Home Mangalorean News Kannada News ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಕೋಮು ಪ್ರಚೋದನಾತ್ಮಕ ವಿಚಾರ ತುಂಬಿಸುವುದು ಸರಿಯಲ್ಲ – ರಮೇಶ್ ಕಾಂಚನ್

ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಕೋಮು ಪ್ರಚೋದನಾತ್ಮಕ ವಿಚಾರ ತುಂಬಿಸುವುದು ಸರಿಯಲ್ಲ – ರಮೇಶ್ ಕಾಂಚನ್

Spread the love

ಶಿಕ್ಷಕರು ಮಕ್ಕಳ ಮನಸ್ಸಿನಲ್ಲಿ ಕೋಮು ಪ್ರಚೋದನಾತ್ಮಕ ವಿಚಾರ ತುಂಬಿಸುವುದು ಸರಿಯಲ್ಲ – ರಮೇಶ್ ಕಾಂಚನ್

ಉಡುಪಿ: ಶಿಕ್ಷಕರಾದವರು ತನ್ನ ಕಾಲೇಜಿನಲ್ಲಿ ಇರುವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭವಿಷ್ಯ ರೂಪಿಸುವ ವಿಚಾರಗಳನ್ನು ಹೇಳುವ ಬದಲು ಕೋಮು ಪ್ರಚೋದನೆಗೆ ಸಂಬಂಧಿಸಿದ ವಿಚಾರಗಳನ್ನು ತುಂಬಿಸುವುದು ಸರಿಯಲ್ಲ ಇದು ನಮ್ಮ ಜಿಲ್ಲೆಯ ಸಂಸದರು ಮತ್ತು ಶಾಸಕರೂ ಕೂಡ ಅರ್ಥ ಮಾಡಿಕೊಂಡು ಜನಸೇವೆ ಮಾಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸಲಹೆ ನೀಡಿದ್ದಾರೆ.

ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ನೀಡಲಾಗಿರುವ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ತಡೆಹಿಡಿದಿರುವ ಕುರಿತು ಬಿಜೆಪಿ ನಾಯಕರು ಒಬ್ಬರ ನಂತರ ಒಬ್ಬರು ಎಂಬಂತೆ ಅಸಮರ್ಪಕ ಹೇಳಿಕೆ ನೀಡಲು ತೊಡಗಿರುವುದು ವಿಷಾದನೀಯ ಸಂಗತಿ. ಸರಕಾರ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಅನಾವಶ್ಯಕ ಗೊಂದಲ ಸೃಷ್ಠಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದೇ ಬಿಜೆಪಿಯ ಚಾಳಿ ಎಂಬಂತೆ ವರ್ತಿಸುತ್ತಿರುವುದು ನಾಚಿಕೇಗೇಡಿನ ಸಂಗತಿಯಾಗಿದೆ.

ಒಂದು ಶಿಕ್ಷಣ ಸಂಸ್ಥೆ ಅದು ಕೇವಲ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸೀಮಿತವಾಗಿರಬೇಕು ಹೊರತು ಅಲ್ಲಿ ಯಾವುದೇ ಧರ್ಮ, ಜಾತಿಯ ವಿಚಾರಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿಸುವ ಕೆಲಸವಾಗಬಾರದು. ಹಿಜಾಬ್ ವಿಚಾರದ ಮೂಲಕ ಹಿಂದಿನ ಬಿಜೆಪಿ ಸರಕಾರ ಇಡೀ ಜಿಲ್ಲೆ ಮಾತ್ರವಲ್ಲದೆ ರಾಜ್ಯದಾದ್ಯಂತ ಗೊಂದಲ ಸೃಷ್ಠಿ ಮಾಡಿದ್ದು ಇದರಿಂದ ಸಮಸ್ಯೆಗೊಳಗಾಗಿರುವವರು ಬಡ ವಿದ್ಯಾರ್ಥಿಗಳಾಗಿದ್ದಾರೆ. ಇತ್ತೀಚೆಗೆ ದೇಶದ ಸುಪ್ರಿಂ ಕೋರ್ಟ್ ಹಿಜಾಬ್ ವಿಚಾರದ ಕುರಿತಂತೆ ಮುಂಬೈ ಕಾಲೇಜೊಂದರ ಪ್ರಕರಣದಲ್ಲಿ ಸರಿಯಾದ ತೀರ್ಪು ನೀಡಿರುವುದನ್ನು ಬಿಜೆಪಿಗರು ಮರೆತಂತೆ ಕಾಣುತ್ತಿದೆ.

ಶಿಕ್ಷಣ ಸಂಸ್ಥೆಗಳನ್ನು ಕೋಮು ದ್ವೇಷದ ಪ್ರಯೋಗ ಶಾಲೆ ಮಾಡುವುದೇ ಬಿಜೆಪಿಗರ ಮುಖ್ಯ ಉದ್ದೇಶವಾಗಿದೆ. ತಾವು ಮಾಡಿದ ತಪ್ಪುಗಳನ್ನು ಮುಚ್ಚಿಹಾಕಲು ದಿನಕ್ಕೊಂದು ವಿಚಾರಗಳನ್ನು ಎತ್ತಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಕೆಲಸ ಮಾಡುತ್ತಿರುವ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ. ಇತ್ತೀಚೆಗೆ ಕಾರ್ಕಳದಲ್ಲಿ ಯುವತಿಯೋರ್ವಳ ಅತ್ಯಾಚಾರ ಪ್ರಕರಣವನ್ನು ಹಿಡಿದುಕೊಂಡು ಬಿಜೆಪಿ ಹಾಗೂ ಕಾರ್ಕಳದ ಶಾಸಕರು ತಮ್ಮ ಕೋಮು ದ್ವೇಷದ ಬೇಳೆ ಬೇಯಿಸಲು ಪ್ರಯತ್ನಿಸಿದರು. ಯಾವಾಗ ಪ್ರಕರಣದಲ್ಲಿ ತನ್ನ ಬೆಂಬಲಿಗ ಇರುವುದು ತಿಳಿಯಿತೋ ಕಾರ್ಕಳ ಶಾಸಕ ಸುನೀಲ್ ಕುಮಾರ್ ರವರ ಬಾಯಿಗೆ ಬೀಗ ಬಿದ್ದು ಬಿಟ್ಟಿದೆ. ಬಂಧಿತ ಆರೋಪಿ ಪ್ರಮುಖ ಡ್ರಗ್ಸ್ ಪೆಡ್ಲರ್ ಎನ್ನುವುದು ಪೊಲೀಸ್ ತನಿಖೆಯಿಂದ ಸತ್ಯ ಹೊರಬಿದ್ದಿದೆ. ಇದರಿಂದ ಬಿಜೆಪಿ ಶಾಸಕರಿಗೆ ಈತನೊಂದಿಗಿರುವ ಸಂಬಂಧ ಎಂತಹುದು ಎನ್ನುವುದು ಜಗಜ್ಜಾಹೀರಾದಂತಾಗಿದೆ. ಸಮಾಜದ ಮುಂದೆ ಸಾಚಾ ಎನ್ನುವಂತೆ ಪೋಸ್ ನೀಡುವುದನ್ನು ಬಿಟ್ಟು ತಮ್ಮನ್ನು ಜನರು ಕ್ಷೇತ್ರದ ಅಭಿವೃದ್ಧಿ ಮಾಡಲು ಆಯ್ಕೆ ಮಾಡಿದ್ದಾರೆ ಎನ್ನುವುದನ್ನು ಅರಿತು ಕೆಲಸ ಮಾಡುವ ಕೆಲಸ ಬಿಜೆಪಿ ಶಾಸಕರು ಮತ್ತು ಸಂಸದರು ಮಾಡಬೇಕಾಗಿದೆ.

ಪ್ರಶಸ್ತಿ ವಿಚಾರದಲ್ಲಿ ಸರಕಾರ ಮತ್ತು ಆಯ್ಕೆ ಸಮಿತಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಅದರ ಬಗ್ಗೆ ವೃಥಾ ಚರ್ಚೆ ಮಾಡುವ ಬದಲು ಜಿಲ್ಲೆಯನ್ನು ಶೈಕ್ಷಣಿಕವಾಗಿ ಹೇಗೆ ಅಭಿವೃದ್ಧಿಪಡಿಸಬಹುದು ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟದಲ್ಲಿ ಯಾವ ರೀತಿಯ ಹೊಸ ಆಲೋಚನೆಗಳನ್ನು ತರಬಹುದು ಎನ್ನುವ ಕುರಿತು ಉಡುಪಿಯ ಶಾಸಕರು ಮತ್ತು ಸಂಸದರು ಮೊದಲು ಗಮನ ಹರಿಸಲಿ. ಅನಾವಶ್ಯಕವಾಗಿ ಕೋಮು ದ್ವೇಷದ ವಿಚಾರಗಳನ್ನು ಮುಂದಿಟ್ಟು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಒಳ್ಳೆಯ ಸಂಬಂಧವನ್ನು ಕೆಡಿಸುವ ಕೆಲಸವನ್ನು ಕೈಬಿಟ್ಟು ಅದೇ ವಿದ್ಯಾರ್ಥಿಗಳನ್ನು ದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಕೆಲಸದಲ್ಲಿ ಶಿಕ್ಷಕರಿಗೆ ಬೆಂಬಲವಾಗಿ ನಿಲ್ಲುವ ಕೆಲಸ ನಡೆಯಲಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

Exit mobile version