ಶೀರೂರು ಸ್ವಾಮೀಜಿ ನಿಧನ – ಉಡುಪಿ ಬಿಷಪ್, ಕೆಥೊಲಿಕ್ ಸಭಾ ಸಂತಾಪ
ಉಡುಪಿ: ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳ ನಿಧನಕ್ಕೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೋ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಅಷ್ಠಮಠಾಧೀಶರಲ್ಲಿ ಒಬ್ಬರಾದ ಶೀರೂರು ಮಠಾಧೀಶ ಲಕ್ಷ್ಮೀವರತೀರ್ಥ ಶ್ರೀಗಳು ದೈವಾಧೀನರಾದರೆಂಬ ಸುದ್ಧಿ ನಮಗೆ ದುಃಖವನ್ನು ತಂದಿದೆ. ಪರಮದೈವಭಕ್ತರಾಗಿದ್ದು, ಜನಪರ ಹೋರಾಟದ ಮುಂಚೂಣಿಯಲ್ಲಿದ್ದ ಶ್ರೀಗಳು ತಮ್ಮ ನಡೆನುಡಿಯಿಂದ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು. ಬಹುಮುಖ ಪ್ರತಿಭೆಯ ಶ್ರೀಗಳು ಇತರಧರ್ಮಗಳ ನಾಯಕರ ಜೊತೆ ಸತ್ಸಂಬಂಧವನ್ನು ಬೆಳೆಸಿದ್ದರು. ಒಟ್ಟು ಮೂರು ಅವಧಿಯಲ್ಲಿ ಪರ್ಯಾಯ ಪೀಠ ಏರಿ ಬಹಳಷ್ಟು ಜನಹಿತ ಕಾರ್ಯಗಳನ್ನು ಮಾಡಿದ್ದರು.
ಲಕ್ಷ್ಮೀವರತೀರ್ಥ ಶ್ರೀಗಳ ಅಕಾಲಿಕ ಅಗಲುವಿಕೆಯಿಂದ ಎಲ್ಲಾ ಸಹೃದಯಿ ಮಾನವರಿಗೆ ಅತೀವ ದುಃಖವಾಗಿದೆ. ಉಡುಪಿ ಕ್ರೈಸ್ತ ಧರ್ಮಪ್ರಾಂತದ ಪರವಾಗಿ ಅಗಲಿದ ಶ್ರೀಗಳಿಗೆಚಿರಶಾಂತಿಯನ್ನು ಕೋರುತ್ತಾ, ದಯಾಮಯ ಭಗವಂತ ಅವರನ್ನು ತನ್ನ ಸನ್ನಿಧಿಗೆ ಸ್ವಾಗತಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ
ಶಿರೂರು ಸ್ವಾಮೀಜಿ ನಿಧನ: ಕಾರ್ಣಿಕ್ ಸಂತಾಪ
ಉಡುಪಿಯ ಅಷ್ಠಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಯತಿವರ್ಯರಾದ ಶ್ರೀ ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿಯವರು ದೈವಾಧೀನರಾಗಿರುವುದಕ್ಕೆ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ರವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಲಕ್ಷ್ಮೀವರತೀರ್ಥ ಶ್ರೀಪಾದರು ಜನರ ಜೊತೆ ಸಾಮಾನ್ಯರಂತೆ ಬೆರೆಯುತ್ತಿದ್ದರು, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಅಪಾರ.
ಕೊಡುಗೆ ನೀಡಿದ್ದರು. ಶ್ರೀ ಗಳ ಆತ್ಮಕ್ಕೆ ಸದ್ಗತಿ ದೊರೆಯಲಿ ಅವರ ಅಗಲುವಿಕೆಯ ದು:ಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅವರ ಶಿಷ್ಯವರ್ಗಕ್ಕೆ, ಭಕ್ತಾಧಿಗಳಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಶಿರೂರು ಶ್ರೀಗಳ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸಭಾ ಸಂತಾಪ
ಉಡುಪಿ: ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಸ್ವಾಮೀಜಿಗಳಾಗಿದ್ದ ಲಕ್ಷ್ಮೀಶ್ವರ ತೀರ್ಥ ಸ್ವಾಮಿ ಶ್ರೀಗಳ ನಿಧನಕ್ಕೆ ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಸಭಾ ಸಂಘಟನೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸಂಗೀತ, ಸಾಹಿತ್ಯದಲ್ಲಿ ವಿಶೇಷ ಅಭಿಮಾನವನ್ನು ಹೊಂದಿದ್ದ ಶಿರೂರು ಶ್ರೀಗಳು ಸದಾ ಬಡವರ ಪರ ಕಾಳಜಿಯನ್ನು ವ್ಯಕ್ತಪಡಿಸುತ್ತಿದ್ದರು. ಉಡುಪಿಯಲ್ಲಿ ಹುಲಿವೇಷದಂತಹ ಕಲೆಗಳಿಗೆ ವಿಶೇಷ ಪ್ರೋತ್ಸಾಹ ನೀಡುತ್ತಿದ್ದ ಸ್ವಾಮೀಜಿಗಳು ಸರ್ವ ಧರ್ಮ ಸಮನ್ವಯತೆ ಸಾರುವಲ್ಲಿ ಮಂಚೂಣಿಯಲ್ಲಿದ್ದರು. ಅವರು ಸದಾ ಎಲ್ಲಾ ಧರ್ಮದವರನ್ನು ಪ್ರೀತಿಯಿಂದ ಕಾಣುತ್ತಿದ್ದು ಅವರ ಅನೀರಿಕ್ಷೀತ ಸಾವು ನಿಜಕ್ಕೂ ಬೇಸರವನ್ನು ಉಂಟು ಮಾಡಿದೆ. ಅಗಲಿದ ಶ್ರೀಗಳಿಗೆ ಚಿರಶಾಂತಿಯನ್ನು ಕೋರುತ್ತಾ, ದಯಾಮಯ ಭಗವಂತ ಕರುಣಿಸಲಿ ಎಂದು ಕೆಥೊಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.