Home Mangalorean News Kannada News ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ನವೀಕೃತ ದಿ. ವಂ. ಹೆನ್ರಿ ಕ್ಯಾಸ್ತಲಿನೊ ಸ್ಮಾರಕ ಸಭಾಂಗಣ ಉದ್ಘಾಟನೆ

ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ನವೀಕೃತ ದಿ. ವಂ. ಹೆನ್ರಿ ಕ್ಯಾಸ್ತಲಿನೊ ಸ್ಮಾರಕ ಸಭಾಂಗಣ ಉದ್ಘಾಟನೆ

Spread the love

ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ನವೀಕೃತ ದಿ. ವಂ. ಹೆನ್ರಿ ಕ್ಯಾಸ್ತಲಿನೊ ಸ್ಮಾರಕ ಸಭಾಂಗಣ ಉದ್ಘಾಟನೆ

ಉಡುಪಿ: ಪ್ರತಿಫಲ ಅಪೇಕ್ಷಿಸದೇ ಮಾಡುವ ಕೆಲಸಗಳು ಶಾಶ್ವತವಾಗಿ ಸಮಾಜದಲ್ಲಿ ಅಮರವಾಗಿ ಉಳಿಯುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಶನಿವಾರ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನವೀಕರಿಸಲ್ಪಟ್ಟ ದಿ. ವಂ. ಹೆನ್ರಿ ಕ್ಯಾಸ್ತಲಿನೊ ಸ್ಮಾರಕ ಸಭಾಂಗಣವನ್ನು ಆಶೀರ್ವಚನ ನೆರವೇರಿಸಿ ಮಾತನಾಡಿದರು.

ಮಾನವ ತನ್ನ ಜೀವನದ ಹಾದಿಯಲ್ಲಿ ಸಾಗುವಾಗ ಮಾಡಿದ ಉತ್ತಮ ಕೆಲಸಗಳು ಸಮಾಜ ಸದಾ ನೆನಪಿನಲ್ಲಿ ಇಡುತ್ತದೆ. ವಂ. ಹೆನ್ರಿ ಕ್ಯಾಸ್ತಲಿನೊ ತಮ್ಮ ಜೀವಿತದ ಅವಧಿಯಲ್ಲಿ ಸದಾ ವಿದ್ಯಾರ್ಥಿಗಳ ಒಳಿತನ್ನು ಬಯಸಿದವರು. ಅವರಲ್ಲಿ ವಿದ್ಯಾರ್ಥಿಗಳನ್ನು ಪ್ರೀತಿಸುವ ಗುಣ ಹೊಂದಿದ್ದರು ಅದೇ ರೀತಿ ವಿದ್ಯಾರ್ಥಿಗಳು ಕೂಡ ಅವರನ್ನು ಪ್ರೀತಿಸುತ್ತಿದ್ದರು ಇದರಿಂದಾಗಿ ಇಂದಿಗೂ ಕೂಡ ಅವರ ಹೆಸರು ಪ್ರತಿಯೊಬ್ಬರ ಬಾಯಿಯಲ್ಲಿ ಅಮರವಾಗಿದೆ. ತನಗಾಗಿ ಏನನ್ನು ಒಳಿತು ಬಯಸದೆ ತನ್ನ ಸೇವೆಯನ್ನು ನೀಡಿದ ಅವರು ಸದಾ ಸ್ಮರಣೆಗೆ ಅರ್ಹರಾಗಿದ್ದಾರೆ ಎಂದರು.

ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ನಿಟ್ಟಿ ಮಹಾವಿದ್ಯಾಲಯದ ಕುಲಪತಿಗಳಾದ ಎನ್ ವಿನಯ್ ಹೆಗ್ಡೆ ಮಾತನಾಡಿ ಕಳೆದ 50 ವರ್ಷಗಳಿಂದ ವಂ. ಹೆನ್ರಿ ಕ್ಯಾಸ್ತಲಿನೊ ಅವರನ್ನು ತಾನು ಹತ್ತಿರದಿಂದ ಗಮನಿಸಿದ್ದು ಅವರು ವಿದ್ಯಾಕ್ಷೇತ್ರದಲ್ಲಿ ಮಾಡಿದ ಸೇವೆ ಅಮರವಾದುದು. ವಿದ್ಯಾಭ್ಯಾಸ ಕೇವಲ ಕೆಲಸಕ್ಕಾಗಿ ಅಲ್ಲದೆ ಉತ್ತಮ ನಡತೆಗಾಗಿ ಎನ್ನುವುದನ್ನು ಅವರು ತಮ್ಮ ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು. ವಂ. ಹೆನ್ರಿ ಕ್ಯಾಸ್ತಲಿನೊ ತಮ್ಮ ಜೀವನವನ್ನು ಸಮಾಜಕ್ಕೆ ಅರ್ಪಿಸಿದ್ದಲ್ಲದೆ ಪ್ರೀತಿಯ ಸ್ಮಾರಕದಂತೆ ಬದುಕಿದ್ದರು ಎಂದರು.

ಇಂದು ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಸಮಾಜದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಸೇವೆ ಅಮರವಾದುದು. ಅವರ ಶಿಕ್ಷಣ ಸಂಸ್ಥೆಗಳಲ್ಲಿ ಲಭಿಸುವ ಶಿಸ್ತುಭರಿತ ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಗೆ ಮಾನವನಾಗಿ ಬದುಕಲು ಸಹಾಯ ಮಾಡಿದೆ ಅದಕ್ಕೆ ತಾನೂ ಕೂಡ ಸಾಕ್ಷಿ. ವಿದ್ಯಾರ್ಥಿ ಶಿಕ್ಷಣ ಪಡೆದು ಸಭ್ಯ ನಾಗರಿಕನಾಗಿ ಬದುಕಿದಾಗ ಆತನ ಮುಂದಿನ ಜೀವನ ಸಾಕಾರವಾಗುತ್ತದೆ ಈ ಮೂಲಕ ಆತ ದೇಶದ ಸಭ್ಯ ನಾಗರಿಕನಾಗಿ ಹೊರಹೊಮ್ಮುತ್ತಾನೆ .

ಸಂತ ಮೇರಿ ವಿದ್ಯಾಸಂಸ್ಥೆಗಳ ಸಂಚಾಲಕ ವಂ|ಡೆನಿಸ್ ಡೆಸಾ ಅವರು ಮಾತನಾಡಿ ಪರರಿಗೆ ಸಹಾಯ ಮಾಡುವ ಗುಣವನ್ನು ಹೊಂದಿದಾಗ ಪ್ರತಿಯೊಬ್ಬ ಮಾನವ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ತನ್ನಿಂದ ತಾನೇ ಏರುತ್ತಾನೆ. ಅದಕ್ಕೆ ಪ್ರೋತ್ಸಾಹ ನೀಡುವ ಕೆಲಸ ಹೆಚ್ಚು ಹೆಚ್ಚು ಉತ್ತಮ ಕೆಲಸಗಳು ಸಮಾಜದಲ್ಲಿ ನಡೆಯಲು ಸಾಧ್ಯ. ಸಂಸ್ಥೆಯ ಹಳೆವಿದ್ಯಾರ್ಥಿಗಳ ಅವಿರತ ಪ್ರಯತ್ನ ಹಾಗೂ ಶ್ರಮದ ಫಲವಾಗಿ ಅತ್ಯುತ್ತಮ ಸಭಾಂಗಣ ನಿರ್ಮಾಣವಾಗಿದೆ ಎಂದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಸಲಹೆಗಾರರಾದ ಪ್ರೋ. ರೊನಾಲ್ಡ್ ಜೆ ಮೊರಾಸ್ ದಿ. ವಂ|ಹೆನ್ರಿ ಕ್ಯಾಸ್ತಲಿನೊ ಅವರಿಗೆ ನುಡಿ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸಭಾಂಗಣದ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೋ. ರಾಜನ್ ವಿ ಎನ್, ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿಸೋಜಾ, ಡಾನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ವಂ|ಮಹೇಶ್ ಡಿಸೋಜಾ, ಚರ್ಚಿನ ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ಹಾ, ಪಾಲನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.

ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಶ್ವನಾಥ್ ಸ್ವಾಗತಿಸಿ ಜಗದೀಶ್ ಆಚಾರ್ಯ ವಂದಿಸಿದರು.

Click Here To View More Photos 


Spread the love

Exit mobile version