ಶಾಸಕ ಜೆ.ಆರ್.ಲೋಬೊ ಮಾತಿಗೆ ಸಮ್ಮತಿಸಿ ಅಳಿವೆ ಬಾಗಿಲಲ್ಲಿ ಹೂಳೆತ್ತಲು ಸಹಕಾರ
ಮಂಗಳೂರು: ಶಾಸಕ ಜೆ.ಆರ್.ಲೋಬೊ ಅವರು ಮಾತುಕತೆ ಮಾಡಿ ಮಂಗಳೂರು ಹಳೆಬಂದರಿನ ಅಳಿವೆಯಲ್ಲಿ ಹೂಳೆತ್ತುವ ಕೆಲಸ ನಿರ್ವಹಿಸಲು ಮೀನುಗಾರ ಮುಖಂಡರು ಮತ್ತು ಸೈಲರ್ಸ್ ಗಳು ಸಮ್ಮತಿಸಿದರು.
ಮೀನುಗಾರರು ಮತ್ತು ಸೈಲರ್ಸ್ ಗಳು ಅಳಿವೆಯಲ್ಲಿ ಹೂಳೆತ್ತದಂತೆ ತಡೆಯೊಡ್ಡಿದ ಘಟನೆಯ ಹಿನ್ನೆಲೆಯಲ್ಲಿ ಶಾಸಕ ಜೆ.ಆರ್.ಲೋಬೊ ಅವರು ಇಂದು ಎಲ್ಲಾ ನಾಯಕರ ಸಭೆ ಕರೆದು ಅಳಿವೆ ಬಾಗಿಲಲ್ಲಿ ಹೂಳು ತುಂಬಿ ಅಪಘಾತಗಳಾಗುತ್ತಿವೆ. 1 ಕೋಟಿ ರೂಪಾಯಿ ಹಣವೂ ವ್ಯರ್ಥವಾಗುತ್ತಿದೆ. ಹೂಳೆತ್ತಲು ಬಂದಿರುವ ಯಂತ್ರವನ್ನು ಹಿಂದಕ್ಕೆ ಕಳುಹಿಸಿದರೆ ಮತ್ತೆ ತರುವುದು ಕಷ್ಟಸಾಧ್ಯ ಎಂದರು.
ತಾಂತ್ರಿಕವಾಗಿ ಈ ಯಂತ್ರದಿಂದ ಅಸಾಧ್ಯವೆಂದು ವಾದಿಸುವುದರಲ್ಲಿ ಅರ್ಥವಿಲ್ಲ. ಮೀನುಗಾರರು, ಸೈಲರ್ಸ್, ಮೀನುಗಾರಿಕೆ ಇಲಾಖೆ, ಬಂದರು ಅಧಿಕಾರಿಗಳ ಪ್ರತಿನಿಧಿಗಳನ್ನು ರಚಿಸಿ 10 ದಿನಗಳವರೆಗೆ ಅಳಿವೆ ಬಾಗಿಲಲ್ಲಿ ಹೂಳು ತೆಗೆದು ಅಧ್ಯಯನ ಮಾಡಿ ಎಷ್ಟು ಹೂಳು ತೆಗೆಯಲಾಗಿದೆ ಎಂಬುದನ್ನು ನೋಡಿ ಎಂದರು.
ಅದು ಲಾಭದಾಯಕವಾಗುವ ರೀತಿಯಲ್ಲಿ ಯಾವೆಲ್ಲ ಕ್ರಮ ತೆಗೆದುಕೊಳ್ಳಬಹುದು ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಿ. ದೋಣಿಗಳು ಸರಾಗವಾಗಿ ಸಾಗಲು 4 ಮೀಟರ್ ನೀರು ಇರಬೇಕು. ಈಗ ಬರೇ 2.5 ಮೀಟರ್ ಮಾತ್ರ ಇದೆ. ಇದರಿಂದಾಗಿ ದೋಣಿಗಳು ಅಪಘಾತಕ್ಕೀಡಾಗುತ್ತಿವೆ. 4 ಮೀಟರ್ ತನಕವಿದ್ದರೆ ದೋಣಿಗಳು ಸಾಗಲು ಅನುಕೂಲವಾಗುತ್ತದೆ ಎಂದರು.
ಶಾಸಕರ ಜೆ.ಆರ್.ಲೋಬೊ ಅವರ ಮಾತನ್ನು ಆಲಿಸಿದ ಮುಖಂಡರು ಅಂತಿಮವಾಗಿ ಅಳಿವೆ ಬಾಗಿಲಲ್ಲಿ ಹೂಳೆತ್ತಲು ಸಮ್ಮತಿಸಿದರು. ಈ ಯಂತ್ರದಿಂದ ಹೂಳೆತ್ತಲು ಸಾಧ್ಯವಿಲ್ಲ. ಸರ್ಕಾರದ ಹಣ ಪೋಲು ಮಾಡುವ ಕೆಲಸವಾಗಬಾರದು ಎನ್ನುವುದೇ ತಮ್ಮ ಉದ್ದೇಶವೆಂದು ಮೀನುಗಾರರು ಹೇಳಿದರು.
ಈ ಮಾತುಕತೆ ವೇಳೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಸುರೇಶ್ ಬಲ್ಲಾಳ್, ಮೀನುಗಾರ ಮುಖಂಡರು, ಬಂದರು, ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.