Home Mangalorean News Kannada News ಶೋಭಾ ಕರಂದ್ಲಾಜೆಗೆ ಕರಾವಳಿ ಜಿಲ್ಲೆಗಳಿಗೆ ಪ್ರವೇಶ ನೀಡದಿದ್ದರೆ ಶಾಂತಿ ಸ್ಥಾಪನೆ ಸಾಧ್ಯ – ಸಿದ್ದರಾಮಯ್ಯ

ಶೋಭಾ ಕರಂದ್ಲಾಜೆಗೆ ಕರಾವಳಿ ಜಿಲ್ಲೆಗಳಿಗೆ ಪ್ರವೇಶ ನೀಡದಿದ್ದರೆ ಶಾಂತಿ ಸ್ಥಾಪನೆ ಸಾಧ್ಯ – ಸಿದ್ದರಾಮಯ್ಯ

Spread the love

ಶೋಭಾ ಕರಂದ್ಲಾಜೆಗೆ ಕರಾವಳಿ ಜಿಲ್ಲೆಗಳಿಗೆ ಪ್ರವೇಶ ನೀಡದಿದ್ದರೆ ಶಾಂತಿ ಸ್ಥಾಪನೆ ಸಾಧ್ಯ – ಸಿದ್ದರಾಮಯ್ಯ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ, ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕರಾವಳಿ ಜಿಲ್ಲೆಗಳಿಗೆ ಪ್ರವೇಶಿಸದಂತೆ ನಿರ್ಬಂಧಿಸಿದರೆ ಅಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ. ಸುಳ್ಳು ಹೇಳಿಕೆಯಿಂದ ಕೋಮುದ್ವೇಷ ಪ್ರಚೋದಿಸಿದ ಪ್ರಕರಣಗಳ ಇತಿಹಾಸವೇ ಇವರಿಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ತಮಗೆ ಮಂಗಳೂರಿನಲ್ಲಿ ಪೌರತ್ವ [ತಿದ್ದುಪಡಿ] ಕಾಯ್ದೆ ಪ್ರತಿಭಟನೆ ಸಂದರ್ಭದಲ್ಲಿ ಅಮಾಯಕರನ್ನು ಗೋಲಿಬಾರ್ ನಲ್ಲಿ ಹತ್ಯೆಯಾದ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವಾನ ಹೇಳಲು ಅವಕಾಶ ನೀಡದ ಸರಕಾರದ ಕ್ರಮದ ಕುರಿತು ಸಿದ್ದರಾಮಯ್ಯ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೋಮುಗಲಭೆಗೆ ಪ್ರಚೋದನೆ ನೀಡುತ್ತಾ ಬಂದಿರುವ ಶೋಭಾ ಕರಂದ್ಲಾಜೆ ಅವರನ್ನು ಜೊತೆಯಲ್ಲಿ ಕಟ್ಟಿಕೊಂಡು ಮಂಗಳೂರಿಗೆ ಹೋಗುತ್ತಾರೆ, ನಮ್ಮನ್ನು ಅಲ್ಲಿಗೆ ಹೋಗದಂತೆ ನಿರ್ಬಂಧಿಸುತ್ತಾರೆ. ಮುಖ್ಯಮಂತ್ರಿಗಳ ಉದ್ದೇಶ ಏನು? ಶಾಂತಿ ಸ್ಥಾಪನೆಯೇ? ಶಾಂತಿ ಕದಡುವುದೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಪೊಲೀಸರು ತಮ್ಮ ಮಂಗಳೂರು ಭೇಟಿಗೆ ಅವಕಾಶ ನೀಡದೇ ತಮ್ಮ ಸ್ವಾತಂತ್ರ್ಯವನ್ನು ಕಿತ್ತುಕೊಂಡಿದ್ದಾರೆ. ನೊಂದವರಿಗೆ ಸಾಂತ್ವನ ಹೇಳಲು ಸಹ ಅವಕಾಶ ನೀಡುತ್ತಿಲ್ಲ. ನಿನ್ನೆಯಿಂದ ಎರಡು ಬಾರಿ ಭೇಟಿಗೆ ಯತ್ನಿಸಿದ್ದರೂ ಅವಕಾಶ ಕೊಡಲಿಲ್ಲ‌. ಡಿ.22ರವರೆಗೂ ಮಂಗಳೂರಿಗೆ ಬರದಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಡಿ 23 ರ‌ ಸೋಮವಾರ ಮತ್ತೆ ಮಂಗಳೂರಿಗೆ ಭೇಟಿ ನೀಡುವುದಾಗಿ ಸ್ಪಷ್ಟಪಡಿಸಿದರು.

ಇಬ್ಬರು ಗೋಲಿಬಾರ್ ಗೆ ಬಲಿಯಾಗಿದ್ದಾರೆ. ಹತ್ಯೆ ಮಾಡುವ ಉದ್ದೇಶದಿಂದ ಗುಂಡು ಹಾರಿಸಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ನಿಜಕ್ಕೂ ಗೋಲಿಬಾರ್ ಮಾಡುವ ಅವಶ್ಯಕತೆಯಿತ್ತೇ? ಕಾನೂನು ಪರಿಸ್ಥಿತಿಯನ್ನು ಸುಗಮಗೊಳಿಸಲು ಹಲವು ದಾರಿಗಳಿವೆ. ಸರ್ಕಾರ ಹಾಗೂ ಪೊಲೀಸರು ತಮ್ಮ ತಪ್ಪು ಮುಚ್ಚಿಕೊಳ್ಳುವುದಕ್ಕಾಗಿ ತಮಗೆ ಮಂಗಳೂರು ಭೇಟಿಗೆ ಅವಕಾಶ ಕೊಡುತ್ತಿಲ್ಲ. ಆದರೆ ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮಂಗಳೂರು ಭೇಟಿಗೆ ಮಾತ್ರ ಅವಕಾಶ ಕೊಡುತ್ತಾರೆ. ಅಲ್ಲಿನ ಪರಿಸ್ಥಿತಿ ಸರಿಯಿಲ್ಲ ಎಂದು ಹೇಳುವ ಪೊಲೀಸರು ಇವರಿಗೇಕೆ ಅವಕಾಶ ಕೊಟ್ಟಿದ್ದಾರೆ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾವು ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಲಾಟಿಚಾರ್ಚ್ ಮಾಡಿಸಿರಲಿಲ್ಲ. ಕೇಂದ್ರದ ಮಂತ್ರಿ ಗುಂಡು ಹಾರಿಸಿ ಎಂದು ಇಲ್ಲಿನ ಪೊಲೀಸರಿಗೆ ಮತ್ತು ಸರ್ಕಾರಕ್ಕೆ ಸೂಚಿಸುತ್ತಾರೆ. ಇದು ಪ್ರಜಾಪ್ರಭುತ್ವ ಸಂವಿಧಾನ ಬಾಹಿರ ನಡೆ. ಹೀಗಾಗಿ ಕೇಂದ್ರ ಕಂಡಲ್ಲಿ ಗುಂಡಿಕ್ಕಿ ಎಂದು ಸೂಚಿಸಿದ ಕೇಂದ್ರ ಸಚಿವ ಸುರೇಶ್ ಅಂಗಡಿ ವಿರುದ್ಧ ಕ್ರಮಜರುಗಿಸಬೇಕು ಎಂದು ಒತ್ತಾಯಿಸಿದರು.

ಮಂಗಳೂರಿಗೆ ಬರದಂತೆ ತಮಗೆ ನೊಟೀಸ್ ನೀಡಿದ್ದಾರೆ. ರೈಲು, ಬಸ್ಸು, ಕಾರಿನಲ್ಲಿ ಬರದಂತೆಯೂ ಸೂಚಿಸಿದ್ದಾರೆ. ಇದೆಲ್ಲ ನೋಡಿದರೆ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ? ವಿರೋಧ ಪಕ್ಷ ಇರುವುದು ಏಕೆ ಎಂಬ ಪ್ರಶ್ನೆ ಮೂಡುತ್ತದೆ ಎಂದರು.

ಕೊಪ್ಪಳ, ಬೀದರ್ ತುಮಕೂರಿನಲ್ಲಿ ಯಾವುದೇ ಗಲಾಟೆಯಾಗುತ್ತಿಲ್ಲ. ಆದರೂ ಅಲ್ಲಿ ನಿಷೇಧಾಜ್ಞೆ ಜಾರಿ ಏಕೆ? ಎಂದು ಕಿಡಿಕಾರಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಆಡಳಿತದಲ್ಲಿ ದಕ್ಷತೆ ಇಲ್ಲದೇ ಇರುವುದೇ ಇದಕ್ಕೆಲ್ಲ ಕಾರಣ. ಸರ್ಕಾರ ಕಾನುನು ಪರಿಸ್ಥಿತಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ನಾವು ನಿರ್ಬಂಧ ಹೇರಿರಲಿಲ್ಲ. ಎಲ್ಲರ ಭೇಟಿಗೂ ಅವಕಾಶ ಕೊಟ್ಟಿದ್ದೆವು. ಕಾವೇರಿ ಗಲಾಟೆಯಲ್ಲಿ ಮಾತ್ರ 144 ನಿಷೇಧಾಜ್ಞೆ ಹಾಕಲಾಗಿತ್ತು. ಅದೂ ಸಹ 24 ತಾಸು ಮಾತ್ರ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಪೊಲೀಸರೇ ಗೋಲಿಬಾರ್ ಮಾಡುತ್ತಾರೆ ಎಂದ ಮೇಲೆ ಗೃಹ ಸಚಿವರ ಅವಶ್ಯಕತೆಯಾದರೂ ಏಕೆ? ಇದೆಲ್ಲದಕ್ಕೂ ಸದನದಲ್ಲಿ ಉತ್ತರ ಕೊಡುವುದು ಪೊಲೀಸರೋ ಅಥವಾ ಗೃಹ ಸಚಿವರೋ. ಒಟ್ಟಾರೆ ಸಚಿವ ಬಸವರಾಜ್ ಬೊಮ್ಮಾಯಿ ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಗೋಲಿಬಾರ್ ಘಟನೆ ಬಗ್ಗೆ ತಕ್ಷಣ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದರು.


Spread the love

Exit mobile version