ಶೋಭಾ ಕರಂದ್ಲಾಜೆ ಗೆ ಗಂಡನನ್ನು ಕಳೆದುಕೊಂಡ ನೋವಿಲ್ಲ: ಮಾಜಿ ಸಚಿವೆ ಉಮಾಶ್ರೀ
ಬೆಂಗಳೂರು: ಐಎಎಸ್ ಅಧಿಕಾರಿ ದಿವಂಗತ ಡಿ.ಕೆ ರವಿ ಹೆಸರು ಬಳಸಿಕೊಂಡವರಿಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳುವ ಮೂಲಕ ಆರ್.ಆರ್ ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರನ್ನು ಮೂದಲಿಸಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕಿಯರು ಒಕ್ಕೊರಲಿನಿಂದ ಹರಿಹಾಯ್ದಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ ಯಾರೂ ಕೂಡ ರಾಜಕೀಯದಲ್ಲಿ ಯಾರ ಹೆಸರು ಬಳಸಿಕೊಳ್ಳದೇ ಗೆದ್ದಿಲ್ಲ. ಕುಸುಮಾ ಅವರು ಡಿ.ಕೆ.ರವಿಯವರನ್ನು ಅಧಿಕೃತವಾಗಿ ಸಪ್ತಪದಿ ತುಳಿದು ಮದುವೆಯಾಗಿದ್ದಾರೆ. ಅವರ ಗಂಡನ ಹೆಸರು ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಲು ಇವರು ಯಾರು. ಇಷ್ಟಕ್ಕೂ ಶೋಭಾ ಕರಂದ್ಲಾಜೆಗೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ನೋವಿನ ಅರಿವಿಲ್ಲ ಎಂದರು.
ಶೋಭಾ ಕರಂದ್ಲಾಜೆ ಅವರಿಗೆ ತಮ್ಮ ತಂದೆ ನೋವಿನ ಬಗ್ಗೆ ಅರಿವಿರಬಹುದು. ಆದರೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ಏಕಾಂಗಿತನ, ಅವರ ನೋವು ಇವರಿಗೆ ಅರ್ಥವಾಗುವುದಿಲ್ಲ ಎಂದು ಟೀಕಿಸಿದರು.
ಶೋಭಾ ಕರಂದ್ಲಾಜೆ ಹೆಣ್ಣು ಮಕ್ಕಳ ನೋವಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಅಭಿವೃದ್ಧಿ ಮಾಡಲಾಗದೆ ಜನರನ್ನು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ರಾಜಕೀಯ ಮಾಡಿಕೊಂಡು ಬರುತ್ತಿದ್ದಾರೆ. ರಾಜಕೀಯವಾಗಿ ಯಾವ ಹೆಣ್ಣು ಚುನಾವಣೆಗೆ ನಿಲ್ಲಬಾರದೆಂಬ ಯಾವುದೇ ಕಟ್ಟುಪಾಡುಗಳು ಇಲ್ಲ. ಗಂಡ ಬಿಟ್ಟವರು, ವಿಧವೆಯಾದವರು ಚುನಾವಣೆಗೆ ನಿಲ್ಲಬಾರದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಹೇಳಿಲ್ಲ. ಬಿಜೆಪಿಯ ಭೇಟಿ ಬಚಾವೊ-ಭೇಟಿ ಫಡಾವೋ ಎನ್ನುವ ಯೋಜನೆಯೇ ಸುಳ್ಳು. ಇಂತಹ ಯೋಜನೆಗಳಿಂದ ಯಾವುದೇ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲು ಆಗುವುದಿಲ್ಲ. ಆರ್.ಆರ್.ನಗರದಲ್ಲಿ ಬಿಜೆಪಿ ನಾಯಕರು ಸೋಲುವ ಭೀತಿಯಿಂದ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಉಮಾಶ್ರೀ ಹೇಳಿದರು.
ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಶೋಭಾ ಬಹಳ ದಿನಗಳ ನಂತರ ಮಾತನಾಡಿದ್ದಾರೆ. ಇಡೀ ದೇಶದಲ್ಲಿ ಅತ್ರಾಸ್ ಅತ್ಯಾಚಾರದ ವಿಚಾರದಲ್ಲಿ ಮಾತನಾಡಲಾಗುತ್ತಿದೆ. ಆದರೆ ಸಂದರ್ಭದಲ್ಲಿ ಶೋಭಾ ಅವರಿಗೆ ಈ ವಿಷಯದಲ್ಲಿ ಮಾತನಾಡಲು ಸಮಯವಿಲ್ಲ. ಅತ್ಯಾಚಾರ ಮಾಡುವವರ ಪುರುಷತ್ವ ಹರಣ ಮಾಡಬೇಕು ಎನ್ನುತ್ತಿದ್ದ ಶೋಭಾ ಕರಂದ್ಲಾಜೆ ಅವರ ಆಕ್ರೋಶ ಎಲ್ಲಿ ಮಾಯವಾಗಿದೆ ಎಂದು ಖಾರವಾಗಿ ಪ್ರಶ್ನಿಸಿದರು.
ರಾಜಕೀಯಕ್ಕಾಗಿ ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ವಿಷಯದಲ್ಲಿ ಶೋಭಾ ಕರಂದ್ಲಾಜೆ ಅನಗತ್ಯವಾಗಿ ಮಾತನಾಡಿದ್ದಾರೆ. ಶೋಭಾ ಆಡಿರುವ ಮಾತುಗಳು ಮಹಿಳಾ ಕುಲಕ್ಕೆ ಅವಮಾನ ತರುತ್ತದೆ. ಉಪಚುನಾವಣೆಯಲ್ಲಿ ಕುಸುಮಾ ಗೆ ಟಿಕೆಟ್ ಕೊಟ್ಟಿರುವುದು ಮಹಿಳೆಯರಿಗೆ ಒಂದು ಹೆಮ್ಮೆ. ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿರುವ ಈ ಪಕ್ಷದಲ್ಲಿ ಮಹಿಳೆ ಉಪ ಚುನಾವಣೆ ಅಭ್ಯರ್ಥಿಯಾಗಿರುವುದು ಮಹಿಳೆಯರಿಗೆ ಸಂದ ಗೌರವವಾಗಿದೆ. ಸಾವಿನಲ್ಲಿ ರಾಜಕೀಯ ಮಾಡುತ್ತಿರುವವರು ಶೋಭಾ, ಕುಸುಮಾ ಡಿ.ಕೆ.ರವಿ ಹೆಸರು ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಿ ಹೆಣ್ಣು ಕುಲಕ್ಕೆ ಅವಮಾನವಾಗುವ ರೀತಿ ಮಾತನಾಡಿದ್ದಾರೆ ಎಂದರು.
ಗಂಡ ಸತ್ತ ನಂತರ ಮಹಿಳೆ ಸಮಾಜದಲ್ಲಿ ಮುಂಚೂಣಿಗೆ ಬರಬಾರದೇ? ಮನೆಯಲ್ಲಿಯೇ ಇರಬೇಕೇ?ಎಂದು ಪ್ರಶ್ನಿಸಿದ ಪುಷ್ಪಾ ಅಮರನಾಥ್ ಬಿಜೆಪಿಯ ಮನುಸ್ಮೃತಿಯ ಮನಸ್ಥಿತಿಯನ್ನು ಶೋಭಾ ತೋರಿಸಿದ್ದಾರೆ. ಇದನ್ನು ರಾಜರಾಜಶ್ವರಿ ನಗರದ ಮಹಿಳೆಯರು ಗಂಭೀರವಾಗಿ ಪರಿಗಣಿಸಿ ಬಿಜೆಪಿಗೆ ಪಾಠ ಕಲಿಸಬೇಕು ಎಂದರು.
ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಶೋಭಾಕರಂದ್ಲಾಜೆ ಒಬ್ಬ ಮಹಿಳೆಯಾಗಿ ಮತ್ತೊಬ್ಬ ಮಹಿಳೆಯ ಬಗ್ಗೆ ಈ ರೀತಿ ಮಾತನಾಡುವುದು ಕೇಳಿ ಬೇಸರವಾಗಿದೆ. ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಬೇಕು ಎನ್ನುವ ಬೇಡಿಕೆ ಸಂಸತ್ತಿನಲ್ಲಿಯೇ ಇದೆ. ವಿಧಾನಸಭೆಯಲ್ಲಿ ನಾವು ಕೇವಲ ಶೇ 4 ರಷ್ಟಿದ್ದೇವೆ. ನಮಗೇನು ಅರ್ಹತೆ ಇಲ್ಲವೇ? ನಾವೇನು ಕೆಲಸ ಮಾಡೊದಿಲ್ಲವೇ ? ಇಡೀ ದೇಶ ಹತ್ರಾಸ್ ಘಟನೆ ಖಂಡಿಸಿ ದೇಶಾದ್ಯಂತ ಹೋರಾಟ ನಡೆಸುತ್ತಿದೆ. ಇದನ್ನು ಎಲ್ಲರೂ ಬಹಿರಂಗವಾಗಿ ಖಂಡಿಸಬೇಕು.
ಸಂಸತ್ತಿನಲ್ಲಿ ಶೋಭಾ ನಮ್ಮ ರಾಜ್ಯದ ಸಮಸ್ಯೆ ಬಗ್ಗೆ ಒಂದೇ ಒಂದು ವಿಷಯ ಮಾತನಾಡಿಲ್ಲ. ನಿರ್ಭಯಾ ಫಂಡ್ ಬಗ್ಗೆ ಶೋಭಾ ಧ್ಬನಿ ಎತ್ತಿಲ್ಲ. ಈಗ ರಾಜಕೀಯಕ್ಕಾಗಿ ಮಾತ್ರ ಕುಸುಮಾ ಅವರ ಬಗ್ಗೆ ಮಾತನಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ? ಡಿ.ಕೆ.ರವಿ ಜೊತೆ ಸಪ್ತಪದಿ ಈಕೆ ತುಳಿದಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ರವಿ ಅವರನ್ನು ಕಳೆದುಕೊಂಡು ಕುಸುಮಾಗೆ ನೋವಾಗಿದೆ ಎಂದರು.
ಎಐಸಿಸಿ ವಕ್ತಾರೆ ಐಶ್ವರ್ಯಾ ಮಹದೇವ್ ಮಾತನಾಡಿ, ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರುವುದೇ ಅಪರೂಪ. ಯಾವುದೇ ಪಕ್ಷದಲ್ಲಿ ಬಂದರೂ ಉತ್ತಮವೇ. ಕುಸುಮಾಗೆ ರಾಜಕೀಯ ಅನಿವಾರ್ಯತೆ ಇರಲಿಲ್ಲ. ತಮ್ಮ 31 ವರ್ಷಕ್ಕೆ ಪತಿಯನ್ನು ಕಳೆದುಕೊಂಡು ಸಮಾಜಸೇವೆ ಮಾಡಬೇಕೆಂದು ರಾಜಕೀಯಕ್ಕೆ ಬಂದವರು. ಅಂತವರ ಬಗ್ಗೆ ಶೋಭಾ ಅವಹೇಳನ ಮಾಡುವುದು ಸರಿಯಲ್ಲ. ಹುನ್ನಾವ್ ಕೇಸ್ ಬಗ್ಗೆ ಶೋಭಾ ಕರಂದ್ಲಾಜೆ ಏಕೆ ಮಾತನಾಡಲಿಲ್ಲ. ಹತ್ರಾಸ್ ಅತ್ಯಾಚಾರದಲ್ಲಿ ಏಕೆ ಬಾಯಿ ಬಿಡಲಿಲ್ಲ. ಬೇಟಿ ಬಚಾವ್, ಬೇಟಿ ಪಡಾವೋ ಎಂದು ಬರಿ ಬಾಯಿ ಮಾತಿಗೆ ಎನ್ನುತ್ತಾರೆ. ಹೆಣ್ಣುಮಗಳ ಮೇಲೆ ಇಂತಹ ಹೇಳಿಕೆ ಕೊಡುತ್ತಾರೆ.ಶೋಭಾ ಕರಂದ್ಲಾಜೆ ಶವದ ಮೇಲೆ ರಾಜಕೀಯ ಮಾಡುವುದನ್ನು ಬಿಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.