ಉಡುಪಿ: ಅಧಿಕಾರ ಅಥವಾ ಹುದ್ದೆಯನ್ನು ಪಡೆದ ಮಾತ್ರಕ್ಕೆ ಉತ್ತಮ ನಾಯಕನಾಗುವುದಿಲ್ಲ ಬದಲಿಗೆ ತನ್ನ ಹುದ್ದೆಗೆ ನ್ಯಾಯ ತಂದು ತನ್ನಿಂದ ಸಾಧ್ಯವಾದಷ್ಟು ಅಭಿವೃದ್ಧಿ ಪಥದಲ್ಲಿ ಸಾಗಿ ಒಮ್ಮತದಿಂದ ಮುನ್ನಡೆಸುವ ಕೌಶಲ್ಯ ಹೊಂದಿದವನೇ ಉತ್ತಮ ನಾಯಕವೆನಿಸಿಕೊಳ್ಳುತ್ತಾನೆ. ನಾಯಕತ್ವ ದೇವರು ಕೊಟ್ಟ ಒಂದು ಪ್ರತಿಭೆ ಆದನ್ನ ಎಳವೇಯಲ್ಲಿಯೇ ಪೋಷಿಸಿ ಬೆಳಸಬೇಕು. ವಿದ್ಯಾರ್ಥಿಗಳಿಗೆ ಶಾಲಾ ಮಂತ್ರಿ ಮಂಡಲ ಇದಕ್ಕೆ ಸ್ಫೂರ್ತಿ ನೀಡಲಿದೆ ಎಂದು ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಫಾ|ಕೆನ್ಯುಟ್ ನೊರೊನ್ನಾ ಹೇಳಿದರು.
ಅವರು ಶಿರ್ವ ಡೊನ್ ಬೊಸ್ಕೊ ಆಂಗ್ಲ ಶಾಲೆಯ ಮಂತ್ರಿಮಂಡಲದ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರತಿಜ್ಞಾ ವಿಧಿಯನ್ನು ಭೋದಿಸಿದ ಶಾಲಾ ಪ್ರಾಂಶುಪಾಲ ರೆ|ಫಾ| ಮಹೇಶ್ ಡಿ’ಸೋಜ ಮಾತನಾಡಿ, “ನಮ್ಮ ಸಮಾಜದಲ್ಲಿ ಉತ್ತಮ ನಾಯಕರ ಕೊರತೆ ಇದೆ. ನಾಯಕತ್ವ ಗುಣ ಹೊಂದಿದ ವಿದ್ಯಾರ್ಥಿ ಸಮುದಾಯ ವಿದ್ಯಾರ್ಥಿ ಜೀವನದಲ್ಲಿ ಸರಿಯಾಗಿ ತರಬೇತಿ ಹೊಂದಲು ಶಾಲಾ ಮಂತ್ರಿಮಂಡಲ ಒಂದು ಉಜ್ವಲ ವೇದಿಕೆಯಾಗಿದೆ” ಎಂದರು.
ಪ್ರೌಢಶಾಲಾ ವಿಭಾಗದಲ್ಲಿ ಸಾಹಿಲ್ ಉಮ್ಮರ್ (ಶಾಲಾ ನಾಯಕ) ವಿಯೋನ್ ಫೆರ್ನಾಂಡಿಸ್(ಉಪನಾಯಕ) ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬ್ರಾನೆಟ್ ನಜ್ರತ್(ಶಾಲಾ ನಾಯಕ) ಪಂಚಮಿ ತಂತ್ರಿ(ಉಪನಾಯಕಿ) ಹಾಗೂ ಇತರ ಮಂತ್ರಿಗಳು ಪ್ರತಿಜ್ಞೆ ಸ್ವೀಕರಿಸಿದರು. ಪ್ರತಿಜ್ಞೆ ಸ್ವೀಕರಿಸಿದ ನಾಯಕರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಶಿಕ್ಷಕಿ ಶ್ರೀಮತಿ ಗ್ರೆಟ್ಟಾ ನೊರೊನ್ನಾ ಸ್ವಾಗತಿಸಿದರು. ಶ್ರೀಮತಿ ಫಿಲೋಮಿನ ಬರ್ಬೊಜಾ ವಂದಿಸಿ, ಕು| ಡೆಲೀಶಾ ಕಸ್ತಲಿನೋ ನಿರೂಪಿಸಿದರು