Home Mangalorean News Kannada News ಶಿರಾಡಿ ರಸ್ತೆ: ಜುಲೈಮೊದಲು ಸಂಚಾರಕ್ಕೆ ಮುಕ್ತ; ಸಂಸದ ನಳಿನ್ ಕುಮಾರ್ ಕಟೀಲ್ 

ಶಿರಾಡಿ ರಸ್ತೆ: ಜುಲೈಮೊದಲು ಸಂಚಾರಕ್ಕೆ ಮುಕ್ತ; ಸಂಸದ ನಳಿನ್ ಕುಮಾರ್ ಕಟೀಲ್ 

Spread the love

ಶಿರಾಡಿ ರಸ್ತೆ: ಜುಲೈಮೊದಲು ಸಂಚಾರಕ್ಕೆ ಮುಕ್ತ; ಸಂಸದ ನಳಿನ್ ಕುಮಾರ್ ಕಟೀಲ್ 

ಉಪ್ಪಿನಂಗಡಿ : ‘ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶಿರಾಡಿ ಘಾಟ್ ರಸ್ತೆಯ 2ನೇ ಹಂತದ ಕಾಂಕ್ರಿಟ್ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದು, ಜುಲೈ ಮೊದಲ ವಾರದಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ’ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮಂಗಳವಾರ ಅಡ್ಡಹೊಳೆಯಿಂದ ಶಿರಾಡಿ ಗಡಿವರೆಗೆ ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 12.38 ಕಿ.ಮೀ. ಉದ್ದ ಮತ್ತು 8.50 ಮೀಟರ್ ಅಗಲದ ಕಾಂಕ್ರಿಟ್ ರಸ್ತೆ 2ನೇ ಹಂತದ ಕಾಮಗಾರಿಗೆ ₹74 ಕೋಟಿ ಮಂಜೂರು ಆಗಿರುತ್ತದೆ. ಈ ಮಧ್ಯೆ 77 ಮೋರಿಗಳು ಇದ್ದು, 74 ಮೋರಿಗಳ ಕಾಮಗಾರಿ ಪೂರ್ಣಗೊಂಡಿದೆ. ಈ ಪೈಕಿ 3 ಸೇತುವೆಯ ವಿಸ್ತರಣೆ ಕಾಮಗಾರಿ ಪ್ರಗತಿಯಲ್ಲಿ ಇದೆ. ರಸ್ತೆ ಕಾಮಗಾರಿ ಪೈಕಿ ಒಂದು ಬದಿಯಲ್ಲಿ ಸಂಪೂರ್ಣ ಪೂರ್ಣಗೊಂಡಿದೆ. ಇನ್ನೊಂದು ಬದಿಯಲ್ಲಿ 1 ಕಿ.ಮೀ. ವ್ಯಾಪ್ತಿಯಲ್ಲಿ 3 ಹಂತದ ಕಾಂಕ್ರಿಟ್ ಪೈಕಿ ಜಿಎಲ್‍ಸಿ ಹಂತದಲ್ಲಿ 365 ಮೀಟರ್, ಡಿಎಲ್‍ಸಿ ಹಂಂತದಲ್ಲಿ 595 ಮೀಟರ್ ಮತ್ತು ಪಿಕ್ಯೂಸಿ ಹಂತದಲ್ಲಿ 1241 ಮೀಟರ್ ಮಾತ್ರ ಬಾಕಿ ಇದ್ದು, ಇದಿಷ್ಟು ಕೆಲಸಗಳಿಗೆ 20 ದಿನಗಳು ಬೇಕಾಗಬಹುದು’ ಎಂದರು.

ಮಳೆ ಅಡಚಣೆ: ‘ಕಾಮಗಾರಿ ಪೂರ್ಣ ಗೊಳಿಸಲು 2018 ಜನವರಿಯಿಂದ 15 ತಿಂಗಳು 2019ರ ಏಪ್ರಿಲ್ ತನಕ ಅವಕಾಶ ಇದೆ. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಹೆದ್ದಾರಿ ಇಲಾಖೆ ಎಂಜಿನಿಯರ್ ಮತ್ತು ಗುತ್ತಿಗೆದಾರರ ವಿಶೇಷ ಆಸಕ್ತಿಯಿಂದಾಗಿ ಕೆಲಸ ಪೂರ್ಣಗೊಳಿಸಿ ಜೂನ್ ತಿಂಗಳ ಪ್ರಾರಂಭದಲ್ಲಿ ಬಿಟ್ಟು ಕೊಡುವ ಬಗ್ಗೆ ತಿಳಿಸಿದ್ದರು. ಆದರೆ ಕಳೆದ 15 ದಿನಗಳಿಂದ ಈ ಭಾಗದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವುದರಿಂದಾಗಿ ಕಾಮಗಾರಿಯ ವೇಗಕ್ಕೆ ತಡೆ ಆಗಿದೆ. ಮುಂದೆ ಮಳೆಯ ಅಡೆತಡೆಗಳನ್ನು ಸರಿದೂಗಿಸಿ ಕೊಂಡು ಇನ್ನು ತಿಂಗಳ ಒಳಗಾಗಿ ಪೂರ್ಣಗೊಳಿಸುವ ಬಗ್ಗೆ ಗುತ್ತಿಗೆದಾರರು ಮತ್ತು ಇಂಜಿನಿಯರ್ ಭರವಸೆ ನೀಡಿ ದ್ದಾರೆ, ಅದರಂತೆ ಕಾಮಗಾರಿ ತಿಂಗಳ ಒಳಗಾಗಿ ಪೂರ್ಣ ಆಗಲಿದೆ’ ಎಂದರು.

ಸಂಸದರೊಂದಿಗೆ ಪುತ್ತೂರು ಶಾಸಕ ಸಂಜೀವ ಮಟಂದೂರು, ಮಲೆನಾಡು ಪರಿಸರ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ನೆಲ್ಯಾಡಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಲಕೃಷ್ಣ ಬಾಣಜಾಲು, ಆರಂತೋಡು ಜಿಲ್ಲಾ ಪಂಚಾಯಿತಿ ಸದಸ್ಯ ಹರೀಶ್ ಕಂಚಿಪಳ್ಳ, ಸಕಲೇಶಪುರ ಬಿಜೆಪಿ ಉಪಾಧ್ಯಕ್ಷ ನಾರಾಯಣ ಮಾರನಹಳ್ಳಿ, ಶಿರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಮ್ಮಯ್ಯ ಗೌಡ, ಸದಸ್ಯರಾದ ಪ್ರಕಾಶ್ ಗುಂಡ್ಯ, ನಾರಾಯಣ ಗೌಡ ಶಿರಾಡಿ, ದಾಮೋದರ ಗೌಡ, ಸ್ಥಳೀಯ ಪ್ರಮುಖ ರಾದ ಯತೀಶ್ ಗುಂಡ್ಯ ಇದ್ದರು.


Spread the love

Exit mobile version