ಶ್ರೀರೂರು ಸ್ವಾಮೀಜಿ ರಾಜಕೀಯ ಪ್ರವೇಶ ನನಗೆ ಮೊದಲೇ ತಿಳಿದಿರಲಿಲ್ಲ: ಪ್ರಮೋದ್ ಮಧ್ವರಾಜ್
ಉಡುಪಿ: ಶೀರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಶ್ರೀಪಾದರು ರಾಜಕೀಯಕ್ಕೆ ಬರುವ ಬಗ್ಗೆ ಯಾವುದೇ ಪೂರ್ವಸೂಚನೆ ನನಗೆ ಗೊತ್ತಿರಲಿಲ್ಲ. ಈ ಬಗ್ಗೆ ದೇವರ ಸಾಕ್ಷಿಯಾಗಿ ಹೇಳಬಲ್ಲೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಶ್ರೀರೂರು ಶ್ರೀಗಳು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಅದಕ್ಕೆ ನಾನು ಅವರಿಗೆ ವಂದನೆ ಸಲ್ಲಿಸುತ್ತೇನೆ. ನನಗೂ ಅವರ ಬಗ್ಗೆ ಅಪಾರವಾದ ಗೌರವವಿದೆ. ಅವರ ರಾಜಕೀಯ ಸೇರ್ಪಡೆಯ ವಿಚಾರ ನನಗೆ ಗೊತ್ತೇ ಇರಲಿಲ್ಲ. ಮಾಧ್ಯಮಗಳಲ್ಲಿ ನೋಡಿ ತಿಳಿದ್ದೇನೆ. ಫೋನ್ ಮಾಡಿ ಮಾತನಾಡಿದ್ದು, ಹನುಮಂತನ ಪ್ರೇರಣೆಯಿಂದ ರಾಜಕೀಯಕ್ಕೆ ಪ್ರವೇಶ ಮಾಡುವುದಾಗಿ ಸೂಚಿಸಿದ್ದಾರೆ. ಈ ಬಗ್ಗೆ ಯಾವುದೇ ಪೂರ್ವಸೂಚನೆ ನನಗೆ ಗೊತ್ತೇ ಇರಲಿಲ್ಲ. ದೇವರ ಸಾಕ್ಷಿಯಾಗಿ ಹೇಳುತ್ತೇನೆ. ನಾನು ವಿಚಾರವನ್ನು ಅಡಗಿಸಿಟ್ಟು ರಾಜಕೀಯ ಮಾಡುವುದಿಲ್ಲ ಎಂದರು. ಶ್ರೀಗಳು ನನ್ನ ಪರವಿದ್ದಾರೆ. ಹಾಗಿರುವಾಗ ರಾಜಕೀಯಕ್ಕೆ ಪ್ರವೇಶ ಮಾಡಿ ಎಂದು ಹೇಳುವಷ್ಟು ಮೂರ್ಖ ನಾನಲ್ಲ ಎಂದರು.
ಚುನಾವಣೆ ಜನರ ತೀರ್ಮಾನಕ್ಕೆ ಬಿಟ್ಟ ವಿಚಾರ. ಅವರು ನೀಡುವ ತೀರ್ಮಾನಕ್ಕೆ ನಾವು ತಲೆಬಾಗಲೇ ಬೇಕಾಗುತ್ತದೆ. ಉಡುಪಿಯ ಕ್ಷೇತ್ರದ ಜನತೆ ಬಹಳ ಬುದ್ಧಿವಂತರು. ಅದಕ್ಕಾಗಿ ನಾನು ನಂ.1 ಸ್ಥಾನದಲ್ಲಿದ್ದೇನೆ. ಜನ ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧನಿದ್ದೇನೆ ಎಂದರು.
ರಾಹುಲ್ ಉಡುಪಿ ಭೇಟಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರು ಮೊದಲ ಸುತ್ತಿನಲ್ಲಿ ಕಾರವಾರದಲ್ಲಿ ಕಾರ್ಯಕ್ರಮ ಮುಗಿಸಿ ಕಾಪುವಿನಲ್ಲಿ ಆರಂಭಿಸಿ ಮಂಗಳೂರಿನಲ್ಲಿ ಅಂತ್ಯ ಮಾಡುತ್ತಾರೆ. ಬಳಿಕ 2ನೇ ಹಂತದಲ್ಲಿ ಉಡುಪಿ, ಕುಂದಾಪುರ ಹಾಗೂ ಬೈಂದೂರು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳಿದ್ದಾರೆ. ಈ ಸಲುವಾಗಿ ಅವರು ಮೊದಲ ಭೇಟಿ ಸಂದರ್ಭ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡುವುದಿಲ್ಲ ಎಂದರು.