ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಮೂವರು ಆರೋಪಿಗಳ ಅಪರಾಧ ಸಾಬೀತು
ಮಂಗಳೂರು: ನಗರವನ್ನೇ ಬೆಚ್ಚಿ ಬೀಳಿಸಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದೆ ಎಂದು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ಶುಕ್ರವಾರ ತೀರ್ಪು ನೀಡಿದ್ದಾರೆ.
2019ರ ಮೇ 11ರಂದು ಕುರಿ ಫಂಡ್ ಹಣದ ವಿಷಯದಲ್ಲಿ ಶ್ರೀಮತಿ ಶೆಟ್ಟಿ ಅವರನ್ನು ಅವರ ಮನೆಯಲ್ಲೇ ಹತ್ಯೆಗೈದು ದೇಹವನ್ನು 29 ತುಂಡುಗಳನ್ನಾಗಿ ಮಾಡಿ ನಗರದ ಹಲವು ಕಡೆಗಳಲ್ಲಿ ಬಿಸಾಡಿದ್ದ ಪ್ರಕರಣವಿದು.
ಯಾರು ಅಪರಾಧಿಗಳು?
ನಗರದ ವೆಲೆನ್ಸಿಯಾ ಸಮೀಪದ ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್ ಆಲಿಯಾಸ್ ಜೋನಸ್ ಜೌಲಿನ್ ಸ್ಯಾಮ್ಸನ್ (40), ವಿಕ್ಟೋರಿಯಾ ಮಥಾಯಿಸ್ (47) ಮತ್ತು ಮರಕಡ ತಾರಿಪಾಡಿ ಗುಡ್ಡೆಯ ರಾಜು (34) ಈ ಪ್ರಕರಣದ ಅಪರಾಧಿಗಳು. ಈ ಪೈಕಿ ರಾಜು ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದ. ಆತನನ್ನು ಪೊಲೀಸರು ಮತ್ತೆ ಬಂಧಿಸಿದ್ದಾರೆ. ಜೋನಸ್ ಮತ್ತು ವಿಕ್ಟೋರಿಯಾ ಜೈಲಿನಲ್ಲಿಯೇ ಇದ್ದಾರೆ.
ಹಣ ಕೇಳಲು ಹೋಗಿ ಹೆಣವಾಗಿದ್ದರು
ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ (42) ಅವರು ಅತ್ತಾವರದಲ್ಲಿ ಶ್ರೀ ಪೊಳಲಿ ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದರು. ಜತೆಗೆ ಚಿಟ್‌ಫಂಡ್ ವ್ಯವಹಾರ ನಡೆಸುತ್ತಿದ್ದರು. ಈ ಕುರಿಫಂಡ್‌ನಲ್ಲಿ ಜೋನಸ್ ಸ್ಯಾಮ್ಸನ್ 2 ಸದಸ್ಯತ್ವ ಹೊಂದಿದ್ದು, ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಹಣ ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸುತ್ತಿದ್ದರು. 2019ರ ಮೇ 11ರಂದು ಬೆಳಗ್ಗೆ 9.15ಕ್ಕೆ ಹಣ ಕೇಳುವುದಕ್ಕಾಗಿ ಆರೋಪಿ ಜೋನಸ್ ಸ್ಯಾಮ್ಸನ್‌ನ ಮನೆಗೆ ತೆರಳಿದ್ದರು.
ಅಲ್ಲಿ ಸ್ಯಾಮ್ಸನ್ ಮರದ ಪಟ್ಟಿಯ ತುಂಡಿನಿಂದ ಶ್ರೀಮತಿ ಶೆಟ್ಟಿ ತಲೆಗೆ ಹೊಡೆದಿದ್ದ. ಪ್ರಜ್ಞಾಹೀನರಾಗಿದ್ದ ಶ್ರೀಮತಿ ಶೆಟ್ಟಿ ಯವ ರನ್ನು ಜೋನಸ್ ಮತ್ತು ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದೊಯ್ದು ಹೋಗಿ ಹರಿತವಾದ ಕತ್ತಿಯಿಂದ ಕುತ್ತಿಗೆ ಕೊಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ದೇಹ ವನ್ನು ಒಟ್ಟು 29 ತುಂಡು ಮಾಡಿ ಗೋಣಿ ಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಇಟ್ಟಿದ್ದರು.
ಶಿಕ್ಷೆಯ ಪ್ರಮಾಣ ನಿಗದಿ ಬಾಕಿ
ಜೋನಸ್ ಮತ್ತು ವಿಕ್ಟೋರಿಯಾ ಮೇಲಿನ ಕೊಲೆ, ಸುಲಿಗೆ ಮತ್ತು ಸಾಕ್ಷ್ಯನಾಶ ಆರೋಪಗಳು ಹಾಗೂ ರಾಜು ಮೇಲಿನ ಕೊಲೆಗೆ ಸಹಾಯ, ಕಳವು ಮಾಡಿರುವ ಸೊತ್ತುಗಳನ್ನು ಇಟ್ಟುಕೊಂಡಿರುವ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣದ ಮೇಲಿನ ವಿಚಾರಣೆಯನ್ನು ಸೆ. 17ಕ್ಕೆ ನಿಗದಿಪಡಿಸಲಾಗಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಅವರು ಸಾಕ್ಷಿಗಳನ್ನು ವಿಚಾರಣೆ ಮಾಡಿ ವಾದ ಮಂಡಿಸಿದ್ದರು.
ಹಂದಿ ತುಂಡು ಮಾಡುತ್ತಿದ್ದ ಕೊಲೆಗಾರ
ಆರೋಪಿ ಜೋನಸ್ ಸ್ಯಾಮ್ಸನ್ ಈ ಹಿಂದೆ ಹಂದಿ ಮಾಂಸ ಮಾಡುವ ಕೆಲಸದಲ್ಲಿದ್ದ. ಅಲ್ಲದೆ ಸಂಬಂಧಿಕರೋರ್ವರ ಹತ್ಯೆಯ ಪ್ರಕರಣದ ಆರೋಪಿಯೂ ಆಗಿದ್ದ. ಈತ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ. ಮನೆಯಲ್ಲಿ ಜೋನ್ಸ್ ಸ್ಯಾಮ್ಸನ್ ಮತ್ತು ವಿಕ್ಟೋರಿಯಾ ಮಾತ್ರ ಇದ್ದರು. ಇನ್ನೋರ್ವ ಆರೋಪಿ ರಾಜು, ಜೋನಸ್‌ನ ಗೆಳೆಯನಾಗಿದ್ದ. ಆತನಿಗೆ ಕೊಲೆಯ ವಿಚಾರ ತಿಳಿಸಿ ಶ್ರೀಮತಿ ಶೆಟ್ಟಿ ಅವರ ಕೆಲವು ಆಭರಣಗಳನ್ನು ಆತನಿಗೂ ನೀಡಿದ್ದ. ರಾಜು ಇಬ್ಬರು ಆರೋಪಿಗಳು ಒಂದು ದಿನ ಮನೆಯಲ್ಲಿ ಉಳಿದುಕೊಳ್ಳಲು ಆಶ್ರಯ ನೀಡಿದ್ದ.
ನೆರವಾದ ಸಿಸಿ ಟಿವಿ ದೃಶ್ಯ
ಹತ್ಯೆಯ ದಿನ ಶ್ರೀಮತಿ ಶೆಟ್ಟಿಗೆ ಸೂಟರ್‌ಪೇಟೆಯ ದ್ವಾರದ ಬಳಿ ಜೋನಸ್ ಸಿಕ್ಕಿದ್ದ. ಇದು ಅಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿತ್ತು. ಅದರ ಆಧಾರದಲ್ಲಿ ಬಂಧನ ನಡೆದಿತ್ತು.
ರುಂಡ ಪತ್ತೆಯಿಂದ ಪ್ರಕರಣ ಬೆಳಕಿಗೆ
ಕದ್ರಿ ಬಳಿಯ ಅಂಗಡಿಯೊಂದರ ಬಳಿ ರುಂಡ ಪತ್ತೆಯಾದ ಮೇಲೆ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ನಂದಿಗುಡ್ಡೆಯಲ್ಲಿ ದೇಹದ ತುಂಡುಗಳು ಪತ್ತೆಯಾಗಿ ದ್ದವು. ಈ ಪ್ರಕರಣದಲ್ಲಿ ರಾಜು ಕೂಡ ಸಹಕರಿಸಿದ್ದ. ಮಂಗಳೂರು ಪೂರ್ವ ಠಾಣೆಯ ನಿರೀಕ್ಷಕ ಮಹೇಶ್ ಎಂ. ತನಿಖೆ ಕೈಗೊಂಡಿದ್ದರು. ಫೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿ ಡಾ| ಜಗದೀಶ್ ರಾವ್ ಶವಪರೀಕ್ಷೆ ನಡೆಸಿ ವರದಿ ನೀಡಿದ್ದರು. ಇನ್‌ಸ್ಪೆಕ್ಟರ್ ಶಾಂತಾರಾಂ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು 48 ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿದ್ದು, ಒಟ್ಟು 141 ದಾಖಲೆಗಳನ್ನು ಗುರುತಿಸಲಾಗಿತ್ತು.
ರುಂಡವನ್ನು ಹೆಲ್ಮೆಟ್‌ನೊಳಗಿರಿಸಿದ್ದರು
ಹತ್ಯೆ ನಡೆಸಿ 29 ತುಂಡುಗಳನ್ನಾಗಿ ಮಾಡಿದ್ದ ಜೋನಸ್ ಮತ್ತು ವಿಕ್ಟೋರಿಯಾ ಅದೇ ದಿನ ರಾತ್ರಿ ಆ ತುಂಡುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿದ್ದರು. ಜೋನಸ್ ಆ ತುಂಡುಗಳನ್ನು ರಾತ್ರಿ ಸ್ಕೂಟರ್‌ನಲ್ಲಿ ಕೊಂಡೊಯ್ದು ನಗರದ ಹಲವೆಡೆಗಳಲ್ಲಿ ಇಟ್ಟು ಬಂದಿದ್ದ. ರುಂಡವನ್ನು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಅದನ್ನು ಹೆಲ್ಮೆಟ್‌ನೊಳಗೆ ಇರಿಸಿ ಆ ಹೆಲ್ಮೆಟ್, ಕೈ, ಮಾಂಸದ ತುಂಡುಗಳಿದ್ದ ಗೋಣಿ ಚೀಲವನ್ನು ಕೆಪಿಟಿ ಸಮೀಪದ ಗೂಡಂಗಡಿಯೊಂದರ ಬಳಿ ಇಟ್ಟಿದ್ದ.
ಕಾಲುಗಳನ್ನು ಪದವು ಹಾಸ್ಟೆಲ್‌ವೊಂದರ ಕಾಂಪೌಂಡ್ ಬಳಿ, ಕುತ್ತಿಗೆಯಿಂದ ಸೊಂಟದವರೆಗಿನ ಭಾಗ ಹಾಗೂ ಇತರ ಭಾಗಗಳನ್ನು ನಂದಿಗುಡ್ಡೆ ಶ್ಮಶಾನದ ಬಳಿ ರಸ್ತೆ ಬದಿಯಲ್ಲಿ ಇಟ್ಟಿದ್ದ. ಇತರ ಕೆಲವು ತುಂಡುಗಳನ್ನು ರಸ್ತೆಯ ಮಧ್ಯೆ ಹಾಗೂ ಶ್ಮಶಾನದ ಒಳಗಡೆ ಬಿಸಾಡಿದ್ದ. ಶ್ರೀಮತಿ ಶೆಟ್ಟಿ ಅವರ ವ್ಯಾನಿಟಿ ಬ್ಯಾಗ್ ಮತ್ತು ಚಪ್ಪಲಿಯನ್ನು ಆರೋಪಿಗಳು ಮನೆಯ ಒಲೆಯಲ್ಲಿ ಸುಟ್ಟು ಹಾಕಿದ್ದರು.
ಜೀವಂತವಿದ್ದ ದೇಹ ತುಂಡರಿಸಿದ್ದ ಪಾಪಿಗಳು
ಶ್ರೀಮತಿ ಶೆಟ್ಟಿ ಅವರ ಹಣೆಗೆ ಜೋನಸ್ ಬಲವಾಗಿ ಹೊಡೆದಿದ್ದ. ಆಕೆ ನೆಲಕ್ಕೆ ಬಿದ್ದಾಗ ಆಕೆಯ ಮುಖ ಮತ್ತು ಗಲ್ಲಕ್ಕೆ ಹೊಡೆದು ಪ್ರಜ್ಞಾಹೀನಳನ್ನಾಗಿಸಿದ್ದ. ಬಳಿಕ ವಿಕ್ಟೋರಿಯಾಳ ಸಹಾಯದಿಂದ ಕೋಣೆಯಲ್ಲಿ ಮಲಗಿಸಿ ಶ್ರೀಮತಿ ಶೆಟ್ಟಿಯವರು ಚಲಾಯಿಸಿಕೊಂಡು ಬಂದಿದ್ದ ಸ್ಕೂಟರ್ ಅನ್ನು ನಾಗುರಿಗೆ ಚಲಾಯಿಸಿಕೊಂಡು ಹೋಗಿ ಅಲ್ಲಿ ರಸ್ತೆ ಬದಿ ನಿಲ್ಲಿಸಿ ವಾಪಸ್ ಮನೆಗೆ ಬಂದಿದ್ದ.
ಬೆಳಗ್ಗೆ 11.30ರ ವೇಳೆಗೆ ಬಚ್ಚಲು ಕೋಣೆಗೆ ಎಳೆದುಕೊಂಡು ಹೋಗಿ ಮರದ ಹಲಗೆಯ ಮೇಲಿಟ್ಟು ಹರಿತವಾದ ಕತ್ತಿಯಿಂದ ತುಂಡುಗಳನ್ನಾಗಿ ಮಾಡಿದ್ದ. ಈ ರೀತಿ ತುಂಡು ಮಾಡುವಾಗಲೂ ಶ್ರೀಮತಿ ಶೆಟ್ಟಿ ಅವರ ಪ್ರಾಣ ಹೋಗಿರಲಿಲ್ಲ. ಆದರೂ ಪಾಪಿಗಳು ವಿಕೃತಿ ಮೆರೆದಿದ್ದರು. ಸಾಕ್ಷ್ಯನಾಶಕ್ಕಾಗಿಯೇ ದೇಹವನ್ನು ತುಂಡುಗಳನ್ನಾಗಿ ಮಾಡಿ ಎಸೆದಿದ್ದರು.