ಶ್ರದ್ಧಾಭಕ್ತಿಯಿಂದ ಜರುಗಿದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ

Spread the love

ಶ್ರದ್ಧಾಭಕ್ತಿಯಿಂದ ಜರುಗಿದ ಉಡುಪಿ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ

ಉಡುಪಿ: ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ವಾರ್ಷಿಕ ಪರಮ ಪ್ರಸಾದದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವ ಸಾವಿರಾರು ಭಕ್ತಾದಿಗಳ ಉಪಸ್ಥಿತಿಯೊಂದಿಗೆ ರವಿವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ನಲ್ಲಿ ಶ್ರದ್ಧಾಭಕ್ತಿಯಿಂದ ಜರಗಿತು.

ಪರಮಪ್ರಸಾದ ಮೆರವಣಿಗೆ ಹಾಗೂ ಕ್ರಿಸ್ತರಾಜರ ಮಹೋತ್ಸವದ ಪ್ರಧಾನ ಬಲಿಪೂಜೆಯ ನೇತೃತ್ವ ವಹಿಸಿದ್ದ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಭಕ್ತಾಧಿಗಳಿಗೆ ಸಂದೇಶ ನೀಡಿದರು.

ನಾವು ತೋರಿಸುವ ಪ್ರೀತಿ ಕೇವಲ ತೋರ್ಪಡಿಕೆಯಾಗಿರದೆ ಅದನ್ನು ಕಾರ್ಯದ ಮೂಲಕ ಮಾಡಿ ತೋರಿಸುವಂತಿರ ಬೇಕು. ಪ್ರೀತಿ ಮತ್ತು ಸೇವೆ ಕ್ರೆಸ್ತ ಧರ್ಮದ ಮೂಲ ತತ್ತ್ವವಾಗಿದ್ದು, ಅದನ್ನು ನಮ್ಮ ನೆರೆಹೊರೆಯವರಲ್ಲಿ ತೋರ್ಪಡಿಸಲು ಹಿಂಜರಿಯಬಾರದು. ನಮ್ಮ ಜೀವನದಲ್ಲಿ ಕ್ಷಮೆ ಪ್ರಿತಿ, ಸೇವೆಯ ಮೂಲಕ ದೈವ ಸಾಮ್ರಾಜ್ಯವನ್ನು ಕಟ್ಟುವಲ್ಲಿ ಪಣತೊಡು ವಂತಾಗ ಬೇಕು ಎಂದು ಧರ್ಮಾಧ್ಯಕ್ಷರು ಕರೆ ನೀಡಿದರು.

ಪವಿತ್ರ ಬಲಿಪೂಜೆಯ ಬಳಿಕ ಧರ್ಮಗುರು ವಂ.ವಿಲ್ಸನ್ ಡಿಸೋಜಾ ಪರಮ ಪ್ರಸಾದ ಆರಾಧನೆಯನ್ನು ನೆರವೇರಿಸಿದರು. ಬಳಿಕ ಪರಮಪ್ರಸಾದವನ್ನು ವಿಶೇಷವಾಗಿ ಅಲಂಕರಿಸಲ್ಪಟ್ಟ ತೆರೆದ ವಾಹನದಲ್ಲಿ ರಾಜಬೀದಿಯಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ದು ಸಂತೆಕಟ್ಟೆ ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಮೈದಾನದಲ್ಲಿ ಬಹಿರಂಗ ಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು.

ಮೆರವಣಿಗೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತಾದಿಗಳು ನಗರದ ರಸ್ತೆಗಳಲ್ಲಿ ದೇವರನ್ನು ಮಹಿಮೆಪಡಿಸುತ್ತಾ, ಆರಾಧಿಸುತ್ತಾ, ಬ್ಯಾಂಡ್-ಸಂಗೀತ ಮತ್ತು ಭಕ್ತಿ ಗೀತೆಗಳೊಂದಿಗೆ, ಜನಸಾಮನ್ಯರಿಗೆ ಅಡಚಣೆಯನ್ನುಂಟು ಮಾಡದೆ ಎರಡು ಸಾಲುಗಳಲ್ಲಿ ಸಾಗಿತು.

ಈ ವೇಳೆ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಧರ್ಮಗುರು ವಂ| ಡಾ|ಜೆನ್ಸಿಲ್ ಆಲ್ವಾ ಪವಿತ್ರ ಬೈಬಲ್ ವಾಚನ ಮಾಡಿ ಅದರ ಮೇಲೆ ಪ್ರವಚನ ನೀಡಿ ಪರಮ ಪ್ರಸಾದವು ನಮ್ಮನ್ನು ಯೇಸುವಿನೊಂದಿಗೆ ಒಂದಾಗಿಸುವುದರೊಂದಿಗೆ ಸಮುದಾಯದೊಂದಿಗೆ ಬದುಕಲು ಕರೆನೀಡುತ್ತದೆ. ನಾವೆಲ್ಲರೂ ಯೇಸುವಿನೊಂದಿಗೆ ಸಾಗುವ ಭರವಸೆಯ ಯಾತ್ರಿಕರಾಗಿದ್ದು ಪರಸ್ಪರ ಸಹಬಾಳ್ವೆ, ಇತರರ ಅಗತ್ಯಗಳಿಗೆ ಸ್ಪಂದಿಸುವುದರೊಂದಿಗೆ, ಇನ್ನೊಬ್ಬರ ನೋವು ನಲಿವಿನಲ್ಲಿ ಸಹಭಾಗಿಯಾಗಲು ಕರೆ ನೀಡುತ್ತದೆ. ಕ್ರೈಸ್ತ ವಿಶ್ವಾಸದಂತೆ ಪರಮ ಪ್ರಸಾದದಲ್ಲಿನ ಯೇಸು ಸ್ವಾಮಿಯನ್ನು ಸಂದಿಸುವುದರೊಂದಿಗೆ ನಮ್ಮ ಪರಿಸರದಲ್ಲಿ ಭರವಸೆಯನ್ನು ಹಂಚಲು ಯೇಸುಸ್ವಾಮಿ ಪ್ರತಿಯೊಬ್ಬರಿಗೂ ಕರೆನೀಡುತ್ತಾರೆ.

ಆಧ್ಯಾತ್ಮಿಕ ಜೀವನದಲ್ಲಿ ದೇವರೊಂದಿಗೆ ಹತ್ತಿರದ ಸಂಬಂಧವನ್ನು ಏರ್ಪಡಿಸಲು ತೀರ್ಥ ಯಾತ್ರೆಗಳು ಹೇಗೆ ಸಹಾಯವಾಗುತ್ತವೋ ಅದೇ ರೀತಿಯಲ್ಲಿ ಪರಮ ಪ್ರಸಾದವು ಪ್ರತಿಯೊಬ್ಬರಿಗೂ ಕೂಡ ನಿರಾಶೆಯಲ್ಲಿ ಇರುವ ಜನರಿಗೆ ಭರವಸೆಯನ್ನು ಮೂಡಿಸುತ್ತದೆ. ಈ ನಿಟ್ಟಿನಲ್ಲಿ ಜುಬಿಲಿ ವರುಷ 2025 ಪ್ರೇರಣಾದಾಯಾಕವಾಗುವುದರೊಂದಿಗೆ ಹೊಸ ಹುರುಪನ್ನು ಮೂಡಿಸಲು ಸಾಧ್ಯವಾಗಲಿದೆ ಎಂದರು.

ಉಡುಪಿ ಧರ್ಮಪ್ರಾಂತ್ಯವ್ಯಾಪ್ತಿಯ ಚರ್ಚ್ಗಳಿಂದ ಸುಮಾರು 3000ಕ್ಕೂ ಅಧಿಕ ಮಂದಿ ಭಕ್ತಾದಿಗಳು, 60ಕ್ಕೂ ಅಧಿಧಕ ಧರ್ಮ ಗುರುಗಳು, 100ಕ್ಕೂ ಅಧಿಕ ಧರ್ಮಭಗಿನಿಯರು ಭಾಗವಹಿಸಿದ್ದರು.

ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ವಂ.ಡಾ.ರೋಶನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಡೆನಿಸ್ ಡೆಸಾ, ಶಿರ್ವ, ಕಾರ್ಕಳ, ಉಡುಪಿ ವಲಯಗಳ ಪ್ರಧಾನ ಧರ್ಮಗುರುಗಳಾದ ವಂ.ಡಾ.ಲೆಸ್ಲಿ ಡಿಸೋಜ, ವಂ.ಆಲ್ಬನ್ ಡಿಸೋಜಾ, ವಂ. ಚಾರ್ಲ್ಸ್ ಮಿನೇಜಸ್, ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ. ರೋಕ್ ಡೇಸಾ, ಸಹಾಯಕ ಧರ್ಮಗುರು ಒಲಿವರ್ ನಜ್ರೆತ್, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನ ಸಹಾಯಕ ಧರ್ಮ ಗುರು ವಂ|ಪ್ರದೀಪ್ ಕಾರ್ಡೊಜಾ, ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಅರೋಝಾ ಉಪಸ್ಥಿತರಿದ್ದರು.

ಮೌಂಟ್ ರೋಸರಿ ಚರ್ಚಿನಲ್ಲಿ ನಡೆದ ಆರಾಧನೆಯ ವಿಧಿಯನ್ನು ವಂ|ಸಿರಿಲ್ ಲೋಬೊ ಭಕ್ತಿಯುತವಾಗಿ ನಡೆಸಿದರು. ಪ್ರೀಯಾ ಫುರ್ಟಾಡೊ ಧನ್ಯವಾದ ಸಮರ್ಪಿಸಿದರು

2025 ವರುಷ ಕ್ರಿಸ್ತ ಜಯಂತಿ ಸಾಮಾನ್ಯ ಜುಬಿಲಿ ವರುಷವಾಗಿದ್ದು ಪೋಪ್ ಫ್ರಾನ್ಸಿಸ್ ಅವರು ಈ ಮಹೋತ್ಸವಕ್ಕೆ ನೀಡಿದ ಧ್ಯೇಯ ವ್ಯಾಕ್ಯ ಭರವಸೆಯ ಯಾತ್ರಿಗಳು. ನಾವು ಬದುಕುವ ಜಗತ್ತು ಯುದ್ದ, ದ್ವೇಷ, ವಿಭಜನೆ ಸ್ವಾರ್ಥ ಎಂಬ ನಿರಾಶೆಯ ಕಾರ್ಮೋಡಗಳನ್ನು ಹುಟ್ಟು ಹಾಕಿದ್ದು ಇಂತಹ ಆಶಾರಹಿತ ವಾತಾವರಣದಲ್ಲೂ ಯೇಸು ಕ್ರಿಸ್ತರಲ್ಲಿ ಭರವಸೆಯಿಟ್ಟು ಪ್ರೀತಿ, ವಿಶ್ವಾಸ, ಸಹಬಾಳ್ವೆಯ ವಾತಾವರಣವನ್ನು ಸೃಷ್ಠಿಸಲು ಕರೆ ನೀಡುವ ವರುಷವಾಗಿದೆ.

ವಂ|ಡೆನಿಸ್ ಡೆಸಾ, ಪಿಆರ್ ಓ ಉಡುಪಿ ಧರ್ಮಪ್ರಾಂತ

Click Here To View More Photos


Spread the love