ಶಿರೂರು ಶ್ರೀಗಳ ಅನುಮಾನಸ್ಪದ ಸಾವಿನ ಬಗ್ಗೆ ಸಮಗ್ರ ತನಿಖೆಗೆ ಕೇಮಾರು ಸ್ವಾಮೀಜಿ ಆಗ್ರಹ
ಉಡುಪಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅನುಮಾನಸ್ಪದ ಸಾವಿನ ಬಗ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕೇಮಾರು ಸ್ವಾಮೀಜಿಗಳು ಸಮಗ್ರ ತನಿಖಗೆ ಒತ್ತಾಯಿಸಿದ್ದಾರೆ.
‘ಪಟ್ಟದ ದೇವರ ವಿಚಾರವನ್ನು ಲಕ್ಷ್ಮೀವರ ತೀರ್ಥರು ಅತಿಯಾಗಿ ಮನಸಿಗೆ ಹಚ್ಚಿಕೊಂಡಿದ್ದರು. ಅವರ ಆರೋಗ್ಯ ಚೆನ್ನಾಗಿತ್ತು. ಸಾಯುವಂಥ ಅನಾರೋಗ್ಯ ಇರಲಿಲ್ಲ. ನ್ಯಾಯಾಲಯದಲ್ಲಿ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಂಡಿದ್ದರು’ ಎಂದು ಕೇಮಾರು ಮಠದ ಶ್ರೀಗಳು ಹೇಳಿದ್ದಾರೆ.
‘ವನಮಹೋತ್ಸವ ಕಾರ್ಯಕ್ರಮದ ನಂತರ ಆಹಾರ ಸೇವಿಸಿದ್ದರಿಂದ ಅವರಿಗೆ ಫುಡ್‌ಫಾಯ್ಸನ್ ಆಗಿದೆ ಎನ್ನುವುದು ಸುಳ್ಳು. ಒಂದು ವೇಳೆ ಹೀಗಾಗಿದ್ದರೆ ಅವರ ಜೊತೆಯಲ್ಲಿದ್ದ ಎಲ್ಲರಿಗೂ ವಾಂತಿಯಾಗಬೇಕಿತ್ತು’ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಶ್ರೀಗಳ ಅನುಮಾನಾಸ್ಪದ ಸಾವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಸಮಗ್ರ ತನಿಖೆ ನಡೆಸಬೇಕು’ ಎಂದು ಕೇಮಾರು ಸ್ವಾಮೀಜಿ ಆಗ್ರಹಿಸಿದ್ದಾರೆ.