ಶಾಲಾ ಮಕ್ಕಳ ಸುರಕ್ಷತೆಗೆ ಸುಪ್ರೀಂ ಕೋರ್ಟ್ ಮಾರ್ಗ ಸೂಚಿ ಪಾಲಿಸಲು ಪೊಲೀಸ್ ಅಧಿಕಾರಿಗಳ ಸೂಚನೆ
ಮಂಗಳೂರು: ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲಾ ಆಡಳಿತ ಮಂಡಳಿ ಪ್ರತಿನಿಧಿಗಳು, ಶಿಕ್ಷಣ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು, ಬಸ್, ಟ್ಯಾಕ್ಸಿ ಚಾಲಕರ ಸಂಘಟನೆಗಳ ಪ್ರತಿನಿಧಿಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರ ಸೂಚನೆಯಂತೆ ಶನಿವಾರ ಉನ್ನತಮಟ್ಟದ ಸಭೆ ನಡೆಸಿದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀಗಣೇಶ್, ಸಂಚಾರ ಉಪ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಜಾನ್ ಮಿಸ್ಕಿತ್, ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ನೆನಪಿಸಿದರು.
ಶಾಲಾ ಆವರಣದಲ್ಲಿ ಮಕ್ಕಳ ಸುರಕ್ಷತೆ, ಮಕ್ಕಳ ಮೇಲಿನ ದೌರ್ಜನ್ಯ ತಡೆ, ಮಕ್ಕಳನ್ನು ಕರೆತರುವ ವಾಹನಗಳಲ್ಲಿ ಪಾಲಿಸಬೇಕಾದ ನಿಯಮಗಳು, ಖಾಸಗಿ ವಾಹನಗಳು ಶಾಲಾ ಮಕ್ಕಳನ್ನು ಕರೆದೊಯ್ಯುವಾಗ ಅನುಸರಿಸಬೇಕಾದ ನಿಯಮಗಳ ಕುರಿತು ಪೊಲೀಸ್ ಅಧಿಕಾರಿಗಳು ವಿವರ ನೀಡಿದರು.
‘ಶಾಲಾ ಮಕ್ಕಳನ್ನು ಪೋಷಕರು ಅಥವಾ ಅವರ ಅಧಿಕೃತ ಪ್ರತಿನಿಧಿಗಳ ಹೊರತಾಗಿ ಬೇರೆಯವರ ಕೈಗೆ ಒಪ್ಪಿಸಬಾರದು. ಬಾಲಕಿಯರನ್ನು ಒಬ್ಬರನ್ನೇ ಪುರುಷ ಸಿಬ್ಬಂದಿಯ ಜೊತೆ ಬಿಡುವಂತಿಲ್ಲ. ಶಾಲಾ ಆವರಣ, ಪ್ರವೇಶ ದ್ವಾರ ಮತ್ತು ರಸ್ತೆಗೆ ಮುಖಮಾಡಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿರಬೇಕು. ಬಾಲಕರು ಮತ್ತು ಬಾಲಕಿಯರಿಗೆ ಹೆಚ್ಚು ಅಂತರದಲ್ಲಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಬೇಕು. ಬಾಲಕಿಯರ ಶೌಚಾಲಯದ ಬಳಿ ಮಹಿಳಾ ಸಿಬ್ಬಂದಿ ನಿಯೋಜಿಸಬೇಕು’ ಎಂಬ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಅಧಿಕಾರಿಗಳು ವಿವರಿಸಿದರು.
ಸಿಬ್ಬಂದಿ ನೇಮಕಾತಿ, ಭದ್ರತಾ ಸಿಬ್ಬಂದಿ ಸೇವೆ ಪಡೆಯುವುದು, ಹಾಜರಾತಿ ದಾಖಲೆ ನಿರ್ವಹಣೆ, ಪೋಷಕರ ಜೊತೆ ಸಂಪರ್ಕ ಸೇರಿದಂತೆ ವಿವಿಧ ವಿಷಯಗಳಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳಿಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಶಾಲಾ ಮಕ್ಕಳನ್ನು ಕರೆತರುವ ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹೊಂದಿರುವುದು, ವೇಗ ನಿಯಂತ್ರಕ ಅಳವಡಿಕೆ, ಅಗ್ನಿ ಶಾಮಕ ಸಾಧನಗಳ ಅಳವಡಿಕೆ, ಶಾಲಾ ಮುಖ್ಯಸ್ಥರ ಮಾಹಿತಿ ಮತ್ತು ದೂರವಾಣಿ ಸಂಖ್ಯೆಯನ್ನು ಬಸ್ನಲ್ಲಿ ಪ್ರಕಟಿಸುವುದು, ಮಕ್ಕಳ ಬ್ಯಾಗ್ ಇರಿಸಲು ಸೂಕ್ತ ಸ್ಥಳಾವಕಾಶ ಕಲ್ಪಿಸುವುದು, ಚಾಲಕರು ಮತ್ತು ಸಹಾಯಕ ಸಿಬ್ಬಂದಿಯ ನೇಮಕಾತಿಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತೂ ವಿವರ ಒದಗಿಸಲಾಯಿತು.
ಕ್ರಮದ ಎಚ್ಚರಿಕೆ: ‘ಶಾಲೆಯ ಒಳಗೆ ಮತ್ತು ಹೊರಗೆ ಮಕ್ಕಳ ಸುರಕ್ಷತೆ ಆಡಳಿತ ಮಂಡಳಿಯ ಜವಾಬ್ದಾರಿಯಾಗಿರುತ್ತದೆ. ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಡಿಸಿಪಿ ಲಕ್ಷ್ಮೀಗಣೇಶ್ ಎಚ್ಚರಿಕೆ ನೀಡಿದರು.