ಶಿರ್ವ: ಭ್ರಷ್ಟಾಚಾರದ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ

Spread the love

ಶಿರ್ವ: ಭ್ರಷ್ಟಾಚಾರದ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮ

ಶಿರ್ವ ಮಹಿಳಾ ಮಂಡಲ(ರಿ)ಶಿರ್ವ ಇವರ ಆಶ್ರಯದಲ್ಲಿ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ , ನೆಹರೂ ಯುವ ಕೇಂದ್ರ,ಉಡುಪಿ ಇವರ ಮಾರ್ಗದರ್ಶನದಲ್ಲಿ, ರಾಷ್ಟ್ರೀಯ ಸೇವಾ ಯೋಜನೆ , ಸೈಂಟ್ ಮೇರಿಸ್ ಕಾಲೇಜು,ಶಿರ್ವ ಇವರ ಸಹಯೋಗದೊಂದಿಗೆ ಭ್ರಷ್ಟಾಚಾರ ನಿರ್ಮೂಲನೆ ಕುರಿತು ಜಾಗೃತಿ ಕಾರ್ಯಕ್ರಮವು ಶಿರ್ವ ಸೈಂಟ್ ಮೇರೀಸ್ ಕಾಲೇಜ್ ನ ಸಭಾಂಗಣದಲ್ಲಿ ಜರಗಿತು.

ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಗುಲಾಬಿ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ.ಗಣನಾಥ್ ಎಕ್ಕಾರ್ ಅವರು ಭಾಗವಹಿಸಿ ಮಾತನಾಡುತ್ತಾ ಇಂದಿನ ದಿನಗಳಲ್ಲಿ ಸಮಾಜದ ಜ್ವಲಂತ ಸಮಸ್ಯೆಗಳಲ್ಲಿ ಭ್ರಷ್ಟಾಚಾರವು ಅತೀ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.ಈ ಸಮಸ್ಯೆಯ ಕಬಂಧ ಬಾಹುಗಳು ಶಿಕ್ಷಣ, ಉದ್ಯೋಗ, ವ್ಯಾಪಾರೋದ್ಯಮ ,ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಿಸಿದೆ.ಲಂಚ ಕೊಡದೇ ಯಾವ ಕೆಲಸಗಳೂ ನಡೆಯುವುದಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇದಕ್ಕೆ ಕಾರಣ ನಮ್ಮಂತಹ ಜನಸಾಮಾನ್ಯರು ವಿರೋಧಿಸದೇ,ಮಾತನಾಡದೇ ಸುಮ್ಮನಿರುವುದು ಹಾಗೂ ಚುನಾವಣೆಗಳಲ್ಲಿ ಸರಿಯಾದ ವ್ಯಕ್ತಿಗಳನ್ನು ಆರಿಸಿ ಕಳುಹಿಸದಿರುವುದು.ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತಿ ಹೊಂದಬೇಕು.ಲಂಚ ಕೊಡುವುದಿಲ್ಲ, ಲಂಚಕ್ಕಾಗಿ ಕೈಚಾಚುವುದಿಲ್ಲ ಎಂಬ ಪ್ರತಿಜ್ಞೆಯನ್ನು ಮಾಡುವುದರೊಂದಿಗೆ ದೃಢ ಸಂಕಲ್ಪದಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.

ಮಹಿಳಾ ಮಂಡಲದ ಅಧ್ಯಕ್ಷೆ ಡಾ.ಸ್ಪೂರ್ತಿ ಶೆಟ್ಟಿ ಅವರು ಪ್ರಾಸ್ತಾವಿಕ ದೊಂದಿಗೆ ಅತಿಥಿಗಳನ್ನು ಪರಿಚಯಿಸಿದರು.ಮಹಿಳಾ ಮಂಡಲದ ಗೌರವ ಸಲಹೆಗಾರರಾದ ಗೀತಾ ವಾಗ್ಳೆಯವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

ಸ್ವಾಗತ, ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದಗಳನ್ನು ಕಾಲೇಜು ವಿದ್ಯಾರ್ಥಿನಿಯರು ನಡೆಸಿಕೊಟ್ಟರು.ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಮೆಲ್ವಿನ್ ಕ್ಯಾಸ್ತಲಿನೋ ,ಮಹಿಳಾ ಮಂಲದ ಕೋಶಾಧಿಕಾರಿ ದೀಪಾ ಶೆಟ್ಟಿ, ಸುನೀತಾ ಸದಾನಂದ್,ಪುಷ್ಪಾ ಆಚಾರ್ಯ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು


Spread the love