ಶಿರೂರು ಶ್ರೀಗಳ ಅಂತ್ಯಕ್ರಿಯೆಗೆ ಹೋಗುವುದಿಲ್ಲ: ಪೇಜಾವರ ಶ್ರೀಗಳು
ಹುಬ್ಬಳ್ಳಿ: ಪೂರ್ವನಿಗದಿತ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಶಿರೂರು ಶ್ರೀ ಲಕ್ಷ್ಮೀವರ ಶ್ರೀಗಳ ಅಂತಿಮದರ್ಶನ ಪಡೆಯಲು ಹೋಗುವುದಿಲ್ಲ, ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಕ್ರಮ ನಮ್ಮಲ್ಲಿ ಇಲ್ಲ, ಆಹ್ವಾನ ನೀಡಿದರೆ ನೋಡೋಣ ಎಂದು ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ ಹಿರಿಯ ಯತಿ ವಿಶ್ವೇಶ ತೀರ್ಥ ಸ್ವಾಮಿಗಳು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಶಿರೂರು ಶ್ರೀಗಳ ಅಕಾಲಿಕ ನಿಧನದಿಂದ ಮನಸ್ಸಿಗೆ ಆಘಾತವಾಗಿದೆ. ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ, ನಾನು ಪ್ರವಾಸದಲ್ಲಿದ್ದೇನೆ, ಶಿರಸಿಯಲ್ಲಿ ನನಗೆ ಕಾರ್ಯಕ್ರಮ ಪೂರ್ವನಿಗದಿಯಾಗಿರುವುದರಿಂದ ಅಲ್ಲಿಗೆ ತೆರಳುತ್ತಿದ್ದೇನೆ, ಅಪರಾಹ್ನ 3 ಗಂಟೆಗೆ ಅಲ್ಲಿ ಕಾರ್ಯಕ್ರಮವಿರುವುದರಿಂದ ಅದು ಮುಗಿಸಿಕೊಂಡು ರಾತ್ರಿ ಉಡುಪಿಗೆ ಹೋಗಿ ಎಲ್ಲಾ ಮಾಹಿತಿ ಪಡೆಯುತ್ತೇನೆ. ಅಂತಿಮ ವಿಧಿವಿಧಾನಕ್ಕೆ ನಾನು ಹೋಗುವುದಿಲ್ಲ, ಹೋಗುವ ಕ್ರಮವೂ ಇಲ್ಲ ಎಂದು ತಿಳಿಸಿದರು.
ಶ್ರೀಗಳ ಅನಾರೋಗ್ಯದ ಬಗ್ಗೆ ನನಗೆ ನಿನ್ನೆಯಷ್ಟೇ ಗೊತ್ತಾಯಿತು, ಅವರು ಏನು ಆಹಾರ ತೆಗೆದುಕೊಂಡರು, ಎಲ್ಲಿ ಊಟ ಮಾಡಿದರು ಎಂಬ ಬಗ್ಗೆ ನನಗೇನು ತಿಳಿದಿಲ್ಲ. ವಿಷಪ್ರಾಶನವಾಗಿದೆ ಎಂಬ ಬಗ್ಗೆಯೂ ನನಗೇನು ತಿಳಿದಿಲ್ಲ, ಮಾಧ್ಯಮಗಳಿಂದಷ್ಟೇ ನನಗೆ ಈ ವಿಷಯ ಗೊತ್ತಾಯಿತು ಎಂದು ಹೇಳಿದರು.
ಶ್ರೀಗಳ ಸಾವಿನ ಬಗ್ಗೆ ತನಿಖೆ ಬಗ್ಗೆ ಪೊಲೀಸರು ನಿರ್ಧರಿಸುತ್ತಾರೆ, ವಿಷಪ್ರಾಶನ ಯಾರು ಮಾಡುತ್ತಾರೆ, ಯಾರ ಮೇಲೆ ಸಂಶಯಪಡಬೇಕು, ಸಂಶಯಪಡಲು ಕಾರಣ ಬೇಕು, ಇದು ಸಹಜ ಸಾವೇ ಆಗಿರಬೇಕು ಈ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪೇಜಾವರ ಶ್ರೀಗಳು ಹೇಳಿದರು.