ಮಂಗಳೂರು: ಪ್ರಸ್ತುತ ಶೆಕ್ಷಣಿಕ ಪ್ರವೇಶಾತಿ ಆರಂಭಗೊಂಡಿದ್ದು ಖಾಸಗಿ ಶಾಲೆಗಳು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಪಾಲಿಸುತ್ತಿಲ್ಲ ಎಂಬುದಾಗಿ ಮಕ್ಕಳ ಹಕ್ಕು ಹೋರಾಟಗಾರರ ಮತ್ತು ಪೋಷಕರ ಸಂಘದ ಅಧ್ಯಕ್ಷ ದಿನೇಶ್ ಹೆಗ್ಡೆ ಉಳೆಪಾಡಿ ಆರೋಪಿಸಿದ್ದಾರೆ.
ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಣ ಸಂಸ್ಥೆಗಳು ಯಾವುದೇ ರೀತಿಯ ಡೋನೇಷನ್ ಪಡೆಯುವುದು ಅಪರಾಧವಾಗಿದ್ದು ರಾಜ್ಯ ಸರ್ಕಾರ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ಆದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿ ಸಾವಿರಾರು ಹಣವನ್ನು ಡೋನೇಷನ್ ರೂಪದಲ್ಲಿ ಪಡೆಯುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಗಮನ ವಹಿಸಿ ಶಿಕ್ಷಣ ಸಂಸ್ಥೆಗಳು 2013-14ರ ಶೈಕ್ಷಣಿಕ ವರ್ಷದಿಂದ ಪಡೆದ ಹಣವನ್ನು ಆಯಾ ವಿದ್ಯಾರ್ಥಿ ಪೋಷಕರಿಗೆ ವಾಪಾಸು ನೀಡುವಂತೆ ಆಗ್ರಹಿಸಿದರು.
ಈಗಾಗಲೇ ಮಕ್ಕಳ ಶಿಕ್ಷಣದ ಹಕ್ಕಿನ ಕಾಯ್ದೆಯಡಿಯಲ್ಲಿ ಮಕ್ಕಳಿಗೆ ದೊರೆಯಬೇಕಾದ ಹಕ್ಕನ್ನು ರಕ್ಷಿಸಲು ಮಕ್ಕಳ ಹೋರಾಟಗಾರ ಮತ್ತು ಪೋಷಕರ ಸಂಘವನ್ನು ಕಳೆದ ಎ.26ರಂದು ರಚಿಸಲಾಗಿದೆ ಎಂಬುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಶ್ವಿನಿ ಬಿ, ರೋನಾಲ್ಡ್ ಬಂಟ್ವಾಳ್ ಮತ್ತಿತರರು ಉಪಸ್ಥಿತರಿದ್ದರು.