ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ಕಾಂಗ್ರೇಸ್ ಉಸ್ತುವಾರಿಯ ವರದಿ ಸಂಗ್ರಹಕ್ಕೆ ಕಾರ್ಣಿಕ್ ಖಂಡನೆ
ಮಂಗಳೂರು: ಅಂತ:ಕಲಹದ ಗೂಡಾಗಿದ್ದ ಕಾಂಗ್ರೇಸ್ ನ ಉಸ್ತುವಾರಿ ದಿಗ್ವಿಜಯ್ ಸಿಂಗ್ ರವರ ಉದ್ಧಟತನದ ಪರಿಣಾಮಗಳನ್ನು ನಿಯಂತ್ರಿಸಲು ಹಾಗೂ ಕಾಂಗ್ರೇಸ್ ಪಕ್ಷದಲ್ಲಿ ಶಿಸ್ತನ್ನು ರೂಪಿಸಲು ರಾಜ್ಯದ ಕಾಂಗ್ರೇಸ್ ಉಸ್ತುವಾರಿಯಾಗಿ ನೇಮಕವಾಗಿರುವ ಮೂಲತ: ಕಮ್ಯೂನಿಸ್ಟ್ ಸಿದ್ದಾಂತವಾದಿ ಸನ್ಮಾನ್ಯ ಶ್ರೀ ವೇಣುಗೋಪಾಲ್ ರವರು ರಾಜ್ಯ ಕಾಂಗ್ರೇಸ್ ನಾಯಕರುಗಳ ಮೂಲಕ ಶೈಕ್ಷಣಿಕ ಸಂಸ್ಥೆಗಳ ಕುರಿತಾಗಿ ವರದಿ ಸಂಗ್ರಹಿಸುತ್ತಿರುವುದು ಒಂದು ಆಘಾತಕಾರಿ ವಿಚಾರವಾಗಿದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ರಾಜ್ಯ ಕಾಂಗ್ರೇಸ್ ಉಸ್ತುವಾರಿಯಾಗಿರುವ ವೇಣುಗೋಪಾಲ್ ರವರು ರಾಜ್ಯದ ಕಾಂಗ್ರೇಸ್ ಉಸ್ತುವಾರಿ ನಡೆಸುವ ಬದಲಿಗೆ ಅನಗತ್ಯವಾಗಿ ಶೈಕ್ಷಣಿಕ ಸಂಸ್ಥೆಗಳ ಮಾಹಿತಿ ಸಂಗ್ರಹ ಮಾಡುತ್ತಿರುವುದು ಅವರ ದುರುದ್ದೇಶವನ್ನು ಎತ್ತಿ ತೋರಿಸುತ್ತದೆ. ಮೂಲತ: ಕಮ್ಯೂನಿಸ್ಟ್ ಸಿದ್ಧಾಂತವಾದಿಯಾದ ಸನ್ಮಾನ್ಯ ವೇಣುಗೋಪಾಲ್ ರವರು ಕಮ್ಯೂನಿಸ್ಟ್ ಪ್ರೇರಿತ ಒಂದು ಸಣ್ಣ ವರ್ಗದವರು ನಡೆಸುತ್ತಿರುವ ಆರಾಷ್ಟ್ರೀಯ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಒಂದು ಷಡ್ಯಂತ್ರ ಎಂದು ಶೈಕ್ಷಣಿಕ ವಲಯದಲ್ಲಿ ಚರ್ಚೆ ಪ್ರಾರಂಭವಾಗಿರುವುದು ಕಟು ವಾಸ್ತವ.
ಇತ್ತೀಚೆಗೆ ರಾಷ್ಟ್ರೀಯ ಕಾಂಗ್ರೇಸ್ ನ ಉಪಾಧ್ಯಕ್ಷರಾದ ರಾಹುಲ್ ಗಾಂಧಿಯವರು ಕಾಲೇಜುಗಳ ಭೇಟಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಾಂಗ್ರೇಸ್ ಗೆ ಇರಿಸು ಮುರಿಸು ಉಂಟು ಮಾಡಿದ್ದನ್ನು ವೇಣುಗೋಪಾಲ್ ರವರಿಗೆ ನೆನಪಿಸುತ್ತೇನೆ. ರಾಜ್ಯದ ಹಾಗೂ ರಾಷ್ಟ್ರದ ಶೈಕ್ಷಣಿಕ ರಂಗದಲ್ಲಿ ದೇಶ ಪ್ರೇಮ ಹಾಗೂ ರಾಷ್ಟ್ರೀಯ ವಿಚಾರ ಧಾರೆಗಳನ್ನು ಪ್ರತಿಬಿಂಬಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಹಾಗೂ ಶೈಕ್ಷಣಿಕ ಕ್ಷೇತ್ರದ ಸಮಸ್ಯೆಗಳಿಗೆ ನಿರಂತರ ಹೋರಾಟ ನಡೆಸುತ್ತಿರುವ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿಯವರರಾದ ವಿನಯ ಬಿದಿರೆಯವರು ಸನ್ಮಾನ್ಯ ವೇಣುಗೋಪಾಲ್ ರವರಿಗೆ ಎಸದಿರುವ ಸವಾಲನ್ನು ಕಾಂಗ್ರೇಸ್ ಉಸ್ತುವಾರಿ ಸ್ವೀಕರಿಸಲಿ.
ವೇಣುಗೋಪಾಲ್ ರವರು ಕೇವಲ ರಾಜ್ಯದ ಕಾಂಗ್ರೇಸ್ ಉಸ್ತುವಾರಿ, ಅವರು ಆ ನಿಟ್ಟಿನಲ್ಲಿ ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಪ್ರಯತ್ನಿಸಲಿ. ಶೈಕ್ಷಣಿಕ ಸಂಸ್ಥೆಗಳಲ್ಲಿ ಅನಗತ್ಯ ಮೂಗು ತೂರಿಸಿ ಗೊಂದಲ ಸೃಷ್ಟಿ ಮಾಡಿದಲ್ಲಿ ಅಥವಾ ಶೈಕ್ಷಣಿಕ ಸಂಸ್ಥೆಗಳ ಮೂಲಕ ವಿದಾರ್ಥಿಗಳ ಮೇಲೆ ರಾಜಕೀಯ ಪ್ರಚೇದನೆ ಮಾಡುವುದನ್ನು ಹಾಗೂ ರಾಜಕೀಯ ಅಧಿಕಾರದ ಮೂಲಕ ಶಿಕ್ಷಕ ಶಿಕ್ಶಕೇತರರ ಸಿಬ್ಬಂದಿಗಳ ಮೇಲೆ ಅನಗತ್ಯ ಒತ್ತಡ ಹೇರುವುದನ್ನು ಕಟುವಾಗಿ ಖಂಡಿಸಿದ್ದಾರೆ.