ಶ್ರೀರಾಮ ಮಂದಿರ ಭೂಮಿ ಪೂಜೆ ನ್ನೆಲೆ : ಅಯೋಧ್ಯೆಯಲ್ಲಿ ಕರಸೇವಕರಾಗಿ ಪಾಲ್ಗೊಂಡವರಿಗೆ ಗೌರವ ಸನ್ಮಾನ
ಮಂಗಳೂರು: ಅಯೋಧ್ಯೆಯಲ್ಲಿ ಇಂದು ಶ್ರೀರಾಮ ಮಂದಿರ ಭೂಮಿ ಪೂಜೆ ಹಿನ್ನೆಲೆಯಲ್ಲಿ ವಿಶ್ವಹಿಂದು ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ವತಿಯಿಂದ ಕರಸೇವಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಬುಧವಾರ ಬೆಳಗ್ಗೆ ಮಂಗಳೂರಿನ ಕದ್ರಿ ಸಮೀಪವಿರುವ ವಿಶ್ವಹಿಂದು ಪರಿಷತ್ ನ ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಈ ವೇಳೆ ಅಭಿನಂದನೆ ಸ್ವೀಕರಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಅವರು, ದೇಶವನ್ನು ಪೂಜಿಸುವ, ತಾಯಿ ಭಾರತಿಯನ್ನು ಆರಾಧನೆ ಮಾಡುವ ರಾಷ್ಟ್ರದ ಜನರಿಗೆ ಆಗಸ್ಟ್ 15 ಸ್ವಾತಂತ್ರ್ಯ ದಿನವಾಗಿ ಎಷ್ಟು ಪವಿತ್ರವೋ ಅಷ್ಟೇ ಪವಿತ್ರ ಇಂದಿನ ದಿನ ಆಗಸ್ಟ್ 5 ಆಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆದ ಈ ದಿನ, ರಾಮನ ಸ್ವಾತಂತ್ರ್ಯ ದಿನ. ಕರಸೇವಕರಾಗಿ ಕರ್ತವ್ಯ ನಿರ್ವಹಿಸಿದವರಿಗೆ ಇಂದು ರಾಮನ ಸ್ವಾತಂತ್ರ್ಯ ದಿನ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ದೇಗುಲಕ್ಕೆ ಶಿಲಾನ್ಯಾಸ ನಡೆಸುತ್ತಿರುವುದು ಐತಿಹಾಸಿಕ ಕ್ಷಣವಾಗಿದ್ದು, ಭವ್ಯತೆ ಹಾಗೂ ಧನ್ಯತೆ ತುಂಬಿರುವ ದಿನವಾಗಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಭೂಮಿ ಪೂಜೆ ನಡೆದ ಈ ದಿನ ಐತಿಹಾಸಿಕ ದಿನವಾಗಿದ್ದು, ನಮ್ಮ ಜೀವನದ ಅತಿ ಪುಣ್ಯದ ದಿನ ಇದಾಗಿದೆ. ಇಂದು ನಮ್ಮ ಜೀವನ ಪಾವನವಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ವೈ.ಭರತ್ ಶೆಟ್ಟಿ, ಸ್ಥಳೀಯ ಮನಪಾ ಮನೋಹರ್ ಶೆಟ್ಟಿ, ಸದಸ್ಯ ವಿಹಿಂಪ ಮುಖಂಡ ಶರಣ್ ಪಂಪ್ವೆಲ್, ಪ್ರಮುಖರಾದ ಜಗದೀಶ್ ಶೇಣವ, ಅಶಾ ಜಗದೀಶ್ ಹಾಗೂ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.