ಶಿರಿಯಾರ ಶ್ರೀ ರಾಮಮಂದಿರಕ್ಕೆ ನುಗ್ಗಿದ ಕಳ್ಳರು – ದೇವರ ವಿಗ್ರಹ, ಕಾಣಿಕೆ ಹುಂಡಿ ಕಳವು
ಕೋಟ: ಶಿರಿಯಾರ ಸಮೀಪದ ಕಲ್ಮರ್ಗಿ ಎಂಬಲ್ಲಿನ ಶ್ರೀ ರಾಮಮಂದಿರಕ್ಕೆ ಕಳ್ಳರು ನುಗ್ಗಿ ದೇವರ ವಿಗ್ರಹ, ಕಾಣಿಕೆ ಹುಂಡಿ ಕಳವು ಮಾಡಿದ ಘಟನೆ ಮಾ. 11 ರ ಮಂಗಳವಾರ ರಾತ್ರಿ ನಡೆದಿದೆ.
ಬ್ರಹ್ಮಾವರ ತಾಲೂಕಿನ ಶಿರಿಯಾರ ಗ್ರಾಮದ ಕಲ್ಮರ್ಗಿ ಎಂಬಲ್ಲಿ ಶ್ರೀ ರಾಮಾಂಜನೇಯ ಟ್ರಸ್ಟ್ ಆಡಳಿತದಲ್ಲಿರುವ ಶ್ರೀರಾಮ ಮಂದಿದಲ್ಲಿ ಮಾರ್ಚ್ 11 ರ ರಾತ್ರಿ 9:30:ಕ್ಕೆ ಪೂಜೆ ಆದ ನಂತರ ಆಡಳಿತ ಮಂಡಳಿಯವರು ಮಂದಿರದ ಬಾಗಿಲನ್ನು ಮುಚ್ಚಿ ಬೀಗ ಹಾಕಿ ಹೋಗಿದ್ದರು.
ಮಾರ್ಚ್ 12 ರಂದು ಬುಧವಾರ ಬೆಳಿಗ್ಗೆ 6:00 ಗಂಟೆಗೆ ದಿನನಿತ್ಯದ ಪೂಜೆಗೆಂದು ರತ್ನಾಕರ ಶೆಣೈಯವರು ಬಂದು ನೋಡುವಾಗ ಮಂದಿರ ಬಾಗಿಲು ತೆರೆದಿದ್ದು ಒಳಗೆ ದೇವರ ಮೂರ್ತಿ ಹಾಗೂ ಕಾಣಿಕೆ ಹುಂಡಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ.
ರತ್ನಾಕರ ಶೆಣೈ ತಕ್ಷಣ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದು ಆಡಳಿತ ಮಂಡಳಿಯವರು ಬಂದು ನೋಡಿದಾಗ ರಾಮ ಪರಿವಾರವಾದ ರಾಮ,ಲಕ್ಷ್ಮಣ, ಸೀತೆ, ಹಾಗೂ ಹನುಮಂತರ ಪಂಚ ಲೋಹದ ವಿಗ್ರಹಗಳು ಹಾಗೂ ಕಾಣಿಕೆ ಡಬ್ಬಿ ಕಳವು ಆಗಿರುವುದು ಗಮನಕ್ಕೆ ಬಂದಿರುತ್ತದೆ.
ಆಡಳಿತ ಮಂಡಳಿಯವರು ತಕ್ಷಣ ಕೋಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ದಿವಾಕರ್, ಕೋಟ ಠಾಣಾ ಎಎಸ್ಐ ಗೋಪಾಲ್ ಪೂಜಾರಿ, ಹೆಡ್ ಕಾನ್ಸ್ಟೇಬಲ್ ರಾಘವೇಂದ್ರ, ಶ್ರೀಧರ್, ರೇವತಿ, ಸಿಬ್ಬಂದಿಗಳಾದ ರಾಘವೇಂದ್ರ ಶೆಟ್ಟಿ, ಶಿವರಾಜ್ ತಕ್ಷಣ ಪತ್ತೆ ಕಾರ್ಯಾಚರಣೆ ಆರಂಭಿಸಿದರು. ಸ್ಥಳ ಪರಿಶೀಲಿಸಿ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದವರನ್ನು ಕರೆಸಿ ಕಳವು ಆದ ವಿಗ್ರಹ ಹಾಗೂ ಕಾಣಿಕೆ ಹುಂಡಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಸ್ನೈಪರ್ ಶ್ವಾನದ ಯಶಸ್ವಿ ಕಾರ್ಯಾಚರಣೆ, ಕಳವಾದ ವಿಗ್ರಹ ಪತ್ತೆ
ಶ್ವಾನದಳ ತಂಡವು ಸ್ಥಳಕ್ಕಾಗಮಿಸಿ ಪರಿಶೀಲಿಸಿತು. ಸ್ನೈಪರ್ ಶ್ವಾನವು ಕಳವಾದ ಸ್ಥಳವನ್ನು ಪರಿಶೀಲಿಸಿ ಅಲ್ಲಿಂದ ಸುಮಾರು 600 ಮೀಟರ್ ದೂರದ ನದಿಯ ತೀರದ ವರೆಗೆ ಓಡಿದ್ದು ಅಲ್ಲಿ ನದಿಯಲ್ಲಿ ಮುಳುಗಿಸಿಟ್ಟ ವಿಗ್ರಹ ಹಾಗೂ ಕಾಣಿಕೆ ಹುಂಡಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು.
ಕಳ್ಳರು ವಿಗ್ರಹ ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿ ನದಿಯ ತೀರಕ್ಕೆ ಹೊತ್ತೊಯ್ದು ಕಾಣಿಕೆ ಹುಂಡಿಯನ್ನು ಒಡೆದು ಅದರಲ್ಲಿವ ಸುಮಾರು 30 ಸಾವಿರದಷ್ಟು ಹಣ ತೆಗೆದುಕೊಂಡು ಖಾಲಿ ಹುಂಡಿ ಹಾಗೂ ರಾಮ,ಲಕ್ಷ್ಮಣ, ಸೀತೆ ಹಾಗೂ ಹನುಮಂತನ ವಿಗ್ರಹವನ್ನು ನದಿಗೆ ಎಸೆದು ಹೋಗಿದ್ದರು. ದೇವರ ಪಾಣಿ ಪೀಠವನ್ನು ಸ್ಥಳದಲ್ಲೇ ಎಸೆದಿದ್ದರು.
ಸ್ನೈಪರ್ ಶ್ವಾನವು ಕಳ್ಳರು ಹೋಗಿದ್ದ ಹಾದಿಯನ್ನು ಹುಡುಕಿಕೊಂಡು ನದಿ ತೀರಕ್ಕೆ ಬಂದು ನಿಂತಿದ್ದು ಅದರಿಂದ ಕಳವಾದ ವಿಗ್ರಹವನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಸ್ನೈಪರ್ ಶ್ವಾನದ ಪತ್ತೆ ಕಾರ್ಯಾಚರಣೆಗೆ ಎಲ್ಲರೂ ಅಭಿನಂದಿಸಿದ್ದಾರೆ.
ಕೋಟ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ.