ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಮಧ್ಯರಾತ್ರಿ ಅರ್ಘ್ಯ ಪ್ರದಾನ ನೆರವೇರಿಸಿದ ಈಶಪ್ರಿಯ ತೀರ್ಥ ಸ್ವಾಮೀಜಿ
ಉಡುಪಿ: ಕೊರೋನಾ ನಿಯಮಾವಳಿಯ ನಡುವೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಗುರುವಾರ ರಾತ್ರಿ ಶ್ರೀಕೃಷ್ಣ ಜನ್ಮಾಷ್ಟಮಿ ಯನ್ನು ಸಂಭ್ರಮದಿಂದ ಆಚರಿಸಲಾಯಿತು.
ನಿರ್ಜಲ ಉಪವಾಸದಲ್ಲಿದ್ದ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಬೆಳಗ್ಗೆ ಮತ್ತು ರಾತ್ರಿ ಲಕ್ಷ ತುಳಸಿ ಅರ್ಚನೆ ಯೊಂದಿಗೆ ಮಹಾಪೂಜೆ ನೆರವೇರಿಸಿದರು. ಮಧ್ಯರಾತ್ರಿ 12.16 ಸ್ವಾಮೀಜಿ ಕೃಷ್ಣಾರ್ಘ್ಯ ಪ್ರದಾನ ಮಾಡಿದರು.
ರಾತ್ರಿ ಕೃಷ್ಣ ದೇವರಿಗೆ ತುಳಸಿ ಅರ್ಚನೆ, ಮಹಾಪೂಜೆಯನ್ನು ನೆರವೇರಿಸಿ ನಂತರ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಗರ್ಭಗುಡಿಯೊಳಗೆ ಕೃಷ್ಣ ದೇವರಿಗೆ ಅರ್ಘ್ಯ ನೀಡಿ ಚಂದ್ರೋದಯ ಸಮಯದಲ್ಲಿ (12.16) ತುಳಸೀ ಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ನೀಡಿದರು. ನಂತರ ಭಕ್ತಾದಿಗಳಿಂದ ಅರ್ಘ್ಯಪ್ರಧಾನ ನಡೆಯಿತು.
ಕೊರೋನಾ ಹಿನ್ನಲೆಯಲ್ಲಿ ಭಕ್ತರಿಗೆ ಪ್ರವೇಶ ನಿಷೇಧ ಹಿನ್ನಲೆಯಲ್ಲಿ ಸೀಮಿತಿ ಸಂಖ್ಯೆಯ ಭಕ್ತರು ಕನಕನ ಕಿಂಡಿಯ ಮೂಲಕ ದೇವರ ದರ್ಶನವನ್ನು ಪಡೆದರು.
ಅಷ್ಟಮಿಯ ಹಿನ್ನೆಲೆಯಲ್ಲಿ ಶ್ರೀಕೃಷ್ಣ ಮಠದ ಗರ್ಭಗುಡಿ, ಮಠದ ಸುತ್ತುಪೌಳಿ, ಚಂದ್ರಶಾಲೆ, ತೀರ್ಥ ಮಂಟಪ, ಮಧ್ವಮಂಟಪ, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ ಸಹಿತ ಇಡೀ ಕೃಷ್ಣ ಮಠವನ್ನು ಹೂವಿನ ಅಲಂಕಾರ ಮಾಡಲಾಗಿತ್ತು.
ಶುಕ್ರವಾರ ನಡೆಯುವ ವಿಟ್ಲಪಿಂಡಿ ಉತ್ಸವಕ್ಕೆ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಧ್ಯಾಹ್ನ 12.30ರಿಂದ ಸಂಜೆ 6 ಗಂಟೆಯವರೆಗೆ ಪ್ರವೇಶ ನಿರಾಕರಿಸಲಾಗಿದ್ದು, ಕೇವಲ ಶ್ರೀಕೃಷ್ಣ ಮಠದ ಸಿಬಂದಿಗಳು ಹಾಗೂ ಸ್ವಾಮೀಜಿಗಳು ವಿಟ್ಲಪಿಂಡಿ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.