ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಸಜ್ಜುಗೊಂಡ ಉಡುಪಿ

Spread the love

ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಟ್ಲಪಿಂಡಿ ಸಜ್ಜುಗೊಂಡ ಉಡುಪಿ

ಉಡುಪಿ: ದುಷ್ಟರ ಶಿಕ್ಷೆ, ಶಿಷ್ಟರ ರಕ್ಷೆಗಾಗಿ ಅವತರಿಸಿದ ಶ್ರೀಕೃಷ್ಣನ ಜನ್ಮಾಷ್ಟಮಿಯ ಸಂಭ್ರಮ, ಉಲ್ಲಾಸ ದೇಗುಲ ನಗರಿ ಉಡುಪಿಯಲ್ಲಿ ಗರಿಗೆದರಿದೆ. ಕೃಷ್ಣನೂರು ಉಡುಪಿಯಲ್ಲಿ ನಾಡಹಬ್ಬ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ ಆರಂಭಗೊಂಡಿದೆ. ಸೆ.2ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಸೆ.3ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಶ್ರೀಕೃಷ್ಣಮಠದಿಂದ ಭಕ್ತರಿಗೆ ಹಾಗೂ ಚಿಣ್ಣರ ಸಂತರ್ಪಣೆಯ ಶಾಲಾ ಮಕ್ಕಳಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮದಲ್ಲಿ ಉಂಡೆ, ಚಕ್ಕುಲಿ ಪ್ರಸಾದ ನೀಡಲಾಗುತ್ತದೆ. ಅದಕ್ಕಾಗಿ 1 ಲಕ್ಷ ಚಕ್ಕುಲಿ, 50 ಸಾವಿರ ಉಂಡೆ ತಯಾರಿಸಲಾಗಿದೆ. ಗುರುವಾರ ಬೆಳಗ್ಗೆ ಅನ್ನಬ್ರಹ್ಮದಲ್ಲಿ 100ಕ್ಕೂ ಹೆಚ್ಚು ಬಾಣಸಿಗರಿಂದ ಚಕ್ಕುಲಿ, ಗುಂಡಿಟ್ಟು ಲಾಡು, ಅರಳುಂಡೆ, ನೆಲಕಡ್ಲೆ ಲಾಡು, ಹೆಸರಿಟ್ಟು ಲಾಡು, ಕಡ್ಲೆ ಹಾಗೂ ಎಳ್ಳು ಉಂಡೆ, ಶುಂಠಿ, ಗೋಡಂಬಿ ಲಾಡು ತಯಾರಾಗಿದೆ. ತಲಾ 50 ಸಾವಿರದಂತೆ ಗುಂಡಿಟ್ಟು ಹಾಗೂ ಅರಳಿಟ್ಟು ಉಂಡೆ ತಯಾರಿಸಲಾಗಿದೆ.

ಅಷ್ಟಮಿಯಂದು ಕೃಷ್ಣ ದೇವರಿಗೆ ಸಮರ್ಪಿಸಲು ಲಡ್ಡಿಗೆಗಳನ್ನು ತಯಾರಿಸಲಾಗುತ್ತದೆ. ಇದಕ್ಕೆ ಸೆ.2ರಂದು ಬೆಳಗ್ಗೆ 9.30ಕ್ಕೆ ಭೋಜನ ಶಾಲೆಯಲ್ಲಿ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ರಥಬೀದಿಯಲ್ಲಿ ಆಕರ್ಷಕ ಮಂಟಪ ಸಹಿತ ಗುರ್ಜಿಗಳು ಸಿದ್ಧವಾಗಿದ್ದು ಹಾಲು, ಮೊಸರು, ಓಕುಳಿ ತುಂಬಿ ಒಡೆಯಲು ಮಡಕೆಗಳೂ ರೆಡಿಯಾಗಿವೆ. ಅಷ್ಟಮಿ ಮೂಡೆ ತಯಾರಿಗಾಗಿ ಕೇದಗೆ ಒಲಿ ಖೊಟ್ಟೆ ಮಾರಾಟ ರಥಬೀದಿಯಲ್ಲಿ ಭರದಿಂದ ಸಾಗಿದೆ. ಅಷ್ಟಮಿಯಲ್ಲಿ ಮಕ್ಕಳನ್ನು ಸೆಳೆಯುವ ಪೇಟ್ಲವೂ ಕಾಯಿ ಸಹಿತವಾಗಿ ಮಾರಾಟಕ್ಕೆ ಸಿದ್ಧವಾಗಿದೆ.

ಪರ್ಯಾಯ ಪಲಿಮಾರು ಶ್ರೀಗಳ ನೇತೃತ್ವದಲ್ಲಿ ಸೆ.2ರಂದು ಬೆಳಗ್ಗೆ ಮಹಾಪೂಜೆ ನಡೆಯಲಿದೆ. ಸಹಸ್ರ ವಿಷ್ಣು ಪಾರಾಯಣ, ಲಕ್ಷ ತುಳಸಿ ಅರ್ಚನೆ ಶ್ರೀಕೃಷ್ಣನಿಗೆ ಸಮರ್ಪಣೆಯಾಗಲಿದೆ. ವಸಂತ ಮಂಟಪದಲ್ಲಿ 10 ಗಂಟೆಗೆ ಮಹಿಳಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯರಾತ್ರಿ 11.48ಕ್ಕೆ ಶ್ರೀಕೃಷ್ಣದೇವರಿಗೆ ಅರ್ಘ್ಯ ಪ್ರದಾನ ನಡೆಯಲಿದೆ. ಸೆ.3 ರಂದು ಬೆಳಗ್ಗೆ ಮಹಾಪೂಜೆ, ಮಧ್ಯಾಹ್ನ ಭಕ್ತರಿಗೆ ವಿಶೇಷ ಹಾಲು ಪಾಯಸದ ಅನ್ನಸಂತರ್ಪಣೆ ನಡೆಯಲಿದೆ. 3.30ಕ್ಕೆ ಶ್ರೀಕೃಷ್ಣನ ಮಣ್ಣಿನ ಮೂರ್ತಿಯೊಂದಿಗೆ ಬೃಹತ್ ಶ್ರೀಕೃಷ್ಣ ಲೀಲೋತ್ಸವ ಮೆರವಣಿಗೆ ವಿಟ್ಲಪಿಂಡಿ ಸಂಭ್ರಮ ನಡೆಯಲಿದೆ. ಭಕ್ತಜನ ಗೊಲ್ಲರ ವೇಷ ಧರಿಸಿ ಮೊಸರು ಕುಡಿಕೆ ಒಡೆದು ಶ್ರೀ ಕೃಷ್ಣನ ಜನನದ ಸಂಭ್ರಮಾಚರಣೆ ಮಾಡಲಿದ್ದಾರೆ.

ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರು ಕೊಡಗಿನಲ್ಲಿ ಮಳೆಯಿಂದ ಉಂಟಾದ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಸರಳವಾಗಿ ಆಚರಣೆ ಮಾಡಿದರೂ ವರ್ಷಪ್ರತಿ ನಡೆಯುವ ಕಾರ್ಯಕ್ರಮಗಳು ಯಥಾಪ್ರಕಾರ ನಡೆಯಲಿದೆ ಎಂದರು.

ಈಗಾಗಲೇ ಶ್ರೀಕೃಷ್ಣಮಠದಲ್ಲಿ ಮಕ್ಕಳಿಗೆ ಡ್ರಾಯಿಂಗ್, ಮಹಿಳೆಯರಿಗೆ ಹೂ ಕಟ್ಟುವ, ಮೊಸರು ಕಡೆಯುವ, ಮಕ್ಕಳಿಗೆ ಸಂಗೀತ ಸ್ಪರ್ಧೆ ನಡೆದಿದೆ. ಫಲಾನುಭವಿ ಶಾಲೆಗಳ ಮಕ್ಕಳಿಗೆ ಚಿಣ್ಣರ ಸಂತರ್ಪಣೆ ನೀಡಲು ಸಿದ್ಧತೆ ನಡೆದಿದೆ. ಯಾತ್ರಾರ್ಥಿಗಳಿಗೆ ನೀಡುವ ನಿಟ್ಟಿನಲ್ಲಿ ಉಂಡೆ, ಚಕ್ಕುಲಿ ಸಿದ್ಧವಾಗಿದೆ.

ವಿವಿಧೆಡೆ ಮಳೆ ಹಾನಿ ಕಾರಣದಿಂದ ವಿಶೇಷ ಸಿದ್ಧತೆಗಳು ಏನೂ ಇಲ್ಲ. ಸಂಪ್ರದಾಯದಂತೆ 3 ದಿನದ ಕಾರ್ಯಕ್ರಮ ನಡೆಯಲಿದೆ. ಸೆ.1ರಂದು ಸಂಕಲ್ಪ, 2ರಂದು ರಾತ್ರಿ ಅರ್ಘ್ಯಪ್ರದಾನ, 3ರಂದು ವಿಟ್ಲಪಿಂಡಿ ಉತ್ಸವ ಜರುಗಲಿದೆ. ಆಚಾರ್ಯ ಮಧ್ವರು ಜಯಂತಿ ನಿರ್ಣಯ ಗ್ರಂಥ ರಚಿಸಿದ್ದು, ಹೇಗೆ ಕೃಷ್ಣಾಷ್ಟಮಿ ಆಚರಿಸಬೇಕು ಎಂಬುದನ್ನು ವಿವರಿಸಿದ್ದಾರೆ. ಹಿಂದಿನ ವೈಭವಕ್ಕೆ ಕೊರತೆ ಆಗದಂತೆ ಆಚರಿಸುತ್ತೇವೆ ಎಂದರು.


Spread the love