ಶಾಸಕ ಯಶ್ಪಾಲ್ ಗೆ ರಾಜಕೀಯ ಪ್ರಬುದ್ಧತೆ ಇಲ್ಲ : ಕೆ.ವಿಕಾಸ್ ಹೆಗ್ಡೆ ಕಿಡಿ
ಕುಂದಾಪುರ: ಉಡುಪಿ ಜಿಲ್ಲೆಯ ಕರಾವಳಿ ಹಾಗೂ ಇತರ ಭಾಗಗಳಲ್ಲಿ ಮಳೆಯಿಂದಾಗಿ ಹಾನಿಗೆ ಒಳಗಾದ ಸಮುದ್ರ ಕೊರೆತದ ತೀರ ಪ್ರದೇಶಗಳು, ನೆರೆ ಹಾನಿಗೊಳಗಾದ ಪ್ರದೇಶಗಳ ಪರಿಸ್ಥಿತಿ ಹಾಗೂ ಅಲ್ಲಿನ ಜನಜೀವನದ ಪರಿಸ್ಥಿತಿಯ ವೀಕ್ಷಣೆಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪ್ರವಾಸ ಕಾರ್ಯಕ್ರಮಗಳನ್ನು ‘ ಚಿಕ್ಕಿ ತಿಂದು ಹೋದ ಹಾಗೆ ಆಯಿತು ‘ ಎಂದು ಲೇವಡಿ ಮಾಡಿರುವ ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರ ಹೇಳಿಕೆ ಅವರಿಗೆ ರಾಜಕೀಯ ಪ್ರಬುದ್ಧತೆ ಇಲ್ಲ ಎನ್ನುವುದನ್ನು ಎತ್ತಿ ತೋರಿಸುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ ಪ್ರಕಟಣೆಯಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಜನಪರ ಕಾಳಜಿಯ ಉದ್ದೇಶದಿಂದ ಜಿಲ್ಲಾ ಉಸ್ತುವಾರಿ ಸಚಿವರು ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿಯೂ ರಜೆಗಾಗಿ ತನ್ನೂರಿಗೆ ಹೋಗದೆ ಉಡುಪಿ ಜಿಲ್ಲೆಗೆ ಭೇಟಿ ನೀಡಿರುವುದನ್ನೆ ಟೀಕಿಸುತ್ತಿರುವ ನಿಮ್ಮದೆ ಪಕ್ಷದ ಸರ್ಕಾರ ಈ ಹಿಂದೆ ಅಧಿಕಾರದಲ್ಲಿ ಇದ್ದಾಗ, ನಿಮ್ಮ ಪಕ್ಷದ ಉಸ್ತುವಾರಿ ಸಚಿವರು ಸಮುದ್ರ ಕೊರೆತ ಹಾಗೂ ನೆರೆ ವೀಕ್ಷಣೆಗೆ ಬಂದಿದ್ದಾಗ ಐಸ್ ಕ್ಯಾಂಡಿ ತಿನ್ನಲು ಬಂದು ಹೋದದ್ದಾ ? ಎಂದು ಕೆ.ವಿಕಾಸ್ ಹೆಗ್ಡೆ ಪ್ರಶ್ನೆ ಮಾಡಿದ್ದಾರೆ.
ಜಿಲ್ಲೆಯಲ್ಲ, ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಪಕ್ಷದ ಶಾಸಕರುಗಳೇ ಇದ್ದರೂ, ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ, ಎಲ್ಲರನ್ನೂ ವಿಶ್ವಾಸದಲ್ಲಿ ತೆಗೆದುಕೊಂಡು ಹೋಗುತ್ತಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಸ್ವಾಗತಿಸುವ ಬದಲು, ಅಭಿವೃದ್ಧಿಯನ್ನು ಕಡೆಗಣಿಸಿ, ಕ್ಷುಲ್ಲಕ ರಾಜಕೀಯಕ್ಕೆ ಆದ್ಯತೆ ನೀಡುವ ಶಾಸಕರು, ಸಣ್ಣ ಮಟ್ಟದ ರಾಜಕಾರಣ ಮಾಡುವುದರಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಭೇಟಿ ನೀಡಿದಾಗ ಅವರನ್ನು ಸಂಪರ್ಕ ಮಾಡಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಅವರಿಗೆ ಮನವರಿಕೆ ಮಾಡಬೇಕಾದ ಶಾಸಕರು, ತಮ್ಮ ಆದ್ಯ ಕರ್ತವ್ಯವನ್ನು ಕಡೆಗಣಿಸಿ, ಕೇವಲ ರಾಜಕೀಯ ಟೀಕೆ ಮಾಡುವುದು ಮಾತ್ರ ತಮ್ಮ ಕರ್ತವ್ಯ ಎಂದು ಭಾವಿಸಿದಂತಿದೆ. ಈ ಹಿಂದೆ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಬೇರೆ ಬೇರೆ ಪಕ್ಷದ ಜನಪ್ರತಿನಿಧಿಗಳು ತಮ್ಮ ನಡೆ-ನುಡಿಯಿಂದಲೇ ಜಿಲ್ಲೆಯ ಘನತೆ ಹಾಗೂ ವರ್ಚಸ್ಸು ಹೆಚ್ಚಿಸಿದ್ದರು ಎನ್ನುವ ಇತಿಹಾಸವನ್ನು ತಿಳಿದುಕೊಳ್ಳುವುದು ಒಳ್ಳೆಯದು ಎಂದು ವಿಕಾಸ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.