ಶೈಕ್ಷಣಿಕ ಮತ್ತು ವಿದ್ಯಾರ್ಥಿಗಳ ವಿರುದ್ದದ ದೌರ್ಜನ್ಯ ಖಂಡಿಸಿ ಸಿಎಫ್ ಐ ಪ್ರತಿಭಟನೆ
ಮಂಗಳೂರು: “ಬದಲಾವಣೆಗಾಗಿ ಹೆಜ್ಜೆ ಇಡೋಣ, ವಿದ್ಯಾರ್ಥಿಗಳ ಹಕ್ಕುಗಳಿಗಾಘಿ ಒಂದಾಗೋಣ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿರುವುದನ್ನು ಖಂಡಿಸಿ ಬೃಹತ್ ಜಾಥಾ ಹಾಗೂ ಪ್ರತಿಭಟನೆಯನ್ನು ಹಂಪನಕಟ್ಟೆಯಿಂದ ಡಿ.ಸಿ ಕಛೇರಿಯವರೆಗೆ ಹಮ್ಮಿಕೊಳ್ಳಲಾಗಿತ್ತು.
ಹಂಪನಕಟ್ಟೆಯಿಂದ ಪ್ರಾರಂಭವಾದ ರ್ಯಾಲಿಯನ್ನು ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರಾದ ಮಹಮ್ಮದ್ ತುಫೈಲ್ ರವರು ಜಿಲ್ಲಾಧ್ಯಕ್ಷರಾದ ಅಥಾವುಲ್ಲಾರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದಂತಹ ರಾಜ್ಯ ಕಾರ್ಯದರ್ಶಿಯಾದ ತಫ್ಸೀರ್ “ದ.ಕ ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮತ್ತು ದೈಹಿಕವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ಈ ವಿದ್ಯಾಮಾನಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ನಂತರ ಮಾತನಾಡಿದಂತಹ ರಾಜ್ಯಧ್ಯಕ್ಷರಾದ ಮಹಮ್ಮದ್ ತುಫೈಲ್ “ ವಿದ್ಯಾರ್ಥಿ ಹೋರಾಟವನ್ನು ಕೇಸು ದಾಖಲಿಸುವ ಮೂಲಕ ಹತ್ತಿಕ್ಕಿದಂತಹ ಇತಿಹಾಸಗಳು ಈ ದೇಶದಲ್ಲಿ ಎಲ್ಲೂ ಕಂಡಿಲ್ಲ. ಬೆದರಿಕೆಗಳಿಗೆ ಮತ್ತು ಅಧಿಕಾರಿಗಳ ಒತ್ತಡಗಳಿಗೆ ವಿದ್ಯಾರ್ಥಿಗಳು ಎಲ್ಲಿಯೂ ಮಣಿಯಬಾರದು ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬಲಪಡಿಸಿಕೊಂಡು ವಿದ್ಯಾರ್ಥಿಗಳು ಹೋರಾಟದಲ್ಲಿ ಮುಂಚೂಣಿಯಲ್ಲಿರಬೇಕು” ಎಂದು ಕರೆಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಅಥಾವುಲ್ಲಾ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಹುಜನ ವಿದ್ಯಾರ್ಥಿ ಸಂಘದ ಸಂಯೋಜಕರಾದ ರಘುಧರ್ಮಸೇನ, ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿಯಾದ ಶಾಕೀರ್, ಮುಖಂಡರಾದ ಸೂಫಿಯಾನ್, ಇರ್ಷಾದ್, ಶಫೀಕ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರಿಯಾಝ್ ವಂದಿಸಿ ನಿರೂಪಿಸಿದರು.