ಶಿರೂರು ಸ್ವಾಮೀಜೀ ಶ್ರೀ ಲಕ್ಷೀವರ ತೀರ್ಥ (65) ನಿಧನ
ಉಡುಪಿ: ಶಿರೂರು ಶ್ರೀ ಲಕ್ಷೀವರ ತೀರ್ಥ ಸ್ವಾಮೀಜೀ ಯವರು ಇಂದು ಕೆ ಎಂ ಸಿ ಮಣಿಪಾಲ ಆಸ್ಪತ್ರೆ ಯಲ್ಲಿ ವಿದಿವಶರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಸ್ವಾಮೀಜಿ ಯವರು ಜುಲೈ 18 ರಂದು, ಅತೀವ ಹೊಟ್ಟೆ ನೋವು ಮತ್ತು ವಾಂತಿ ಯಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆಯು ಫಲಕಾರಿಯಾಗದೆ ಇಂದು ಬೆಳಿಗ್ಗೆ ಸಾವನ್ನಪ್ಪಿ ದರು.
ನೂರಾರು ಭಕ್ತಾದಿಗಳು ಆಸ್ಪತ್ರೆಯ ಬಳಿ ನೆರೆದರು. ಉಡುಪಿಯಿಂದ ಮಣಿಪಾಲದ ತನಕ ಪೋಲೀಸರು ಭದ್ರತಾ ವ್ಯವಸ್ಥೆಯನ್ನು ಬಿಗಿ ಗೊಳಿಸಲಾಗಿದೆ.
ಉಡುಪಿ ಜಿಲ್ಲೆ ಹೆಬ್ರಿ ಬಳಿಯ ಮಡಾಮಕ್ಕಿ ಮೂಲದ ಶಿರೂರು ಶ್ರೀಗಳ ಪೂರ್ವಾಶ್ರಮದ ಹೆಸರು ಹರೀಶ್ ಆಚಾರ್ಯ. ಇವರ ತಂದೆಯ ಹೆಸರು ವಿಠಲ ಆಚಾರ್ಯ ಮತ್ತು ತಾಯಿಯ ಹೆಸರು ಕುಸುಮ ಆಚಾರ್ಯ. ಶಿರೂರು ಶ್ರೀಗಳು ಮಠದ ಪರಂಪರೆಯ ಮೂವತ್ತನೇ ಯತಿಗಳು.
1963ರಲ್ಲಿ ಜನಿಸಿದ ಶಿರೂರು ಶ್ರೀಗಳು, 1971ರಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ಶಿರೂರು ಶ್ರೀಗಳು ಖುದ್ದು ಈಜುಪಟು ಮತ್ತು ಕರಾಟೆ ಪಟು ಆಗಿದ್ದರು. ಖ್ಯಾತ ಡ್ರಮ್ಸ್ ವಾದಕ ಶಿವಮಣಿಯೊಂದಿಗೆ ಡ್ರಮ್ಸ್ ಜುಗಲ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉಡುಪಿ ಅಷ್ಟಮಠಗಳ ಯತಿಗಳಂತೆ ತಾವಲ್ಲ ಎಂದು ಸಾರಿದ್ದರು. ಮೂರು ವರ್ಷಗಳ ಹಿಂದೆ ಜಿಲ್ಲಾ ಈಜು ಸ್ಪರ್ಧೆಯಲ್ಲಿ, ಸ್ವತಃ ತಾವೇ ಒಂದು ಗಂಟೆಗೂ ಹೆಚ್ಚುಕಾಲ ಸಮುದ್ರದಲ್ಲಿ ಯೋಗಾಸನ ಮಾಡಿ ಸುದ್ದಿಯಾಗಿದ್ದರು.
ಸಂಗೀತ, ಸಾಹಿತ್ಯದಲ್ಲಿ ಶಿರೂರು ಶ್ರೀಗಳು ವಿಶೇಷ ಅಭಿಮಾನವನ್ನು ಹೊಂದಿದ್ದರು. ಇನ್ನು ಶ್ರೀಗಳು ಜಾತಿ ಆಧಾರಿತವಾಗಿ ಊಟೋಪಚಾರ ನೀಡುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪರ್ಯಾಯ ಸ್ವಾಗತ ಸಮಿತಿಗೆ ಅಧ್ಯಕ್ಷರನ್ನಾಗಿ ಬ್ರಾಹ್ಮಣ, ಜಿಎಸ್ಬಿ ಸಮುದಾಯದಿಂದ ಹೊರತಾಗಿ, ಮೊಗವೀರ ಸಮುದಾಯವರನ್ನು ನೇಮಿಸಿ, ಸುದ್ದಿಗೆ ಗ್ರಾಸವಾಗಿದ್ದರು. ಮೂರು ಪರ್ಯಾಯವನ್ನು ಯಶಸ್ವಿಯಾಗಿ ಪೂರೈಸಿದ್ದ ಶಿರೂರು ಶ್ರೀಗಳು, 1978-80ರಲ್ಲಿ ನಡೆದ ಮೊದಲ ಪರ್ಯಾಯದ ವೇಳೆ ಉಡುಪಿ ಶ್ರೀ ಕೃಷ್ಣ ಮಠದ ಪ್ರವೇಶಧ್ವಾರವನ್ನು ನವೀಕರಿಸಿದ್ದರು.
ಇನ್ನು ಎರಡನೇ ಪರ್ಯಾಯದ ವೇಳೆ ಶ್ರೀಗಳು ಶ್ರೀಕೃಷ್ಣ ವಿಗ್ರಹಕ್ಕೆ ಮಾಡಿದ್ದ ನಾನಾ ಬಗೆಯ ವಿಶೇಷ ಅಲಂಕಾರಗಳು ಸಾವಿರಾರು ಭಕ್ತರನ್ನು ಆಕರ್ಷಿಸಿತ್ತು. ಇತ್ತೀಚಿನ ವಿಧಾನ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿ ನಾಮಪತ್ರವನ್ನೂ ಸಲ್ಲಿಕೆ ಮಾಡಿ ಬಳಿಕ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದರು. ಅಲ್ಲದೆ ಅವಕಾಶ ಸಿಕ್ಕರೆ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸುವುದಾಗಿ ಬಹಿರಂಗವಾಗಿಯೇ ಹೇಳಿದ್ದರು.
ಮಠಕ್ಕೆ ಬಂದ ಬಡವರಿಗೆ ಊಟ, ಹಣಕಾಸು ನೆರವು ನೀಡುತ್ತಿದ್ದ ಶಿರೂರು ಶ್ರೀಗಳು, ಹಿಂದೊಮ್ಮೆ ಉಡುಪಿ ನಗರಕ್ಕೆ ನೀರಿನ ಸಮಸ್ಯೆ ಉಂಟಾದಾಗ ತಾವೇ ಮುಂದೆ ನಿಂತು ಸಮಸ್ಯೆಯನ್ನು ಬಗೆಹರಿಸಿದ್ದರು.
ವಿವಾದಗಳ ಸುಳಿಯಲ್ಲಿ ಶ್ರೀಗಳು
ಜನಸಾಮಾನ್ಯರ ಸ್ವಾಮೀಜಿಯೆಂದೇ ಹೆಸರಾಗಿದ್ದ ಶಿರೂರು ಶ್ರೀಗಳು, ತಮ್ಮ ಪಟ್ಟದ ದೇವರ ವಿಚಾರದಲ್ಲಿ ನಡೆಯುತ್ತಿದ್ದ ವಿದ್ಯಮಾನದಿಂದ ತೀರಾ ಮನನೊಂದಿದ್ದರು. 48ವರ್ಷಗಳಿಂದ ಪೂಜಿಸಿಕೊಂಡು ಬಂದಿದ್ದ ಪಟ್ಟದದೇವರು ಕೈತಪ್ಪಿದ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಏಕಾಂಗಿಯಾಗಿ ಬಿಕ್ಕಿಬಿಕ್ಕಿ ಅಳುತ್ತಿದ್ದರು ಎನ್ನುವ ಮಾಹಿತಿಯಿದೆ.
ಇನ್ನು ಸೋದೆ ಮಠದ ಹಿಂದಿನ ಶ್ರೀಗಳಿಂದ ಸನ್ಯಾಸತ್ವ ಪಡೆದಿದ್ದ ಶಿರೂರು ಶ್ರೀಗಳ ಉತ್ತರಾಧಿಕಾರಿ ನೇಮಿಸಲು ಒಪ್ಪದ ನಿರ್ಧಾರ ಅಷ್ಟಮಠಗಳ ಇತರ ಸ್ವಾಮೀಜಿಗಳನ್ನು ಕೆರಳಿಸಿತ್ತು.
ಶಿರೂರು ಶ್ರೀಗಳು ಅನಾರೋಗ್ಯ ಕಾರಣ ಪೂಜೆ ಸಲ್ಲಿಸಲಾಗುವುದಿಲ್ಲ ಎಂದು ಪಟ್ಟದ ದೇವರ ವಿಗ್ರಹವನ್ನು ಶ್ರೀಕೃಷ್ಣ ಮಠಕ್ಕೆ ಒಪ್ಪಿಸಿದ್ದರು. ಆದರೆ ಇತರ ಮಠಾಧೀಶರು ಪಟ್ಟದ ದೇವರನ್ನು ಶಿಷ್ಯ ಸ್ವೀಕಾರ ಮಾಡಿಕೊಳ್ಳದೆ ಹಿಂತಿರುಗಿಸಲಾಗುವುದಿಲ್ಲ ಎಂದು ಪಟ್ಟು ಹಿಡಿದ್ದಿದ್ದರು. ಈ ನಡೆಯ ಬಗ್ಗೆ ಬಹಿರಂಗವಾಗಿ ವಾಗ್ದಳಿ ನಡೆಸಿದ್ದ ಶ್ರೀಗಳು ನ್ಯಾಯ ಕೇಳಲು ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಲ್ಲದೆ ಒಂದು ವೇಳೆ ಪಟ್ಟದ ದೇವರನ್ನು ಹಿಂತಿರುಗಿಸದಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಶಿರೂರು ಮಠದ 30ನೇ ಯತಿಗಳಾಗಿದ್ದ ಶ್ರೀಗಳು ಮೂರು ಪರ್ಯಾಯಗಳನ್ನು ಪೂರೈಸಿದ್ದರು. ಕಳೆದ ಕೆಲವು ದಿನಗಳಿಂದ ತನ್ನ ಮಠದ ಪಟ್ಟದ ದೇವರನ್ನು ಮರಳಿ ಪಡೆಯಲು ಹೋರಾಡುತ್ತಿದ್ದರು. ವಿಭಿನ್ನ ವ್ಯಕ್ತಿತ್ವ, ನೇರ ನುಡಿಯ ಶ್ರೀಗಳು ಅಷ್ಠಮಠದ ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ ಎಂದು ಹೇಳಿ ವಿವಾದಕ್ಕೀಡಾಗಿದ್ದರು.