ಶೋಭಾ ಕರಂದ್ಲಾಜೆ ಅವರನ್ನು ಗೆಲ್ಲಿಸುವುದು ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ – ಪ್ರಮೋದ್ ಮಧ್ವರಾಜ್
ಕೊಪ್ಪ: ಉಡುಪಿ– ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದಲ್ಲಿ, ದೇಶದಲ್ಲೇ ಮಾದರಿ ಜಿಲ್ಲೆಗಳನ್ನಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇನೆ ಎಂದು ಕಾಂಗ್ರೆಸ್– ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಕೊಪ್ಪ ಪುರಭವನದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಮೈತ್ರಿ ಸಮಾವೇಶದಲ್ಲಿ ಅವರು ಮಾತನಾಡಿದರು. ‘ನಮ್ಮ ದೇಶಪ್ರೇಮವನ್ನು ಇನ್ನೊಬ್ಬರು ಪ್ರಶ್ನಿಸುವ ಹಾಗಿಲ್ಲ. ದೇವಸ್ಥಾನಗಳ ಅಭಿವೃದ್ಧಿಗೆ ಒತ್ತುಕೊಟ್ಟಿದ್ದೇನೆ. ಗೋಶಾಲೆ ನಡೆಸುತ್ತಿದ್ದೇನೆ. ಶೋಭಾ ಕರಂದ್ಲಾಜೆ ಅವರನ್ನು ಗೆಲ್ಲಿಸುವುದು ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ. ಅವರು ಮಾಡಿರುವ ಅಭಿವೃದ್ಧಿ ಕುರಿತು ಜನರಿಗೇ ಹೆಚ್ಚು ಗೊತ್ತಿದೆ. ಆದ್ದರಿಂದ ಮೋದಿ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.
ರಾಜ್ಯ ಜೆಡಿಎಸ್ ಘಟಕದ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಮಾತನಾಡಿ, ‘ಮೋದಿ ಇನ್ನೊಮ್ಮೆ ಪ್ರಧಾನಿಯಾದರೆ, ದೇಶದ ಏಕತೆಗೆ ಧಕ್ಕೆ ಒದಗಲಿದೆ. ಮೋದಿ ಆಡಳಿತಕ್ಕೂ ಮುನ್ನ 12 ಬಾರಿ ಸರ್ಜಿಕಲ್ ಸ್ಟ್ರೈಕ್ ಆಗಿತ್ತು. ಆದರೆ, ಅಂದಿನ ಪ್ರಧಾನಿಗಳು ಯಾರೂ ರಾಜಕೀಯಕ್ಕೆ ಈ ವಿಷಯವನ್ನು ಬಳಸಿರಲಿಲ್ಲ’ ಎಂದರು.
ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ‘ಮೋದಿ ಕೊಟ್ಟ ಭರವಸೆಗಳು ಈಡೇರಲಿಲ್ಲ. ಚೌಕೀದಾರ್ ಎಂದು ಹೇಳುವ ಮೋದಿ ಜನ ಸಾಮಾನ್ಯರನ್ನು ಕಾವಲು ಮಾಡುತ್ತಿಲ್ಲ. ಭಯೋತ್ಪಾದಕರ ದಾಳಿಗೆ 44 ಜನ ಸೈನಿಕರ ಪ್ರಾಣವನ್ನೂ ರಕ್ಷಿಸಲಾಗದೇ ಮೋದಿ ವಿಫಲರಾದರು. ಸೈನಿಕರನ್ನು ಪ್ರಚಾರಕ್ಕಾಗಿ ಬಲಿಕೊಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಜಿ. ವೆಂಕಟೇಶ್ ಮಾತನಾಡಿ, ‘ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳು ಜೀವಂತವಾಗಿವೆ. ಗುಡ್ಡಗಾಡು ಪ್ರದೇಶದ ಜನರಿಗೆ ಹಕ್ಕುಪತ್ರ ವಿತರಿಸಲು ಕಾನೂನು ತಿದ್ದುಪಡಿ ಮಾಡುವ ಅನಿವಾರ್ಯತೆ ಇದೆ. ಪ್ರಮೋದ್ ಮಧ್ವರಾಜ್ ಆಯ್ಕೆ ಮುಖ್ಯ. ಈ ನಿಲುವಿನಲ್ಲಿ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ’ ಎಂದರು.
ರಾಜ್ಯ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮೀಗಾ, ಕಾರ್ಕಳ ಮಾಜಿ ಶಾಸಕ ಗೋಪಾಲ್ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ವಿಜಯ ಕುಮಾರ್, ಜಿಲ್ಲಾ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಂ. ಸಂದೀಪ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎಂ. ಸತೀಶ್, ಮುಖಂಡರಾದ ಕಡ್ತೂರು ದಿನೇಶ್, ಭಂಡಿಗಡಿ ದಿವಾಕರ್ ಭಟ್, ಸುಧೀರ್ ಕುಮಾರ್ ಮುರೊಳ್ಳಿ ಇದ್ದರು.