ಶೋಭಾ ಮತ್ತು ಸದಾನಂದ ಗೌಡ ನನ್ನ ಮತ್ತು ಖಾದರ್ ವಿರುದ್ದ ಚುನಾವಣೆಗೆ ನಿಂತು ಗೆಲ್ಲಲಿ : ರಮಾನಾಥ್ ರೈ

Spread the love

ಶೋಭಾ ಮತ್ತು ಸದಾನಂದ ಗೌಡ ನನ್ನ ಮತ್ತು ಖಾದರ್ ವಿರುದ್ದ ಚುನಾವಣೆಗೆ ನಿಂತು ಗೆಲ್ಲಲಿ : ರಮಾನಾಥ್ ರೈ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬುದ್ದಿವಂತರ ಜಿಲ್ಲೆ ಎಂದು ಹೆಸರಾಗಿದ್ದರೂ ಕೂಡ ಕೆಲವೊಂದು ವರುಷಗಳಿಂದ ಕೆಟ್ಟ ವಿಷಯಗಳಿಗಾಗಿ ಸುದ್ದಿಯಾಗುತ್ತಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಚುನಾವಣಾ ಪೂರ್ವದಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೆರಿಸಿದ್ದು, ಇದನ್ನು ವಿರೋಧ ಪಕ್ಷಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಜಿಲ್ಲೆಯಲ್ಲಿ ಕೆಲವೊಂದು ಕೋಮು ಸಂಘಟನೆಗಳು ಜಿಲ್ಲೆಯ ಶಾಂತಿ ಕೆಡಹುವ ಕೆಲಸ ಮಾಡುತ್ತಿವೆ. ಜಿಲ್ಲೆಯಲ್ಲಿ ಕೆಲವೊಂದು ಕೋಮು ಪ್ರಚೋದಿತ ಹಿಂಸಾಚಾರಗಳು ಎರಡು ಕಡೆಯ ಸಂಘಟನೆಗಳಿಂದ ನಡೆಯುತ್ತಿವೆ. ಆದರೂ ಈ ಹಿಂಸೆಗಳಲ್ಲಿ ಕಾಂಗ್ರೆಸಿನ ಯಾವೋಬ್ಬ ಕಾರ್ಯಕರ್ತರು ಕೂಡ ಭಾಗವಹಿಸಿಲ್ಲ ಆದರೂ ಕೂಡ ವಿರೋಧ ಪಕ್ಷಗಳು ಸುಳ್ಳು ವದಂತಿಗಳನ್ನು ಹಬ್ಬಿಸುವ ಕೆಲಸ ಮಾಡುತ್ತಿವೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಸಚಿವ ಸದಾನಂದ ಗೌಡ, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಮಾಜಿ ಮುಖ್ಯಮಂತ್ರಿ ಯಡ್ಯೂರಪ್ಪ ಬೆಂಗಳೂರಿನಲ್ಲಿ ಕುಳಿತುಕೊಂಡು ಕಾಂಗ್ರೆಸ್ ಪಕ್ಷ ಕೋಮು ಹಿಂಸಾಚಾರವನ್ನು ಬೆಂಬಲಿಸುತ್ತದೆ ಎಂದು ಆರೋಪಿಸುತ್ತಿದ್ದಾರೆ. ಕಾಂಗ್ರೆಸ್ ಒಂದು ಜಾತ್ಯಾತೀತ ಪಕ್ಷವಾಗಿದ್ದು, ಸದಾ ಕೋಮು ಸೌಹಾರ್ದತೆಗಾಗಿ ಶ್ರಮಿಸುತ್ತದೆ. ವಿರೋಧ ಪಕ್ಷಗಳು ತಮ್ಮ ಬೆರಳನ್ನು ನಮ್ಮ ಕಡೆ ತೋರಿಸುತ್ತವೆ ಆದರೆ ಅವರು ಜಿಲ್ಲೆಯಲ್ಲಿ ಶಾಂತಿ ಸ್ಥಾಪನಗೆ ಏನೂ ಕೂಡ ಮಾಡಿಲ್ಲ. ಅಲ್ಲದ ಅವರ ಪ್ರಚೋದನಾಕಾರಿ ಭಾಷಣಗಳಿಂದ ಜಿಲ್ಲೆಯ ಶಾಂತಿ ಸೌಹಾರ್ದತೆ ಧಕ್ಕೆಯನ್ನು ಉಂಟು ಮಾಡಿದ್ದಾರೆ. ಜಿಲ್ಲೆಯ ಜನತೆ ಶಾಂತಿಯಿಂದ ಬದುಕುವುದರೊಂದಿಗೆ ಸುಳ್ಳು ಸುದ್ದಿಗೆ ಕಿವಿಗೊಡಬಾರದು. ಜುಲೈ 13 ರಂದು ಶಾಂತಿ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದೆ ಎಂದರು.

ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕಾಗಿ ಜಿಲ್ಲೆಯಲ್ಲಿ ಸೆಕ್ಷನ್ ತೆಗೆದಿರುವುದು ಘರ್ಷಣೆಗೆ ಕಾರಣ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ ಅವರಿಗೆ ಅದರ ಬಗ್ಗೆ ಮಾಹಿತಿ ಇಲ್ಲದೆ ಮಾತನಾಡಿದ್ದಾರೆ. ಸೆಕ್ಷನ್ 144 ಮಂಗಳೂರು ನಗರಕ್ಕೆ ಹಾಕಿರಲಿಲ್ಲ ಬದಲಾಗಿ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಹಾಕಲಾಗಿತ್ತು. ಜಲೀಲ್ ಕರೋಪಾಡಿ ಕೊಲೆ ಸಂದರ್ಭದಲ್ಲಿ ಯಾವುದೇ ಮೆರವಣಿಗೆ ಆಯೋಜಿಸಿರಲಿಲ್ಲ ಆದರೆ ಶರತ್ ಅವರು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುವಾಗ ಕಲ್ಲಡ್ಕ ಪ್ರಭಾಕರ ಭಟ್ ಸೆಕ್ಷನ್ ನಡುವೆ ಸಂಭ್ರಮಾಚರಣೆ ಮಾಡಿದ್ದಾರೆ. ಯಾರೇ ಆದರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಆದರೆ ಈಗ ಸಂಘ ಪರಿವಾರದವರು ಕಲ್ಲು ತೂರಾಟಕ್ಕೆ ಸಂಬಂಧಿಸಿ ಕೇಸುಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ. ಪೋಲಿಸರು ತಮ್ಮ ಕೆಲಸವನ್ನು ನಿಷ್ಟೆಯಿಂದ ಮಾಡಿದ್ದಾರೆ. ಕಾನೂನು ಉಲ್ಲಂಘಿಸಿದವರ ವಿರುದ್ದ ಪೋಲಿಸರು ಕ್ರಮ ಕೈಗೊಂಡಿರುವುದು ಸರಿಯಾಗಿದೆ. ಮಾಚಿ ಸಚಿವರೊಬ್ಬರು ಜಿಲ್ಲೆಯಲ್ಲಿ ಶಾಂತಿ ಕಾಪಾಡಬೇಕಾದರೆ ರಮಾನಾಥ ರೈ ಜಿಲ್ಲೆ ಬಿಟ್ಟು ಹೋಗಬೇಕು ಎಂದಿದ್ದಾರೆ. ನನಗೆ ಜಿಲ್ಲೆ ಬಿಟ್ಟು ಹೋದರೆ ನಿಲ್ಲಲು ಬೇರೆಲ್ಲಿಯೂ ಮನೆ ಇಲ್ಲ. ನನಗಿರುವುದು ಕೇವಲ ಒಂದೇ ಒಂದು ಮನೆ. ನಾನು ಬೆಂಗಳೂರಿನಲ್ಲಿ ಕೂಡ ಹೆಚ್ಚಿನ ಸಮಯ ಇರುವುದಿಲ್ಲ ನನಗೆ ನನ್ನ ಊರಿನಲ್ಲಿ ಮಾತ್ರ ಒಂದೆ ಒಂದು ಮನೆ ಇರುವುದು ಆದರೆ ಬಿಜೆಪಿ ನಾಯಕರಿಗೆ ಎಲ್ಲಿ ಹೋದರೂ ಅಲ್ಲಿ ಅವರಿಗೆ ಮನೆ ಇದೆ. ಶೋಭಾ ಮತ್ತು ಸದಾನಂದ ಗೌಡರ ಆದಾಯದ ಕುರಿತು ತನಿಖೆ ನಡೆಸಿದರೆ ಸತ್ಯ ಹೊರಬರಲಿದೆ.

ಅಶ್ರಫ್ ಕಲಾಯಿ ಮತ್ತು ಶರತ್ ಅವರ ಕೊಲೆ ನನಗೆ ತುಂಬಾ ನೋವು ತಂದಿದೆ. ವಿನಾಯಕ ಬಾಳಿಗ, ಹರೀಶ್ ಪೂಜಾರಿ, ಪ್ರವೀಣ್ ಪೂಜಾರಿ ಕೊಲೆ ನಡೆದಾಗಿ ಬಿಜೆಪಿಗರು ಯಾಕೆ ಪ್ರತಿಭಟಿಸಲಿಲ್ಲ? ಅವರೇನು ಹಿಂದೂಗಳಲ್ಲವೆ? ಕಾರ್ತಿಕ್ ರಾಜ್ ಅವರ ಕೊಲೆ ನಡೆದಾಗ ಅವರು ಪ್ರತಿಭಟಿಸಿದರು ಆದರೆ ಅವರ ಕೊಲೆ ಕುಟುಂಬಿಕರಿಂದಲೇ ನಡೆದಿರುವುದು ಎಂದು ತಿಳಿದಾಗ ಪ್ರತಿಭಟನೆ ನಿಲ್ಲಿಸಿದರು. ಆರೋಪಿಗಳಿಗೆ ಕಾನೂನಿನ ವ್ಯಾಪ್ತಿಯಲ್ಲಿ ಗರಿಷ್ಠ ಶಿಕ್ಷೆ ನೀಡುವಲ್ಲಿ ಪ್ರಯತ್ನಿಸುತ್ತಿದ್ದೇನೆ. ಒಂದು ವೇಳೆ ನಾನು ತಪ್ಪು ಮಾಡಿದರೆ ನನಗೂ ಶಿಕ್ಷೆಯಾಗಲಿ ಎಂದರು.

ಶೋಭಾ ಕರಂದ್ಲಾಜೆ ನನ್ನ ಹಾಗೂ ಖಾದರ್ ವಿರುದ್ದ ಯಾವುದೇ ವಿಷಯವಿಲ್ಲದೆ ಆರೋಪಿಸುತ್ತಿದ್ದಾರೆ. ಕೇವಲ ಕೊಳಕು ರಾಜಕೀಯ ಮಾಡುವ ಬದಲು ಶೋಭಾ ಮತ್ತು ಸದಾನಂದ ಗೌಡ ಅವರು ನನ್ನ ಹಾಗೂ ಖಾದರ್ ವಿರುದ್ದ ಚುನಾವಣೆಗೆ ನಿಂತು ಗೆಲ್ಲಲಿ. ಆಗ ನೋಡೋಣ ಯಾರು ಗೆಲ್ಲಲಿದ್ದಾರೆ ಎಂದು ಸವಾಲು ಹಾಕಿದರು.


Spread the love