ಶೈಕ್ಷಣಿಕ ಕೇಂದ್ರವಾಗಿ ಕಾಪು ಅಭಿವೃದ್ಧಿ ; ಶಾಸಕ ವಿನಯ್ ಕುಮಾರ್ ಸೊರಕೆ
ಉಡುಪಿ: ಅಭಿವೃದ್ದಿಗೆ ಸಂಪೂರ್ಣವಾಗಿ ತೆರದುಕೊಂಡ ಕಾಪು ಕ್ಷೇತ್ರವನ್ನು ಶೈಕ್ಷಣಿಕ ಕೇಂದ್ರವಾಗಿಯೂ ಅಭಿವೃದ್ಧಿಪಡಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಕಾಪು ಶಾಸಕ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರಂಭಿಸಲಾಗುತ್ತಿರುವ ಎಂ ಕಾಮ್ ಸ್ನಾತಕೋತ್ತರ ಕೋರ್ಸ್ ಹಾಗೂ 12.80 ಲಕ್ಷ ವೆಚ್ಚದಲ್ಲಿ ಅಳವಡಿಸಲಾದ ಮಲ್ಟಿ ಜಿಮ್ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೂಸಾ ಯೋಜನೆಯಡಿ 1.23 ಕೋಟಿ ವೆಚ್ಚದ ನಾನಾ ಕಾಮಗಾರಿ ಮತ್ತು ಸುನಾಮಿ ಯೋಜನೆಯಡಿ ನೂತನ ಕಟ್ಟಡ ನಿರ್ಮಾಣಕ್ಕೆ ರೂ 2 ಕೋಟಿ ಅನುದಾನ ಬಿಡುಗಡೆಯಾಗಿದೆ. ಕಾಪು ಕೇಂದ್ರ ಸ್ಥಳದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆಗೂ ಒತ್ತು ನೀಡಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಕ್ಷೇತ್ರದಲ್ಲಿ ಸರಕಾರಿ ಐಟಿಐ, ಸರಕಾರಿ ಪಾಲಿಟೆಕ್ನಿಕ್, ಸರಕಾರಿ ವೈದ್ಯಕೀಯ ಕಾಲೇಜು, ಕೇಂದ್ರಿಯ ವಿದ್ಯಾಲಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ವಲ್ರ್ಡ್ ಕ್ಲಾಸ್ ಸಯನ್ಸ್ ಸೆಂಟರ್ ಪ್ರಾರಂಬಿಸಲು ಈಗಾಗಲೇ ಯೋಜನೆ ಮತ್ತು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣೇಶ್ ಬಿಜೈ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಅಧ್ಯಕ್ಷೆ ಸೌಮ್ಯ ಸಂಜೀವ, ಉಪಾಧ್ಯಕ್ಷ ಕೆ ಎಚ್ ಉಸ್ಮಾನ್, ಪೊಲಿಪು ಕಾಲೇಜಿನ ಪ್ರಾಂಶುಪಾಲ ಪಂಡರಿನಾಥ್ ಎಸ್, ಕಾಪು ಸಿ ಎ ಬ್ಯಾಂಕಿನ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಮಾಧವ ಆರ್ ಪಾಲನ್ ಉಪಸ್ಥಿತರಿದ್ದರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಲತಾ ನಾರಾಯಣ ಹೆಗ್ಡೆ ಸ್ವಾಗತಿಸಿ, ಉಪನ್ಯಾಸಕ ಮಂಜುನಾಥ್ ವಂದಿಸಿದರು. ಉಪನ್ಯಾಸಕ ರಾಕೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.