ಶಿರ್ವ: ಕೋಳಿ ಅಂಕಕ್ಕೆ ಪೊಲೀಸರ ದಾಳಿ – ಏಳು ಮಂದಿ ವಶಕ್ಕೆ
ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಶಿರ್ವ ಪೊಲೀಸರು ದಾಳಿ ನಡೆಸಿ 7 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತರನ್ನು ಹಿರಿಯಡ್ಕ ಅತ್ರಾಡಿ ನಿವಾಸಿ ಸದಾನಂದ (55), ಕಟಪಾಡಿ ನಿವಾಸಿ ಶ್ರೀಶ (24), ಕುರ್ಕಾಲು ನಿವಾಸಿ ದಾಮೋದರ (39), ಕಾಪು ಮಲ್ಲಾರು ನಿವಾಸಿ ಕೃಷ್ಣ (25), ಬೆಳ್ಳೆ ನಿವಾಸಿ ವಿನಯ (43), ಮಲ್ಲಾರು ನಿವಾಸಿ ಪಾಂಡು (50), ಕಾಪು ನಿವಾಸಿ ಸುಧಾಕರ (50) ಎಂದು ಗುರುತಿಸಲಾಗಿದೆ.
ಗುರುವಾರ ಮಧ್ಯಾಹ್ನ ಶಿರ್ವ ಪಿ ಎಸ್ ಐ ಶ್ರೀ ಶೈಲ್ ಡಿ ಎಮ್ ಅವರು ಗಸ್ತು ಸಂಚಾರದಲ್ಲಿದ್ದ ವೇಳೆ ಕುರ್ಕಾಲು ಗ್ರಾಮದ ಪಾಜೈ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ಅದರಂತೆ ಸ್ಥಳಕ್ಕೆ ತೆರಳಿ ದಾಳ ನಡೆಸಿದಾಗ ಅಲ್ಲಿ ಕೋಳಿಗಳ ಮೇಲೆ ಹಣವನ್ನು ಪಣವಾಗಿರಿಸಿ ಕೋಳಿ ಅಂಕ ನಡೆಯುತ್ತಿರುವುದು ಪತ್ತೆಯಾಗಿದೆ. ಈ ವೇಳೆ 7 ಮಂದಿಯನ್ನು ವಶಕ್ಕೆ ಪಡೆದಿದ್ದು, ಉಳಿದವರು ಪರಾರಿಯಾಗಿದ್ದಾರೆ.
ಬಂಧಿತರಿಂದ ಜೂಜಾಟಕ್ಕೆ ಉಪಯೋಗಿಸಿದ್ದ ರೂ 3000/- ವಿವಿಧ ಜಾತಿಯ ಕೋಳಿಗಳು-6 ಕಾಲಿಗೆ ಕಟ್ಟಲು ಉಪಯೋಗಿಸುವ ಸಣ್ಣ ಕತ್ತಿ (ಬಾಳು) -2 ಹಾಗೂ ಸ್ಥಳದಲ್ಲಿದ್ದ ಒಂದು ಕಾರು, 7 ದ್ವಿಚಕ್ರ ವಾಹನ ಎರಡು ಅಟೋ ರಿಕ್ಷಾಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.